ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದಸ್ಯರ ವಿರುದ್ಧ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ತೀವ್ರ ಚರ್ಚೆ ನಡೆಯಿತು. ಜನರ ಪರವಾಗಿ ಹೋರಾಟ ಮಾಡುವ ಸದಸ್ಯರ ತೇಜೋವಧೆ ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸಲಾಗುತ್ತಿದೆ ಎಂದು ಕೌನ್ಸಿಲರ್ ಸುಜಿತ್ ಮಾಡೂರು ಆರೋಪಿಸಿದರೆ. ಅಂತಹ ಸುದ್ದಿಗಳಿಗೆ ಪಟ್ಟಣ ಪಂಚಾಯಿತಿ ಆಡಳಿತದಿಂದ ಉತ್ತರಿಸುವ ಅಗತ್ಯವಿಲ್ಲ ಎಂದು ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ ಸಲಹೆ ನೀಡಿದರು.
ವಾರ್ಡ್ ಸದಸ್ಯರ ಗಮನಕ್ಕೆ ತಾರದೆ ಪಟ್ಟಣ ಪಂಚಾಯಿತಿ ಆಡಳಿತ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ಕಾಮಗಾರಿ ಕೈಗೊಳ್ಳುವ ಮೊದಲು ಸಂಬಂಧಪಟ್ಟ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು. ಸದಸ್ಯರ ಗಮನಕ್ಕೆ ತಾರದೆ ನಿರ್ಣಯ ಕೈಗೊಳ್ಳುವುದು ಸರಿಯಲ್ಲ ಎಂದು ಸುಜಿತ್ ಮಾಡೂರು ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ವಾರ್ಡ್ ಅಭಿವೃದ್ಧಿ ಯೋಜನೆ ರೂಪಿಸುವಾಗ ಅಧ್ಯಕ್ಷರು ಹಾಗೂ ಸಮಿತಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳದೆ ಸದಸ್ಯರೊಂದಿಗೆ ಚರ್ಚಿಸಿ ಕಾಮಗಾರಿ ನಡೆಸಬೇಕು ಎಂದು ಹರೀಶ್ ರಾವ್ ಆಗ್ರಹಿಸಿದರು. ಇದಕ್ಕೆ ಎಸ್‌ಡಿಪಿಐ ಸದಸ್ಯೆ ಸಲೀಮಾ ಬಿ., ಇಸಾಕ್ ಸೇರಿದಂತೆ ಹಲವರು ಧ್ವನಿಗೂಡಿಸಿದರು.ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಹಲವಾರು ಸದಸ್ಯರು ಯಾವುದೇ ಪ್ರಶ್ನೆ ಎತ್ತದೆ ಮೌನವಾಗಿದ್ದರು. ಉಪಾಧ್ಯಕ್ಷ ಪ್ರವೀಣ್ ಎ. ಬಗಂಬಿಲ, ಮುಖ್ಯಾಧಿಕಾರಿ ಮಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಉಪಸ್ಥಿತರಿದ್ದರು.
ಬೀದಿ ನಾಯಿಗಳ ಆಶ್ರಯ ತಾಣ: ಬೀದಿ ನಾಯಿಗಳ ಆಶ್ರಯ ತಾಣ ನಿರ್ಮಾಣಕ್ಕೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೌನ್ಸಿಲರ್ ಹರೀಶ್ ರಾವ್ ಮಡ್ಯಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ನಿರೀಕ್ಷಕ ವಿಕ್ರಂ, ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿಯೊಂದು ಸ್ಥಳೀಯ ಸಂಸ್ಥೆ ತನ್ನ ವ್ಯಾಪ್ತಿಯ ಬೀದಿ ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸುವುದು ಕಡ್ಡಾಯ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇಡೀ ತಾಲೂಕಿನ ನಾಯಿಗಳನ್ನು ಇಲ್ಲಿ ತರಲಾದರೆ ಜವಾಬ್ದಾರಿ ಯಾರು ಎಂಬ ಪ್ರಶ್ನೆ ಉದ್ಭವಿಸಬಹುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಅಭಿಪ್ರಾಯಪಟ್ಟರು.ಪಾನೀರ್ ವಾರ್ಡ್‌ನಲ್ಲಿ ಸಮಸ್ಯೆ ಉಂಟಾದಾಗ ಪರಿಶೀಲನೆಗೆ ಕರೆದರೂ ಮುಖ್ಯಾಧಿಕಾರಿ ಬರುವುದಿಲ್ಲ. ಆದರೆ ಅವರು ಬಂದಾಗ ಸದಸ್ಯರಿಗೆ ಮಾಹಿತಿ ನೀಡುವುದಿಲ್ಲ ಎಂದು ಸದಸ್ಯೆ ಸಲೀಮಾಬಿ ಆರೋಪಿಸಿದರು.