ಜಿ.ಸೋಮಶೇಖರ
ಕೊಟ್ಟೂರು: ತಾಪಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕೊಟ್ಟೂರು ತಾಪಂ ಪ್ರತಿ ತಿಂಗಳ ಅಧಿಕಾರಿಗಳ ಮಟ್ಟದ ಕೆಡಿಪಿ ಸಭೆ ಮತ್ತು ಶಾಸಕರ ನೇತೃತ್ವದ ತ್ರೈಮಾಸಿಕ ಕೆಡಿಪಿ ಸಭೆ ಕಳೆದ 10 ತಿಂಗಳಿಂದಲೂ ನಡೆಯದಿರುವುದು ತಾಲೂಕಿನ ಹಳ್ಳಿಗಳ ಕುಂದು-ಕೊರತೆಗಳ ನಿವಾರಣೆಗೆ ಅಡ್ಡಿಯಾಗಿದೆ.ತಾಲೂಕು ರಚನೆಯಾಗಿ ಆರು ವರ್ಷ ಗತಿಸಿದರೂ ಇದುವರೆಗೂ ತಾಪಂ, ತಹಶೀಲ್ದಾರ್ ಕಚೇರಿ ಹೊರತುಪಡಿಸಿ ಬೇರೆ ಇತರ ಇಲಾಖೆಗಳ ಕಚೇರಿಗಳು ಪ್ರಾರಂಭವಾಗಿಲ್ಲ. ತಾಪಂ ಕಚೇರಿ ಆರಂಭಗೊಂಡಿದ್ದರೂ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಸರ್ಕಾರ ಕಳೆದ ವರ್ಷದಿಂದ ಈ ತಾಲೂಕಿಗೆ ನೇಮಕ ಮಾಡುವ ಗೋಜಿಗೆ ಮುಂದಾಗಿಲ್ಲ. ಅಕ್ಕ-ಪಕ್ಕದ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಯನ್ನೇ ಕೊಟ್ಟೂರು ತಾಲೂಕಿಗೆ ಪ್ರಭಾರಿಯಾಗಿ ಕಾರ್ಯನಿರ್ವಹಿಸಲು ಸರ್ಕಾರ ನಿಯೋಜಿಸಿದೆ. ಇದರಿಂದ ಸಮಸ್ಯೆಗಳು ಹೆಚ್ಚುತ್ತಿವೆ.
ತಾಪಂ ಕಚೇರಿಯಲ್ಲಿ ಇಒ ಇಲ್ಲದೇ ಕೇವಲ ಕಚೇರಿಯನ್ನು ಬೆಳಗ್ಗೆ ತೆರೆದು ಸಂಜೆ ಬಾಗಿಲು ಮುಚ್ಚುವ ಕೆಲಸ ಮಾತ್ರ ಆಗುತ್ತಿದೆ. ಅತ್ಯವಶ್ಯವಾಗಿ ಪ್ರತಿ ತಿಂಗಳ ನಡೆಯಬೇಕಿದ್ದ ಕೆಡಿಪಿ ಸಭೆ ಕಳೆದ 10 ತಿಂಗಳಿಂದ ನಡೆದಿಲ್ಲ. 13 ಗ್ರಾಪಂ ಸೇರಿ 30 ಗ್ರಾಮಗಳು ಮತ್ತು 32 ಉಪ ಗ್ರಾಮಗಳ ಅಭಿವೃದ್ಧಿಗೆ ವೇಗ ದೊರೆಯದಂತಾಗಿದೆ.ಈ ಬಗ್ಗೆ ಜಿಪಂ ಅಧಿಕಾರಿಗಳು ಮತ್ತು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸದೇ ಇರುವುದು ತಾಲೂಕಿನ ಗ್ರಾಮಗಳಲ್ಲಿ ಸಮಸ್ಯೆಗಳು ಬೆಟ್ಟದಷ್ಟು ಹೆಚ್ಚುತ್ತಿವೆ. ಇದರಿಂದ ಗ್ರಾಪಂ ಸದಸ್ಯರು ಬೇಸತ್ತಿದ್ದಾರೆ.
ಸರ್ಕಾರಗಳು ಗ್ರಾಮೀಣ ಜನತೆಗೆ ಜಾರಿಗೆ ತರುವ ಮನೆ, ಶೌಚಾಲಯ ನಿರ್ಮಾಣ ಸೇರಿದಂತೆ ಮತ್ತಿತರ ಯೋಜನೆಗಳು ದೊರಕದಂತಾಗಿದೆ. ತಾಲೂಕು ಕಚೇರಿಯ ಅಧಿಕಾರಿಗಳ ಅಲಭ್ಯತೆಯಿಂದ ಹಳ್ಳಿಗಳು ಮತ್ತಷ್ಟು ಮಾರಕ ಪರಿಣಾಮಗಳನ್ನು ಎದುರಿಸುವಂತಾಗಿದೆ. ತಾಲೂಕಿನ ಜನತೆ ಸರ್ಕಾರ ಮತ್ತು ಹಿರಿಯ ಅಧಿಕಾರಿಗಳಿಗೆ ಶಾಪ ಹಾಕುವಂತಾಗಿದೆ.ಗ್ರಾಮಗಳಲ್ಲಿ ನಡೆಯಬೇಕಿರುವ ನರೇಗಾ ಯೋಜನೆ ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇಂತಹ ಹತ್ತು ಹಲವು ತೊಂದರೆಗಳನ್ನು ನಿವಾರಿಸುವಂತೆ ರೈತರು ತಾಪಂ ಕಚೇರಿಗೆ ಎಡತಾಕುತ್ತಿದ್ದಾರೆ. ಈ ಕುರಿತು ಶಾಸಕರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಗಮನ ಹರಿಸಿದರೆ ಸರ್ಕಾರಿ ಕಾರ್ಯಕ್ರಮ, ಕಾಮಗಾರಿಗಳಿಗೆ ವೇಗ ದೊರಯಲಿದೆ.
ಕೊಟ್ಟೂರು ತಾಪಂ ತ್ರೈಮಾಸಿಕ ಸಭೆ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿರುವೆ. ಘ್ರದಲ್ಲಿ ಕೊಟ್ಟೂರಿನಲ್ಲಿ ಸಭೆ ನಡೆಸಲು ದಿನಾಂಕ ನಿಗದಿಗೊಳಿಸಲು ಮುಂದಾಗುವೆ ಎನ್ನುತ್ತಾರೆ ಶಾಸಕ ಕೆ.ನೇಮಿರಾಜ ನಾಯ್ಕ.