ಕನ್ನಡಪ್ರಭ ವಾರ್ತೆ ಕವಿತಾಳ
ಗ್ರಾಮದಲ್ಲಿ ಅಂದಾಜು ಎರಡು ಸಾವಿರ ಜನಸಂಖ್ಯೆ ಇದೆ, ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರಿದ್ದು ಚರಂಡಿ ವ್ಯವಸ್ಥೆ, ರಸ್ತೆ ಮತ್ತು ವಿಶೇಷವಾಗಿ ವಿದ್ಯುತ್ ಕಂಬಗಳು ಇಲ್ಲದೆ ಕೆಲವು ಮನೆಗಳು ಕತ್ತಲಲ್ಲಿ ಮುಳುಗಿವೆ.
ಗ್ರಾಮದ ಕೆಳಗಡೆ ಓಣಿಯಲ್ಲಿ ವಿದ್ಯುತ್ ಕಂಬಗಳು ದೂರ ದೂರದಲ್ಲಿದ್ದು, ಸುಮಾರು 200-300 ಮೀ. ದೂರದಿಂದ ಮನೆಗಳಿಗೆ ಸರ್ವೀಸ್ ತಂತಿ ಎಳೆದುಕೊಂಡು ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಹೀಗಾಗಿ ಎಲ್ಲೆಂದರಲ್ಲಿ ತಂತಿಗಳು ಜೋತು ಬಿದ್ದಿವೆ.ಅರಣ್ಯ ಇಲಾಖೆ ಅಧಿಕಾರಿಗಳು ಕೆಳಗಡೆ ಓಣಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಮತ್ತು ವಿದ್ಯುತ್ ಕಂಬ ಅಳವಡಿಸಲು ತಕರಾರು ಮಾಡುತ್ತಿದ್ದು, ಕೆಲವು ಕುಟುಂಬಗಳು ಕತ್ತಲಲ್ಲಿಯೇ ಕಾಲ ಕಳೆಯುತ್ತಿವೆ ಎಂದು ಗ್ರಾಮದ ಹನುಮಂತ್ರಯ ಆರೋಪಿಸಿದರು.
ಅರಣ್ಯ ಇಲಾಖೆ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಈ ಜಾಗಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರೂ ಯಾರೊಬ್ಬರೂ ದಾಖಲೆ ನೀಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದಂತ ವಿಷಯ. ಲಕ್ಷಾಂತರ ರು. ವೆಚ್ಚ ಮಾಡಿ ಮನೆ ನಿರ್ಮಿಸಿಕೊಂಡರೆ ಅದನ್ನು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾದರೆ ಬಡ ಕುಟುಂಬಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಕಾರಣ ಸದ್ಯ ಮನೆ ನಿರ್ಮಿಸಿಕೊಳ್ಳಲು ಮುಂದಾಗಬಾರದು ಎಂದು ವಲಯ ಅರಣ್ಯ ಅಧಿಕಾರಿ ಸುರೇಶ ತಿಳಿಸಿದರು.