ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣ: ಮನೆಯ ಹಾಲ್‌ನ ಗುಂಡಿಯಿಂದ ಮೂರು ಶವ ಹೊರತೆಗೆದು ಮಹಜರು

KannadaprabhaNewsNetwork |  
Published : Feb 01, 2026, 03:00 AM IST
ಕೊಟ್ಟೂರಿನಲ್ಲಿ ಶುಕ್ರವಾರ ಬೆಳಕಿ್ಗೆ ಬಂದ ತಂದೆ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ ಆರೋಪಿ ಅಕ್ಷಯ್ ನನ್ನು  ಮಹಾಜರು ಸ್ಥಳ  ಪರೀಕ್ಷಿಸಲು ಶನಿವಾರ ಕರೆ ತಂದ ಪೋಲೀಸರು  | Kannada Prabha

ಸಾರಾಂಶ

ಕೊಲೆ ಆರೋಪಿಯನ್ನು ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ವಿಶ್ವನಾಥ ಸಿಬ್ಬಂದಿ ಜತೆ ಕಾರಿನಲ್ಲಿ ಕರೆತಂದರು. ಆರೋಪಿಯನ್ನು ಮನೆಯೊಳಗೆ ಕರೆದೊಯ್ದು ಕೊಲೆ ಮಾಡಿರುವ ಸ್ಥಳ ಮಹಜರು ಕಾರ್ಯ ನಡೆಸಿದರು.

ಕೊಟ್ಟೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ, ಮಗನೇ ತಂದೆ, ತಾಯಿ, ಸಹೋದರಿಯರ ಬರ್ಬರವಾಗಿ ಹತ್ಯೆಗೈದ ತ್ರಿವಳಿ ಕೊಲೆ ಪ್ರಕರಣ ನಡೆದ ಪಟ್ಟಣದ ಮರಿ ಕೊಟ್ಟೂರೇಶ್ವರ ಬಡಾವಣೆಯಲ್ಲಿನ ಬಾಡಿಗೆ ಮನೆಗೆ ಕೊಲೆ ಆರೋಪಿ ಅಕ್ಷಯ್ ನನ್ನು ಬೆಂಗಳೂರು ಪೊಲೀಸರು ಶನಿವಾರ ಸ್ಥಳ ಮಹಜರು ಪ್ರಕ್ರಿಯೆಯನ್ನು ಭಾರೀ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಸಿದರು.

ಬೆಳಗ್ಗೆ 10:45ರ ವೇಳೆಗೆ ಕೊಲೆ ಆರೋಪಿಯನ್ನು ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ವಿಶ್ವನಾಥ ಸಿಬ್ಬಂದಿ ಜತೆ ಕಾರಿನಲ್ಲಿ ಕರೆತಂದರು. ಆರೋಪಿಯನ್ನು ಮನೆಯೊಳಗೆ ಕರೆದೊಯ್ದು ಕೊಲೆ ಮಾಡಿರುವ ಸ್ಥಳ ಮಹಜರು ಕಾರ್ಯ ನಡೆಸಿದರು. ತಂದೆ ಭೀಮ ರಾವ್, ತಾಯಿ ಜಯಲಕ್ಷ್ಮೀ, ತಂಗಿ ಅಮೃತಾಳನ್ನು ಕೊಲೆಗೈದು ಹೂತು ಹಾಕಿರುವ ಸ್ಥಳ ತೋರಿಸುವಂತೆ ಸೂಚಿಸಿದರು. ಬಳಿಕ ಹಿರಿಯ ಅಧಿಕಾರಿಗಳು ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಶವವನ್ನು ಒಂದೊಂದಾಗಿ ಮೇಲಕ್ಕೆತ್ತಿ ಶವಪರೀಕ್ಷೆಗೆ ಕಳುಹಿಸಲಾಯಿತು.

ತಂದೆಯ ಕಾಲು ತುಂಡಾಗಿಸಿದ: ಈತ ಎದೆಷ್ಟು ಕ್ರೂರವಾಗಿ ಬೀಭತ್ಸವಾಗಿ ಕೊಲೆ ಮಾಡಿದ್ದನೆಂದರೆ ಎಲ್ಲ ಮೂರು ಶವಗಳನ್ನು ಒಂದರ ಮೇಲೊಂದರಂತೆ ಗುಂಡಿಯಲ್ಲಿ ಹಾಕಿದ್ದ. ಕೊನೆಯಲ್ಲಿ ತಂದೆಯ ಶವ ಗುಂಡಿಯಲ್ಲಿ ಹಾಕಲು ಸಾಧ್ಯವಾಗದಿದ್ದಾಗ ಕಾಲನ್ನು ಕತ್ತರಿಸಿ ಗುಂಡಿಯಲ್ಲಿ ಹಾಕಿ ಮಣ್ಣು ಮುಚ್ಚಿದ್ದ.

ಮೃತದೇಹಗಳನ್ನು 4 ಅಡಿ ಆಳ, 2 ಅಡಿ ಅಗಲದ ಗುಂಡಿ ತೆಗೆದು ಮುಚ್ಚಲಾಗಿತ್ತು. ಮೊದಲಿಗೆ ತಾಯಿಯನ್ನು ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ. ನಂತರ ತಂಗಿ ಅಮೃತಾಳ ಬಾಯಿ ಹಿಡಿದು ಅವಳ ಕುತ್ತಿಗೆ ಸೀಳಿ, ಬಳಿಕ ತಂದೆಯನ್ನು ಇದೇ ರೀತಿ ಹತ್ಯೆಗೈದಿದ್ದ. ಮೃತದೇಹಗಳನ್ನು ಗುಂಡಿಯೊಳಗೆ ಒಂದೊಂದಾಗಿ ಹಾಕಿದ್ದಾನೆ. ಈ ವೇಳೆ ತಂದೆಯ ಮೃತದೇಹ ಸಲೀಸಾಗಿ ಗುಂಡಿಯೊಳಗೆ ಹೋಗದ ಕಾರಣ ತಂದೆಯ ಕಾಲನ್ನೇ ಕತ್ತರಿಸಿ ಹಾಕಿರುವುದು ಕಂಡು ಬಂದಿದೆ. ಗುಂಡಿಯಲ್ಲಿ ಒಂದರ ಮೇಲೊಂದರಂತೆ ಮೃತದೇಹಗಳಿದ್ದವು. ಮನೆಯಲ್ಲಿನ ಬೆಡ್ ರೂಮ್, ಹಾಲ್‌ನಲ್ಲಿ ಕೃತ್ಯ ಎಸಗಿದ್ದ. ಈ ಎಲ್ಲ ಕೊಲೆಗಳನ್ನು ಜ.26ರಂದು ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಘಟನಾ ಸ್ಥಳದಲ್ಲಿ ಮೊದಲಿಗೆ ತಾಯಿ ಜಯಲಕ್ಷ್ಮೀ, ನಂತರ ತಂಗಿ ಅಮೃತಾ, ತಂದೆ ಭೀಮರಾಜ್ ಅವರ ಶವಗಳನ್ನು ಹೊರ ತೆಗೆಯಲಾಯಿತು. ಈ ಮೂರು ಶವಗಳನ್ನು ಮರಣೋತ್ತರ ಪರೀಕ್ಷೆಗೆಂದು ಪಟ್ಟಣದ ಸಮುದಾಯ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ಮೃತದೇಹಗಳನ್ನು ಒಂದೊಂದಾಗಿ ಮನೆಯಿಂದ ಹೊರ ತರುತ್ತಿದ್ದಂತೆಯೇ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸಾರ್ವಜನಿಕರ ಜಮಾವಣೆ: ಆರೋಪಿಯನ್ನು ಪೊಲೀಸರು ಬೆಂಗಳೂರಿನಿಂದ ಕರೆ ತರುತ್ತಿದ್ದಾರೆಂಬ ಮಾಹಿತಿ ಪಡೆದಿದ್ದ ಪಟ್ಟಣದ ಜನತೆ ಹರಪನಹಳ್ಳಿ ರಸ್ತೆ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಜಮಾವಣೆಗೊಂಡಿದ್ದರು. ತ್ರಿವಳಿ ಕೊಲೆಯಾದ ಮನೆಯ ಹತ್ತಿರ ಸಾರ್ವಜನಿಕರು ಬಾರದಂತೆ ಪೊಲೀಸರು ಸಂರ್ಪಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ವ್ಯಾಪಕ ಪೊಲೀಸ್ ಪಹರೆ ಹಾಕಿದ್ದರು.

ಎಸ್ಪಿ ಎಸ್.ಜಾಹ್ನವಿ ಶುಕ್ರವಾರ ಆಗಮಿಸಿ ಪರಿಶೀಲಿಸಿದ್ದರು. ಶನಿವಾರ ಹೆಚ್ಚುವರಿ ಎಸ್ಪಿ ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಡನಾಯಕ್, ಸಿಪಿಐ ದುರುಗಪ್ಪ ಸ್ಥಳದಲ್ಲಿ ಠಿಕಾಣಿ ಹೂಡಿದ್ದರು.

ಬೆಂಗಳೂರು ಪೊಲೀಸರಿಂದ ತನಿಖೆ- ಎಸ್ಪಿ ಜಾಹ್ನವಿ: ಕೊಟ್ಟೂರು ಪಟ್ಟಣದ ಮರಿಕೊಟ್ಟೂರೇಶ್ವರ ಬಡಾವಣೆಯಲ್ಲಿನ ಮನೆಯಲ್ಲಿ ನಡೆದ ತಂದೆ, ತಾಯಿ, ತಂಗಿಯ ಕೊಲೆ ಪ್ರಕರಣ ಬೆಂಗಳೂರಿನ ತಿಲಕನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಅಲ್ಲಿಯೇ ಎಫ್‌ಐಆರ್‌ ಮಾಡಲಾಗಿದೆ. ಹಾಗಾಗಿ ಅಲ್ಲಿಯ ಪೊಲೀಸರಿಂದಲೇ ತನಿಖೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌. ಜಾಹ್ನವಿ ಹೇಳಿದರು.ಶನಿವಾರ ಕೊಲೆ ನಡೆದ ಮನೆಯ ಬಳಿ ಸೇರಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‌ಐಆರ್‌ನಲ್ಲಿ ಅಕ್ಷಯ, ವಸಂತ್‌ ಎಂಬ ಇಬ್ಬರ ಹೆಸರಿದೆ. ಕೊಲೆಗೆ ಕಾರಣ, ಯಾವ ಆಯುಧ ಬಳಸಿ ಕೃತ್ಯ ನಡೆಸಲಾಗಿದೆ ಎಂಬುದನ್ನು ತನಿಖೆಯ ನಂತರ ತಿಳಿದು ಬರಲಿದೆ ಎಂದರು.ಆರೋಪಿ ಅಕ್ಷಯ್‌ ಕೊಲೆ ಮಾಡುವ ಮುಂಚೆ ಸ್ಪ್ರೆ ಎರಚಿ ಮೂರ್ಛೆ ಹೋಗುವಂತೆ ಮಾಡಿರುವ ಬಗ್ಗೆಯಾಗಲಿ, ಹಣಕಾಸಿನ ಕಾರಣಕ್ಕಾಗಿ ಮತ್ತು ಇತರ ಕಾರಣಗಳಿಗಾಗಿ ಕೊಲೆ ಮಾಡಲಾಗಿದೆ ಎಂಬ ಬಗ್ಗೆ ಇನ್ನುವರೆಗೆ ಖಚಿತತೆ ಇಲ್ಲ. ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸರ ಹಸ್ತಕ್ಷೇಪ ಇಲ್ಲ. ಬೆಂಗಳೂರಿನಲ್ಲಿ ಪ್ರಕರಣದ ಸಂಪೂರ್ಣ ವಿಚಾರಣೆ ಮುಗಿದ ನಂತರ ಕೊಟ್ಟೂರು ಪೊಲೀಸ್‌ ಠಾಣೆಗೆ ಕೇಸ್‌ ವರ್ಗಾವಣೆಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್‌ಪಿ ಮಂಜುನಾಥ, ಡಿವೈಎಸ್‌ಪಿ ಮಲ್ಲೇಶ್‌ ದೊಡ್ಡಮನಿ, ಸಿಪಿಐ ದುರಗಪ್ಪ ಡಿ, ವಿಕಾಶ ಲಮಾಣಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ