ಜಿ. ಸೋಮಶೇಖರ
ಕೊಟ್ಟೂರು: ಕೊಟ್ಟೂರಿನ ನೂತನ ಅಂಚೆ ಕಚೇರಿಯನ್ನು ₹ 1.65 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಮೂರು ತಿಂಗಳಾದರೂ ಪ್ರಾರಂಭವಾಗುವ ಸೌಭಾಗ್ಯ ದೊರೆತಿಲ್ಲ. 1980ರ ದಶಕದಲ್ಲಿ ಇಲ್ಲಿನ ಎಪಿಎಂಸಿ ಆಡಳಿತ ಅಂಚೆ ಕಚೇರಿಗೆ ಸ್ವಂತ ಕಚೇರಿ ಕಟ್ಟಿಸಿಕೊಳ್ಳಲು ಕಡಿಮೆ ಖರ್ಚಿನಲ್ಲಿ ವಿಶಾಲವಾದ ಜಾಗವನ್ನು ತನ್ನ ಪ್ರಾಂಗಣದಲ್ಲಿ ಮಂಜೂರು ಮಾಡಿತ್ತು. ಆದರೆ, ಈ ಜಾಗದಲ್ಲಿ ಅಂಚೆ ಕಚೇರಿ ನಿರ್ಮಿಸಲು ಕೇಂದ್ರ ಕಚೇರಿಯವರು 44 ವರ್ಷಗಳ ವರೆಗೆ ಮುಂದಾಗಿರಲಿಲ್ಲ. ಆದರೆ, ಹಿಂದಿನ ಸಂಸದ ವೈ. ದೇವೆಂದ್ರಪ್ಪ 2024ರ ಏಪ್ರಿಲ್‌ನಲ್ಲಿ ಕೇಂದ್ರ ಸಂಪರ್ಕ ಖಾತೆ ಸಚಿವಾಲಯವನ್ನು ಸಂಪರ್ಕಿಸಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ₹ 1.65 ಕೋಟಿ ಅನುದಾನ ಬಿಡುಗಡೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಸುಸಜ್ಜಿತ ಮತ್ತು ಅಗತ್ಯಕ್ಕೆ ಬೇಕಾದ ಸೌಕರ್ಯ ಒಳಗೊಂಡ ಕಟ್ಟಡವನ್ನು ಗುತ್ತಿಗೆದಾರರು ಮೂರು ತಿಂಗಳ ಹಿಂದೆಯೇ ಪೂರ್ಣಗೊಳಿಸಿ ಜಿಲ್ಲಾ ಅಂಚೆ ಅಧೀಕ್ಷಕರಿಗೆ ಹಸ್ತಾಂತರಿಸಿದ್ದಾರೆ.ಅನುಮತಿ ಸಿಕ್ಕಿಲ್ಲ: ನೂತನ ಕಟ್ಟಡಕ್ಕೆ ಸ್ಥಳಾಂತರವಾಗಲು ಜಿಲ್ಲಾ ಅಧೀಕ್ಷಕರು ಧಾರವಾಡದ ಪಿಎಂಜೆಗೆ ಪತ್ರ ಬರೆದಿದ್ದಾರೆ. ಅವರು ಬೆಂಗಳೂರು ಮತ್ತು ನವದೆಹಲಿಯ ಕೇಂದ್ರ ಕಚೇರಿಯ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಿದರು. ಆದರೆ, ಈ ವರೆಗೂ ಮಾತ್ರ ಅಧಿಕಾರಿಗಳು ಅನುಮತಿ ನೀಡದೆ ಇರುವುದರಿಂದ ಸ್ಥಳಾಂತರ ವಿಳಂಬವಾಗಿದೆ.
₹18 ಕೋಟಿ ವ್ಯವಹಾರ: ಕೊಟ್ಟೂರು ಅಂಚೆ ಕಚೇರಿ ಆರ್‌ಡಿ , ಎಸ್‌ಬಿ, ಟೈಮ್ ಬಾಂಡ್, ಎಂಐ, ಸೀನಿಯರ್ ಸಿಟಿಜನ್, ಉಳಿತಾಯ ಖಾತೆ, ಕೋಸ್ಟಲ್ ಎಲ್‌ಐ, ಆರ್‌ಪಿಎಲ್‌ಐ ಮತ್ತು ದಿನಿತ್ಯದ ಪತ್ರ ವ್ಯವಹಾರಗಳ ಮೂಲಕ ಅಂಚೆ ಇಲಾಖೆಗೆ ಪ್ರತಿ ವರ್ಷ ಅಂದಾಜು ₹ 18 ಕೋಟಿ ಆದಾಯ ಬರುತ್ತಿದೆ. ಕೊಟ್ಟೂರು ಮತ್ತು ಸುತ್ತಲಿನ 18 ಹಳ್ಳಿಗಳ ವ್ಯಾಪ್ತಿಯಲ್ಲಿ 12 ಶಾಖಾ ಕಚೇರಿ ವ್ಯಾಪ್ತಿಯನ್ನು ಕೊಟ್ಟೂರು ಅಂಚೆ ಕಚೇರಿ ಹೊಂದಿದೆ. 25 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಈ ಕಚೇರಿಯಲ್ಲಿ 20 ಕ್ಕೂ ಹೆಚ್ಚು ಸಿಬ್ಬಂದಿ ನಿತ್ಯದ ಕರ್ತವ್ಯ ನಿರ್ವಹಿಸುತ್ತಿದ್ದಾರೆ .ಇದೀಗ ಎಪಿಎಂಸಿ ಬಾಡಿಗೆ ಕಟ್ಟಡದ ಇಕ್ಕಾಟದ, ಬೆಳಕಿನ ಕೊರತೆಯಲ್ಲಿ ಅಂಚೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಹಕರು ವ್ಯವಹಾರಿಸಲು ಸೂಕ್ತ ಜಾಗವಿಲ್ಲದೆ ಅತ್ತಿಂದತ್ತ ಓಡಾಡುತ್ತ ಕುಳಿತುಕೊಳ್ಳಲು ಅಸ್ಪದವಿಲ್ಲದ ರೀತಿಯಲ್ಲಿ ಬಂದು ಹೋಗುತ್ತಿದ್ದಾರೆ. ಕಚೇರಿಯ ಅಂಚೆ ಕಾಗದ ಮತ್ತು ಪತ್ರಗಳ ವಿಂಗಡನೆಗೂ ಪ್ರತ್ಯೇಕ ಕೌಂಟರ್‌ಗಳು ಬಾಡಿಗೆ ಕಟ್ಟಡ ಇಲ್ಲವಾಗಿದೆ. ಇಷ್ಟೆಲ್ಲ ತೊಂದರೆ ಅನುಭವಿಸುತ್ತ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದೆ.ತಕ್ಷಣ ಮೇಲಾಧಿಕಾರಿಗಳು ಹೊಟ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಅನುಮತಿ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೊಸ ಅಂಚೆ ಕಚೇರಿ ಕಟ್ಟಡ ಎಲ್ಲ ಬಗೆಯ ಸೌಕರ್ಯಗಳನ್ನು ಹೊಂದಿದ್ದು ಗುತ್ತಿಗೆದಾರರು ಇಲಾಖೆಗೆ ಹಸ್ತಾಂತರಿಸಿದ್ದಾರೆ. ಕೇಂದ್ರ ಸಂಪರ್ಕ ಇಲಾಖೆ ಅನುಮತಿ ನೀಡದ ಕಾರಣದಿಂದ ಸ್ಥಳಾಂತರವಾಗಿಲ್ಲ ಎಂದು ಬಳ್ಳಾರಿಯ ಜಿಲ್ಲಾ ಅಂಚೆ ಅಧೀಕ್ಷಕ ಪಿ. ಚಿದಾನಂದ ಹೇಳಿದರು.ಮಾಜಿ ಸಂಸದ ವೈ. ದೇವೆಂದ್ರಪ್ಪನವರ ಪ್ರಯತ್ನದಿಂದಾಗಿ ಕೊಟ್ಟೂರು ಅಂಚೆ ಕಚೇರಿ ಹೊಸ ಕಟ್ಟಡ ಕಾಣುವಂತಾಗಿದೆ. ಆದರೆ, ಕಚೇರಿ ಸ್ಥಳಾಂತರಕ್ಕೆ ಸಂಬಂಧ ಪಟ್ಟವರು ಅನುಮತಿ ನೀಡದ ಕಾರಣಕ್ಕಾಗಿ ಹಳೆಯ ಕಟ್ಟಡದಲ್ಲಿ ವ್ಯವಹಾರ ನಡೆಸುವಂತಾಗಿದೆ. ಈಗಲಾದರೂ ಅಧಿಕಾರಿಗಳು ಹೊಸ ಕಟ್ಟಡ ಬಳಕೆಗೆ ಅನುಮತಿ ನೀಡಬೇಕು ಎಂದು ನಾಗರಿಕ ಎಂ. ಅನಿಲಕುಮಾರ ತಿಳಿಸಿದ್ದಾರೆ.