ಜಿ. ಸೋಮಶೇಖರ
ಕೊಟ್ಟೂರು: ಕೊಟ್ಟೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ರದ್ದುಗೊಳಿಸಲಾಗಿದ್ದು, ಇಲ್ಲಿಯ ಕ್ರೀಡಾಪಟುಗಳಲ್ಲಿ ತೀವ್ರ ಬೇಸರ ಮೂಡಿಸಿದೆ.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ಈ ನಿರ್ಧಾರದಿಂದ ತಾಲೂಕು ಮಟ್ಟದ ಯಾವುದೇ ಕ್ರೀಡಾಪಟುಗಳು ಜಿಲ್ಲಾ, ವಿಭಾಗ ದಸರಾ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಳ್ಳಲಾಗದೆ ವಂಚನೆಗೆ ಈಡಾಗಿದ್ದಾರೆ.
ಸೆ. 13ರಂದು ಈ ಬಾರಿ ವಿಜಯನಗರ ಜಿಲ್ಲೆ ದಸರಾ ಕ್ರೀಡಾಕೂಟ ಹೊಸಪೇಟೆಯಲ್ಲಿ ನಡೆಯಲಿದೆ. ಆದರೆ ತಾಲೂಕು ಕ್ರೀಡಾಪಟುಗಳು ಪಾಲ್ಗೊಳ್ಳದಂತಾಗಿದೆ.ದಸರಾ ಕ್ರೀಡಾಕೂಟವನ್ನು ರಾಜ್ಯ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರತಿ ತಾಲೂಕಿನಲ್ಲಿ ಆಗಸ್ಟ್ 25 ಮತ್ತು ಜಿಲ್ಲಾ ಮಟ್ಟದಲ್ಲಿ ಸೆ. 1ರಂದು ಮತ್ತು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ. 10ರ ಒಳಗಾಗಿ ನಡೆಸಲು ಸುತ್ತೋಲೆ ಹೊರಡಿಸಿದೆ. ಆದರೆ ಸುತ್ತೋಲೆ ಕುರಿತು ತಾಲೂಕಿನ ಅಧಿಕಾರಿಗಳು, ಕ್ರೀಡಾಪಟುಗಳಿಗೆ ಮಾಹಿತಿಯೇ ಇಲ್ಲ. ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಮ್ಮ ಬಳ್ಳಾರಿ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಕೊಟ್ಟೂರಿಗೆ ಸೆ. 11ರಂದು ಕಳುಹಿಸಿ, ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಿ ವಿಜೇತರ ಪಟ್ಟಿ ತರುವಂತೆ ಸೂಚಿಸಿದ್ದರು. ಅದಕ್ಕೆ ಸ್ಥಳೀಯ ಕ್ರೀಡಾಪಟುಗಳ ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ಮಾಹಿತಿ ನೀಡದೆ, ಸಿದ್ಧತೆ ಇಲ್ಲದೆ ಕ್ರೀಡಾಕೂಟ ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸಿದರು. ಆಗ ಅಧಿಕಾರಿಗಳು ಕ್ರೀಡಾಕೂಟ ನಡೆಸದೇ ಮರಳಿದರು.
ಕ್ರೀಡಾ ಇಲಾಖೆಯವರ ಈ ಧೋರಣೆ ಬಗ್ಗೆ ಕೊಟ್ಟೂರು ತಾಲೂಕಿನಲ್ಲಿ ಕ್ರೀಡಾಪಟುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನ 500ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸದಂತೆ ಮಾಡಿರುವುದು ಅನ್ಯಾಯ ಎಂದಿದ್ದಾರೆ. ತಾಲೂಕು ದಸರಾ ಕ್ರೀಡಾಕೂಟಕ್ಕೆ ಪ್ರತಿವರ್ಷ ಸರ್ಕಾರ ₹1 ಲಕ್ಷ ಅನುದಾನ ನೀಡುತ್ತಿದ್ದರೂ ಕ್ರೀಡಾಪಟುಗಳನ್ನು ವಂಚಿಸಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.ಪ್ರತಿ ವರ್ಷದಂತೆಯೇ ಈ ವರ್ಷ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲು ಸಿಬ್ಬಂದಿಯನ್ನು ಕೊಟ್ಟೂರಿಗೆ ಮಾಹಿತಿ ನೀಡಿಯೇ ಕಳುಹಿಸಿಕೊಡಲಾಗಿತ್ತು. ಕೆಲವರು ತುರ್ತಾಗಿ ಕ್ರೀಡಾಕೂಟ ಆಯೋಜಿಸಿದಕ್ಕೆ ವಿರೋಧ ವ್ಯಕ್ತ ಪಡಿಸಿದರು. ಇದರಿಂದಾಗಿ ಕೊಟ್ಟೂರು ತಾಲೂಕು ಮಟ್ಟದ ಈ ಬಾರಿಯ ದಸರಾ ಕ್ರೀಡಾಕೂಟ ರದ್ದುಗೊಂಡಿದೆ. ಜಿಲ್ಲಾ ಕ್ರೀಡಾಕೂಟಕ್ಕೆ ಈ ತಾಲೂಕಿನ ಪ್ರತಿನಿಧಿ ಈ ಬಾರಿ ಇರುವುದಿಲ್ಲ. ಇದರಿಂದ ತಾಲೂಕಿನ ಕ್ರೀಡಾಪಟುಗಳು ತಮಗೆ ತಾವೇ ವಂಚಿಸಿಕೊಂಡಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಹೇಳಿದರು.
ದಸರಾ ಕ್ರೀಡಾಕೂಟದ ಆಯೋಜನೆ ಕುರಿತು ಕೊಟ್ಟೂರು ತಾಲೂಕು ಸೇರಿದಂತೆ ಇತರ ಕೆಲವು ತಾಲೂಕಿನ ಜನತೆಗೆ ಸರಿಯಾದ ಮಾಹಿತಿ ನೀಡಿಲ್ಲ. ಈ ರೀತಿ ಪ್ರತಿಸಲ ನಡೆಯುತ್ತಿದ್ದು, ಸಂಬಂಧಪಟ್ಟವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಕೊಟ್ಟೂರು ಎಸ್‌ಜಿಕೆ ಸ್ಪೋಟ್ಸ್ ಕ್ಲಬ್ ಕಾರ್ಯದರ್ಶಿ ಲಿಂಗನಾಯ್ಕ್ ಹೇಳಿದರು.