ಕಾಂಗ್ರೆಸ್‌ ಭವನ ನಿರ್ಮಾಣ ಕೈಬಿಡಿ: ಸಂಸದ ಕೋಟ‌

KannadaprabhaNewsNetwork |  
Published : May 14, 2026, 01:45 AM IST
ಬಿಜೆಪಿಯಿಂದ ಕುಂದಾಪರದಲ್ಲಿ  ಪ್ರತಿಭಟನೆ  | Kannada Prabha

ಸಾರಾಂಶ

ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಸರ್ಕಾರ‌ ಮಂಜೂರುಗೊಳಿಸಿದ ಜಾಗದಲ್ಲಿ ಈ ಹಿಂದೆ ಬಹುಮಹಡಿ‌ ಪಾರ್ಕಿಂಗ್ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಇದೇ ಜಾಗದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡುವ ಆಗ್ರಹಗಳೂ ಕೇಳಿಬಂದಿದ್ದವು. ಪ್ರಸ್ತುತ ಕಾಂಗ್ರೆಸ್‌ ಭವನಕ್ಕೆ ಜಾಗ ಮಂಜೂರುಗೊಳಿಸಿದ ಆದೇಶ ರದ್ದುಗೊಳಿಸಿ ಕಾಂಗ್ರೆಸ್ ಭವನ ನಿರ್ಮಾಣ‌ ಮಾಡುವುದನ್ನು ಕೈಬಿಡಬೇಕು ಎಂದು ಸಂಸದ ಕೋಟ‌ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.‌

ಕುಂದಾಪುರ: ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಸರ್ಕಾರ‌ ಮಂಜೂರುಗೊಳಿಸಿದ ಜಾಗದಲ್ಲಿ ಈ ಹಿಂದೆ ಬಹುಮಹಡಿ‌ ಪಾರ್ಕಿಂಗ್ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಇದೇ ಜಾಗದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡುವ ಆಗ್ರಹಗಳೂ ಕೇಳಿಬಂದಿದ್ದವು. ಪ್ರಸ್ತುತ ಕಾಂಗ್ರೆಸ್‌ ಭವನಕ್ಕೆ ಜಾಗ ಮಂಜೂರುಗೊಳಿಸಿದ ಆದೇಶ ರದ್ದುಗೊಳಿಸಿ ಕಾಂಗ್ರೆಸ್ ಭವನ ನಿರ್ಮಾಣ‌ ಮಾಡುವುದನ್ನು ಕೈಬಿಡಬೇಕು ಎಂದು ಸಂಸದ ಕೋಟ‌ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.‌ಬುಧವಾರ ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ಕುಂದಾಪುರದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಜಾಗ ನೀಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಕುಂದಾಪುರ ಬಿಜೆಪಿ ಮಂಡಲದ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಿಸಲು ಸಾರ್ವಜನಿಕರಿಗೆ ತೊಂದರೆ ಆಗದ ಯಾವುದಾದರೂ ಜಾಗ ಹುಡುಕಿಕೊಳ್ಳಿ. ಆದರೆ ಇಂತಹ ಸರ್ಕಾರಿ ಜಾಗವನ್ನು ಸಾರ್ವಜನಿಕ ಹಿತಾಸಕ್ತಿಗೆ ಬಳಸಬೇಕು ಎಂದರು.ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ನಗರದ ಮಧ್ಯ ಭಾಗದಲ್ಲಿರುವ ಈ ಜಾಗವನ್ನು ಕಾಂಗ್ರೆಸ್ ಕಚೇರಿಗೆ ಸರ್ಕಾರ ನೀಡಿದೆ. ಅಂದಾಜು 4-5 ಕೋ.ರೂ. ಮೌಲ್ಯದ ಜಾಗವನ್ನು ಕೇವಲ 1.75 ಲಕ್ಷ ರೂ.ಗೆ ನೀಡಿದಂತಾಗಿದೆ. ಖಾರ್ವಿಕೇರಿ, ಕೋಡಿಯಲ್ಲಿ 40-50 ವರ್ಷಗಳಿಂದ ವಾಸವಿದ್ದವರಿಗೆ ಇಷ್ಟು ವರ್ಷವಾದರೂ ಹಕ್ಕುಪತ್ರ ಕೊಡಲು ಸಾಧ್ಯವಾಗಿಲ್ಲ. ಇದಕ್ಕೆ ಸರ್ಕಾರ, ಅಧಿಕಾರಿಗಳ ಧೋರಣೆಯೇ ಕಾರಣ. ಕೋಡಿಯಲ್ಲಿ 98 ಜನರಿಗೆ ಹಕ್ಕುಪತ್ರ ಸಿಕ್ಕಿಲ್ಲ. 3 ವರ್ಷದಿಂದ ಹೋರಾಡುತ್ತಿದ್ದೇವೆ. ಆದರೆ ತರಾತುರಿಯಲ್ಲಿ ಈ ಜಾಗ ಮಂಜೂರು ಮಾಡಲಾಗಿದೆ. ಈ ಆದೇಶವನ್ನು ಸರ್ಕಾರ ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟದ ಮೂಲಕವಾದರೂ ತಾರ್ಕಿಕ ಅಂತ್ಯಕ್ಕೆ ಪ್ರಯತ್ನಿಸಲಾಗುವುದು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಬಡವರಿಗೆ ಕೇವಲ ಮೂರು ಸೆಂಟ್ಸ್ ಜಾಗದ ಅರ್ಜಿ ವಿಲೇವಾರಿ ಮಾಡಲು ಈ ಸರ್ಕಾರಕ್ಕೆ, ಅಧಿಕಾರಿಗಳಿಗೆ ಆಗುವುಲ್ಲ. ಆದರೆ ಪಕ್ಷದ ಕಚೇರಿಗೆ ಸರ್ಕಾರಿ ಜಾಗ ಸಿಗುತ್ತದೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.

ಮಂಡಲದ ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಮುಖರಾದ ಐರೋಡಿ ವಿಠಲ ಪೂಜಾರಿ, ಶ್ರೀಶ ಆರ್. ನಾಯಕ್, ಬಾರ್ಕೂರು ಶಾಂತರಾಮ ಶೆಟ್ಟಿ, ಮೋಹನ್ ದಾಸ್ ಶೆಣೈ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್. ಇದ್ದರು‌‌. ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಸ್ವಾಗತಿಸಿದರು. ತಹಸೀಲ್ದಾರ್ ಗೆ ಮನವಿ ಸಲ್ಲಿಕೆ ಪ್ರತಿಭಟನೆ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸರಕಾರಿ ಜಾಗವನ್ನು ಮಂಜೂರು ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕುಂದಾಪುರ ತಹಸೀಲ್ದಾರ್‌ ಪ್ರದೀಪ್ ಕುರ್ಡೇಕರ್ ಅವರಿಗೆ ಮನವಿ ಸಲ್ಲಿಸಲಾಯಿತು‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಬೆಂಬಲಕ್ಕೆ ಸದಾ ಸಿದ್ಧ: ಡಾ.ಆಶಾದೇವಿ ಗುಡಗುಂಟಿ
ಹಿಪ್ಪರಗಿ ಗ್ರಾಮದಲ್ಲಿ ಎಮ್ಮೆ ಕರು ಮೇಲೆ ಚಿರತೆ ದಾಳಿ