ಕೋಟಿ ಡೀಲ್‌: ಅರುಣ್ ಪುತ್ತಿಲ ಧ್ವನಿ ಎನ್ನಲಾದ ಆಡಿಯೋ ವೈರಲ್!

KannadaprabhaNewsNetwork |  
Published : Aug 27, 2024, 01:38 AM IST
ಪುತ್ತಿಲ | Kannada Prabha

ಸಾರಾಂಶ

ಅರುಣ್ ಕುಮಾರ್ ಪುತ್ತಿಲ ಅವರು ಮಹಿಳೆಯೋರ್ವರ ಜೊತೆಗೆ ನಡೆಸಿದ್ದಾರೆ ಎನ್ನಲಾದ ಮೊಬೈಲ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ. ಈ ಆಡಿಯೋ ಬಗ್ಗೆ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದೆ.

ಕನ್ನಡಪ್ರಭವಾರ್ತೆ ಪುತ್ತೂರು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿ ಬಿಜೆಪಿಗೆ ಸಡ್ಡು ಹೊಡೆದು ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ, ಬಳಿಕ ರಾಜ್ಯಮಟ್ಟದಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಂಡಿದ್ದ, ಪುತ್ತೂರು ಬಿಜೆಪಿಯ ಹೀನಾಯ ಸೋಲಿಗೆ ಮುನ್ನುಡಿ ಬರೆದಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಮಹಿಳೆಯೋರ್ವರ ಜೊತೆಗೆ ನಡೆಸಿದ್ದಾರೆ ಎನ್ನಲಾದ ಮೊಬೈಲ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ. ಈ ಆಡಿಯೋ ಬಗ್ಗೆ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದೆ.ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಆಪ್ತರೊಬ್ಬರದ ನಡುವಿನದ್ದು ಎಂದು ಹೇಳಲಾದ ಈ ಮೊಬೈಲ್ ಸಂಭಾಷಣೆ ಇತ್ತೀಚೆಗೆ ಅಂದರೆ ಪುತ್ತೂರು ನಗರ-ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷರ ಆಯ್ಕೆ ನಡೆದ ಬಳಿಕ ನಡೆದ ಹಾಗಿದೆ. ಯಾಕೆಂದರೆ ಈ ಸಂಭಾಷಣೆಯಲ್ಲಿ ಪ್ರಸನ್ನ ಕುಮಾರ್ ಮಾರ್ತ ಅವರಿಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷತೆ ನೀಡಿರುವುದನ್ನು ಪ್ರಸ್ತಾಪಿಸಿರುವ ಮಹಿಳೆ, ಪುತ್ತಿಲಗೆ ಏನೂ ಇಲ್ಲ. ಪುತ್ತಿಲನದ್ದು ಇನ್ನು ಮುಂದೆ ಮುಗಿದ ಅಧ್ಯಾಯ. ಯಾವುದೂ ಸಿಗುವುದಿಲ್ಲ. ಪುತ್ತಿಲ ಇನ್ನು ಮುಂದೆ ಬ್ಯಾನರ್ ಕಟ್ಟಲು ಮಾತ್ರ ಉಪಯೋಗ ಎಂದು ಮೂದಲಿಸುತ್ತಾಳೆ.ಈ ಸಂಭಾಷಣೆಯಲ್ಲಿ ಮೂರುವರೆ ಕೋಟಿ ಡೀಲ್ ಮಾಡಿರುವ ವಿಚಾರವೂ ಸೇರಿಕೊಂಡಿದೆ. ಪುತ್ತಿಲರಲ್ಲಿ ಮಾತನಾಡುತ್ತಾ ನೀವು ಹಣ ಪಡೆದ ಬಗ್ಗೆಯೂ ನನಗೂ ಗೊತ್ತಿದೆ ಎಂದು ಹೇಳುವ ಗೆಳತಿ, ಪುತ್ತಿಲ ಬಿಜೆಪಿಗೆ ರಾಜನ ಹಾಗೇ ಹೋಗಬೇಕಾಗಿತ್ತು. ನಿಮಗೆ ಎಷ್ಟು ಸಲ ನಾನು ಹೇಳಿದ್ದೆ. ನೀವು ಏನು ಮಾಡಿದ್ರಿ.. ಜವಾಬ್ದಾರಿ ಸಿಗದೇ ಇದ್ರೆ ಬಿಜೆಪಿ ಕಚೇರಿಗೆ ಕಾಲು ಇಡುವುದಿಲ್ಲ ಎಂದಿದ್ದ ನೀವು ನಾಚಿಕೆಗೆಟ್ಟು ಈಗ ಅಲ್ಲಿಗೆ ಹೋದ್ರಿ. ಅಕ್ಷರಶಃ ನೀವು ಈಗ ನಾಶವಾಗಿದ್ದೀರಿ ಎಂದು ಕೆಣಕುತ್ತಾಳೆ.ರಾಜಕೀಯದಲ್ಲಿ ಮಾನ ಮರ‍್ಯಾದೆ ಬಿಟ್ಟು ಇದ್ರೆ ಮಾತ್ರ ದೊಡ್ಡ ಜನ ಆಗುತ್ತಾರೆ. ಇಲ್ಲಿ ದೊಡ್ಡ ಜನ ಆದವರೂ ನಾಚಿಕೆ ಮಾನ ಮರ‍್ಯಾದೆ ಬಿಟ್ಟು ಆದವರು ಎನ್ನುವ ಮಾತು ಕೂಡ ಪುತ್ತಿಲದ್ದೆಂದು ಹೇಳಲಾಗುವ ಧ್ವನಿಯಲ್ಲಿದೆ. ಈ ಆಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಇದರ ಬಗ್ಗೆ ಜನರು ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪುತ್ತಿಲ ಪರಿವಾರದ ಯಾರೂ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''