ಕನ್ನಡಪ್ರಭ ವಾರ್ತೆ ಕೊಟ್ಟೂರು
ವೀರಶೈವ ಧರ್ಮದ ಬೃಹತ್ ಧಾರ್ಮಿಕ ಗ್ರಂಥ ಶ್ರೀಸಿದ್ದಾಂತ ಶಿಖಾಮಣಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಗಲು ಕೊಟ್ಟೂರು ಪಟ್ಟಣ 1990ರ ದಶಕದಲ್ಲಿ ಕಾರಣವಾಯಿತು. ತಿಂಗಳೀಡಿ ಕೊಟ್ಟೂರಲ್ಲಿ ಸಿದ್ದಾಂತ ಶಿಖಾಮಣಿಯ ಪ್ರವಚನವನ್ನು ಭಕ್ತರಿಗೆ ಏರ್ಪಡಿಸಿ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದ್ದು ಐತಿಹಾಸಿಕ ಎಂದು ಕಾಶೀ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ಇಲ್ಲಿನ ಚಾನುಕೋಠಿ ಸಭಾಂಗಣದಲ್ಲಿ ಆದಿಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಮತ್ತು ಚಾನುಕೋಟಿ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಷಷ್ಠಿ ಸಂಭ್ರಮ ಕಾರ್ಯಕ್ರಮದ 9ನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಶ್ರೀ ಸಿದ್ದಾಂತ ಶಿಖಾಮಣಿ ಬೃಹತ್ ಗ್ರಂಥ ವೀರಶೈವ ಧರ್ಮದ ಎಲ್ಲಾ ಬಗೆಯ ಆಯಾಮಗಳನ್ನು ಪ್ರತಿಯೊಬ್ಬರಿಗೂ ಪರಿಚಯಿಸುತ್ತದೆ. ಈ ಕಾರಣಕ್ಕಾಗಿ ಸುಮಾರು ದಶಕಗಳಿಗಿಂತಲೂ ಹೆಚ್ಚು ಭಾಷೆಗಳಲ್ಲಿ ಈ ಗ್ರಂಥವನ್ನು ತರ್ಜುಮೆ ಮಾಡಲಾಗಿದೆ. ಇದರ ಜೊತೆಗೆ ರಷ್ಯನ್ ಭಾಷೆಗೂ ಭಾಷಾಂತರ ಮಾಡಿ ಪ್ರಕಟಿಸಲಾಗಿದೆ. ರಷ್ಯನ್ ಭಾಷೆಯಲ್ಲಿನ ಕೆಲ ಭಕ್ತರು ಸಿದ್ದಾಂತ ಮಣಿ ಗ್ರಂಥದ ಪ್ರಭಾವಕ್ಕೆ ಒಳಗಾಗಿ ವೀರಶೈವ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಿತ್ಯ ಇಷ್ಟ ಲಿಂಗ ಪೂಜೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಪ್ರತಿಯೊಬ್ಬರ ಬದುಕು ಧಾರ್ಮಿಕತೆಯ ಸಾರವನ್ನು ಬಳಸಿಕೊಂಡರೆ ಸದಾ ನೆಮ್ಮದಿ, ಸುಖ, ಶಾಂತಿ ಪ್ರಾಪ್ತವಾಗುತ್ತದೆ. ವೀರಶೈವ ರಾದವರು ಪ್ರತಿ ದಿನ ಕಡ್ಡಾಯವಾಗಿ ಇಷ್ಟಲಿಂಗ ಪೂಜೆ ನೆರವೇರಿಸಿಕೊಳ್ಳಬೇಕು. ಇದು ಪ್ರತಿಯೊಬ್ಬರ ಬದುಕನ್ನು ಉನ್ನತೀಕರಿಸುತ್ತದೆ ಎಂದರು.
ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉದಾತ್ತತೆಯ ಬದುಕನ್ನು ಕಟ್ಟಿಕೊಳ್ಳಲು ಸಿದ್ದಾಂತ ಶಿಖಾಮಣಿ ಗ್ರಂಥ ಕಾರಣವಾಗುತ್ತದೆ ಎಂದರು.ವರ್ತಕ ಚಾಪಿ ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡ ಪಿ.ಸುಧಾಕರ್ ಪಾಟೀಲ್, ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬೃಂಗಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಮುಖಂಡರಾದ ಎಂ.ಎಂ.ಜೆ. ಶೋಭಿತ್, ಬೆಂಗಳೂರಿನ ಹಿರೇಮಠ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ 60 ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ಉಜ್ಜಿನಿ ಬೈರದೇವರ ಗುಡ್ಡ, ಬೆನಕನಹಳ್ಳಿ ಗ್ರಾಮಗಳ ದೈವಸ್ಥರಿಗೆ ಗೌರವ ಸಲ್ಲಿಸಲಾಯಿತು. ಶಿಕ್ಷಕ ಚಿರಂಜೀವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ. ಕೊಟ್ರೇಶ್ ಸ್ವಾಗತಿಸಿದರು. ಅರವಿಂದ್ ಬಸಾಪುರ, ಪಿ.ಎಂ. ಈಶ್ವರಯ್ಯ ನಿರೂಪಿಸಿದರು.