ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಡಿವೈಎಸ್‌ಪಿ ಕಚೇರಿಯಲ್ಲಿ ಸೋಮವಾರ ಸಂಜೆ ಹಿಂದೂ ಮುಸ್ಲಿಂ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕಳೆದ ವರ್ಷ ಪಟ್ಟಣದಲ್ಲಿ ಗಣೇಶೋತ್ಸವದ ವೇಳೆ ನಡೆದ ಘಟನೆ ಒಂದು ಕಪ್ಪುಚುಕ್ಕೆಯಾಗಿದೆ. ಅದು ಮರೆಯುವಂತಹ ಘಟನೆಯಾಗಿಲ್ಲ. ಈ ಬಾರಿ ಅಂತಹ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ ಎಂದರು.
ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಸೌಹಾರ್ದತೆ ಹಾಳಾಯಿತು. ಎರಡು ಸಮುದಾಯದ ಮುಖಂಡರು ಹಾಗೂ ಹಿರಿಯರು ಅಹಿತಕರ ಘಟನೆಗಳನ್ನು ಮಾಡುತ್ತಿಲ್ಲ. ಆದರೆ, ಯುವ ಸಮೂಹಕ್ಕೆ, ಮಕ್ಕಳಿಗೆ ಸಾಮರಸ್ಯ ಕಾಪಾಡುವಂತೆ ತಿಳಿ ಹೇಳುವ ಜೊತೆಗೆ ಸೌಹಾರ್ದತೆಯ ಬೀಜವನ್ನು ಬಿತ್ತಬೇಕಿದೆ ಎಂದರು.ಜಿಲ್ಲೆಯಲ್ಲಿ 2-3 ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಮತೀಯ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ನಡೆದುಕೊಳ್ಳುವಂತೆ ಎರಡೂ ಸಮುದಾಯದ ಮುಖಂಡರಿಗೆ ಸೂಚಿಸಲಾಗಿದೆ. ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬುದನ್ನು ಆಯೋಜಕರು ಮೆರವಣಿಗೆ ಸಮಯ ಖಚಿತಪಡಿಸಿದ ನಂತರ ಅಂತಿಮಗೊಳಿಸಲಾಗುತ್ತದೆ ಎಂದರು.
ಗಣೇಶ ಮೆರವಣಿಗೆ ಹಿನ್ನೆಲೆಯಲ್ಲಿ ಅ.17ರ ಶುಕ್ರವಾರ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 6ರ ವರೆಗೆ ಪಟ್ಟಣದ ಸುತ್ತಲಿನ 10 ಕಿ.ಮೀ.ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು. ಆ ದಿನ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಅವಕಾಶವಿರುವುದಿಲ್ಲ ಎಂದು ಡಿಸಿ ಡಾ.ಕುಮಾರ್ ತಿಳಿಸಿದರು.
ಕಳೆದ 2023ರಲ್ಲಿ ಕೋಟೆ ವಿದ್ಯಾಗಣಪತಿ ಮೆರವಣಿಗೆ ಸಂದರ್ಭ ಸಣ್ಣಪುಟ್ಟ ವಾಗ್ವಾದ ನಡೆದಿತ್ತು. ಕಳೆದ ವರ್ಷ ಬದರಿಕೊಪ್ಪಲು ಗಣೇಶೋತ್ಸವದಲ್ಲಿ ಅದು ದೊಡ್ಡಮಟ್ಟಕ್ಕೆ ಹೋಗಿದೆ. ಆದ್ದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲಾ ಕಡೆಗಳಲ್ಲಿ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮಸೀದಿ ದರ್ಗಾಗಳ ಬಳಿ ಪೊಲೀಸ್ ಭದ್ರತೆ ಹಾಕಲಾಗುವುದು. ಮಸೀದಿ ರಕ್ಷಣೆಗೆ ನಿಂತಿದ್ದೀವೆ ಎಂದು ಮುಸ್ಲಿಂ ಸಮುದಾಯದವರು ಗುಂಪು ಕಟ್ಟಿಕೊಂಡು ನಿಲ್ಲುವ ಅಗತ್ಯವಿಲ್ಲ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಭಾವನೆಗಳಿಗೆ ಧಕ್ಕೆ ತರುವ ಮತ್ತು ಪ್ರಚೋದನೆ ನೀಡುವವರಂತಹ ಪೋಸ್ಟ್‌ಗಳು ಅಥವಾ ವಿಡಿಯೋಗಳನ್ನು ಹರಿಬಿಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಸೋಶಿಯಲ್ ಮೀಡಿಯಾಗಳ ಚಲನವಲನ ಪರಿಶೀಲಿಸಲು ಒಂದು ತಂಡ ರಚಿಸಲಾಗಿದೆ. ಯಾರೇ ಪ್ರಚೋದನಕಾರಿ ವಿಡಿಯೋ ಅಥವಾ ಪೋಸ್ಟ್‌ಗಳನ್ನು ಹಾಕಿದರೆ ಅಂತವರ ವಿರುದ್ಧ ಕಾನೂನು ಕ್ರಮಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಟ್ಟಣ ವ್ಯಾಪ್ತಿಯಲ್ಲಿ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿರುವುದರಿಂದ ಮೈಸೂರು ಮತ್ತು ಬೆಳ್ಳೂರು ಕಡೆಗೆ ವಾಹನಗಳು ಸಂಚರಿಸಲು ಒಂದೇ ಮುಖ್ಯ ರಸ್ತೆಯಿದೆ. ಗಣೇಶ ಮೆರವಣಿಗೆ ಮಾರ್ಗಕ್ಕೆ ತಕ್ಕಂತೆ ಮಾರ್ಗ ಬದಲಾವಣೆ ಮಾಡಲಾಗುವುದು ಎಂದರು.