ಕೋಟ: ನೇತ್ರ ತಪಾಸಣಾ ಉಚಿತ ಶಿಬಿರ, ರಸ್ತೆ ಸುರಕ್ಷಾ ಜಾಗೃತಿ ಜಾಥಾ

KannadaprabhaNewsNetwork |  
Published : Jan 17, 2025, 12:49 AM IST
15ರಸ್ತೆ | Kannada Prabha

ಸಾರಾಂಶ

ಕೋಟದ ಮಾಂಗಲ್ಯ ಮಂದಿರಲ್ಲಿ ಕೋಟ ಪೊಲೀಸ್ ಠಾಣೆ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರಸಾದ ನೇತ್ರಾಲಯ ಉಡುಪಿ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಪ್ರಸ್ತುತ ದಿನಗಳಲ್ಲಿ ರಸ್ತೆ ಅವಘಡಗಳು ಹೆಚ್ಚುತ್ತಿವೆ. ಇದಕ್ಕೆ ಯುವ ಸಮುದಾಯದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಕೊರತೆಯೇ ಕಾರಣ ಎಂದು ಕುಂದಗನ್ನಡದ ರಾಯಭಾರಿ ಮನು ಹಂದಾಡಿ ಹೇಳಿದರು.ಮಂಗಳವಾರ ಕೋಟದ ಮಾಂಗಲ್ಯ ಮಂದಿರಲ್ಲಿ ಕೋಟ ಪೊಲೀಸ್ ಠಾಣೆ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರಸಾದ ನೇತ್ರಾಲಯ ಉಡುಪಿ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟ ವತಿಯಿಂದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ಯುವ ಸಮುದಾಯ ವಾಹನ ಚಾಲನೆ ಮಾಡುವಾಗ ಅತಿ ವೇಗದಿಂದ ಜೀವಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಇದರ ನಷ್ಟ ಮನೆಯವರಿಗೆ ಹೊರತು ಪೊಲೀಸ್‌ ಇಲಾಖೆಗಲ್ಲ. ಪ್ರತಿಬಾರಿ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುವ ಕಾರ್ಯ ಮಾಡಿಯೂ ಪುನಃ ಅದೇ ತಪ್ಪುಗಳು ನಡೆಯುತ್ತಿದೆ. ಇದರ ಬಗ್ಗೆ ಪೋಷಕರೇ ಜಾಗೃತಿ ವಹಿಸುವ ಅಗತ್ಯ ಇದೆ ಎಂದರು.ಕಾರ್ಯಕ್ರಮವನ್ನು ಉಡುಪಿಯ ಪ್ರಸಾದ್ ನೇತ್ರಾಲಯದ ಮುಖ್ಯಸ್ಥ ಡಾ.ಪ್ರಸಾದ್ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಉಡುಪಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ವಹಿಸಿ, ಪೊಲೀಸ್ ಇಲಾಖೆಯ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಮುಖ್ಯ ಅಭ್ಯಾಗತರಾಗಿ ಉಡುಪಿ ಪೋಲಿಸ್ ಇಲಾಖೆಯ ಡಿವೈಎಸ್ ಪಿ.ಡಿ.ಟಿ ಪ್ರಭು, ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್, ಕೋಟ ಪೋಲಿಸ್ ಠಾಣೆಯ ಅಪರಾಧ ದಳದ ಎಸ್ಐ ಸುಧಾ ಪ್ರಭು, ಕೋಟ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಮಾಧವ ಪೈ ಉಪಸ್ಥಿತರಿದ್ದರು. ಕೋಟ ಠಾಣೆಯ ಎಸ್ಐ ರಾಘವೇಂದ್ರ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಪತ್ರಕರ್ತ ಚಂದ್ರಶೇಖರ್ ಬೀಜಾಡಿ ನಿರೂಪಿಸಿ, ವಂದಿಸಿದರು.

ಇದಕ್ಕೆ ಮೊದಲು ರಸ್ತೆ ಸುರಕ್ಷಾ ಜಾಗೃತಿಯ ಅಂಗವಾಗಿ ಕೋಟ ಅಮೃತೇಶ್ವರಿ ಸರ್ಕಲ್ ಬಳಿಯಿಂದ ಜಾಗೃತಿ ಜಾಥಾಕ್ಕೆ ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಚಾಲನೆ ನೀಡಿದರು. ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಚಂದ್ರ ಆಚಾರ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಇದ್ದರು. ಜಾಥಾದಲ್ಲಿ ಇಸಿಆರ್ ಕಾಲೇಜಿನ ವಿದ್ಯಾರ್ಥಿಗಳು, ಪಂಚವರ್ಣ ಸಂಘಟನೆ, ಅಮೃತ ಯುವಕ ಸಂಘ ಸೇರಿದಂತೆ ವಿವಿಧ ಸ್ಥಳೀಯ ಸಂಘಟನೆಗಳು ಭಾಗಿಯಾದವು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ