ಶ್ರೀರಾಮನನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ

KannadaprabhaNewsNetwork |  
Published : Oct 08, 2025, 01:01 AM IST
ಕಂಪ್ಲಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. | Kannada Prabha

ಸಾರಾಂಶ

ವಾಲ್ಮೀಕಿ ಅವರ ಆದರ್ಶಗಳು ಇಂದಿಗೂ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ. ಯುವ ಪೀಳಿಗೆಯು ಅವರ ತತ್ವ- ಆದರ್ಶಗಳನ್ನು ಅನುಸರಿಸಿ ನೈತಿಕತೆ ಮತ್ತು ಮಾನವಿಯತೆಗಿಂತ ಮಹತ್ವದ ದ್ಯೇಯವಿಲ್ಲ ಎಂಬ ಅರಿವಿನಿಂದ ಬದುಕಬೇಕು.

ಕಂಪ್ಲಿ: ಮಹರ್ಷಿ ವಾಲ್ಮೀಕಿ ಮಹಾನ್ ಕವಿ, ಚಿಂತಕ ಮತ್ತು ಮಾನವೀಯ ಮೌಲ್ಯಗಳ ಪ್ರಸಾರಕರಾಗಿದ್ದರು. ಅವರು ಶ್ರೀರಾಮನನ್ನು ಜಗತ್ತಿಗೆ ಪರಿಚಯಿಸಿದವರು ಎಂದು ಶಾಸಕ ಜೆ.ಎನ್‌. ಗಣೇಶ ಹೇಳಿದರು.

ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಮತ್ತು ನಗರ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಾಲ್ಮೀಕಿ ಅವರ ಆದರ್ಶಗಳು ಇಂದಿಗೂ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ. ಯುವ ಪೀಳಿಗೆಯು ಅವರ ತತ್ವ- ಆದರ್ಶಗಳನ್ನು ಅನುಸರಿಸಿ ನೈತಿಕತೆ ಮತ್ತು ಮಾನವಿಯತೆಗಿಂತ ಮಹತ್ವದ ದ್ಯೇಯವಿಲ್ಲ ಎಂಬ ಅರಿವಿನಿಂದ ಬದುಕಬೇಕು. ಜತೆಗೆ ರಾಮಾಯಣವನ್ನು ಓದಿ ನಮ್ಮ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳ ಬಗ್ಗೆ ಜಾಗೃತರಾಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ತಾಲೂಕು ಅಧ್ಯಕ್ಷ ನೀರಗಂಟಿ ವೀರೇಶ್ ಮಾತನಾಡಿ, ವಾಲ್ಮೀಕಿ ಸಮುದಾಯಕ್ಕೆ ಏಕತೆ ಮತ್ತು ಸಂಘಟನೆ ಅತ್ಯಗತ್ಯ. ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿ ಅವರ ಭವಿಷ್ಯ ರೂಪಿಸುವುದು ನಮ್ಮ ಪ್ರಮುಖ ಗುರಿ. ಈ ಉದ್ದೇಶಕ್ಕಾಗಿ ಗಂಡುಗಲಿ ಕುಮಾರರಾಮ ಟ್ರಸ್ಟ್ ಸ್ಥಾಪಿಸಲಾಗುತ್ತಿದೆ. ಅನ್ಯ ಸಮುದಾಯದವರನ್ನು ಅಕ್ರಮವಾಗಿ ಎಸ್ಟಿ ವರ್ಗಕ್ಕೆ ಸೇರಿಸುವುದು ವಾಲ್ಮೀಕಿ ಸಮುದಾಯದ ಹಕ್ಕುಗಳಿಗೆ ಧಕ್ಕೆ ಉಂಟುಮಾಡುತ್ತದೆ. ಸುಳ್ಳು ಜಾತಿ ಪ್ರಮಾಣಪತ್ರ ನೀಡುವ ಅಧಿಕಾರಿಗಳ ವಿರುದ್ಧ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಜತೆಗೆ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಸರ್ಕಾರ ಮುಂದಾಗಲಿ ಎಂದರು.

ಮೆರವಣಿಗೆ: ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಮೆರವಣಿಗೆಯು ಉದ್ಭವ ಮಹಾ ಗಣಪತಿ ದೇವಸ್ಥಾನದಿಂದ ಆರಂಭಗೊಂಡು ಡಾ. ರಾಜಕುಮಾರ್ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಸೇರಿ ವಿವಿಧ ಮುಖ್ಯ ರಸ್ತೆಗಳ ಮಾರ್ಗವಾಗಿ ಸಂಚರಿಸಿ ವಾಲ್ಮೀಕಿ ಭವನದ ಬಳಿ ಸಮಾವೇಶಗೊಂಡಿತು. ಡೊಳ್ಳು ಕುಣಿತ, ಹಗಲುವೇಷದಾರರು, ತಾಷ ರಾಮ್ ಡೋಲ್ ಸೇರಿ ವಿವಿಧ ರೀತಿಯ ಮಂಗಳವಾದ್ಯಗಳು, ಮಹಿಳೆಯರು ಹೊತ್ತಿದ್ದ ಪೂರ್ಣಕುಂಭ ಹಾಗೂ ಕಳಸಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.

ಪುರಸಭಾ ಅಧ್ಯಕ್ಷ ಭಟ್ಟ ಪ್ರಸಾದ, ವಾಲ್ಮೀಕಿ ಸಮುದಾಯದ ಮುಖಂಡರಾದ ಬಿ. ನಾರಾಯಣಪ್ಪ, ಬಿ. ಅಂಬಣ್ಣ, ಬಿ. ಹುಲಗಪ್ಪ, ಡಾ. ವೆಂಕಟೇಶ ಭರಮಕ್ಕನವರ್, ತಿಮ್ಮಪ್ಪ ನಾಯಕ, ಕರೆಂಟ್ ಗೋಪಾಲಪ್ಪ, ಎನ್. ರಾಮಾಂಜನೇಯಲು, ವಾಲ್ಮೀಕಿ ಈರಣ್ಣ, ಡಿ. ಬಸಪ್ಪ, ಪೈಲ್ವಾನ್ ವೀರೇಶ್, ಮರಿಯಪ್ಪ, ಬಿ. ಲಕ್ಷ್ಮಣ, ನಾಯಕರ ವೆಂಕೋಬಾ, ನಾಗಭೂಷಣ ಸೇರಿದಂತೆ ತಾಲೂಕಿನ ವಾಲ್ಮೀಕಿ ಸಮಾಜದವರಿದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ