ಜಿ. ಸೋಮಶೇಖರ್‌ಕೊಟ್ಟೂರು: ೧೬ನೇ ಶತಮಾನದ ಮಹಾನ್ ಶರಣ, ಪಂಚ ಗಣಾಧೀಶ್ವರರಲ್ಲಿ ಒಬ್ಬರಾದ ಕೊಟ್ಟೂರು ಕೊಟ್ಟೂರೇಶ್ವರ ಸಾಮಾಜಿಕ ಸಮಾನತೆಯ ಆಶಯಗಳನ್ನು ಸಹಕಾರಗೊಳಿಸಲು ಶ್ರಮಿಸಿದ ಶರಣರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂತಹ ಮಹಾನ್ ಶರಣ ಶ್ರೀಸ್ವಾಮಿಯ ಮಹಾಕಾರ್ತಿಕೋತ್ಸವ ಡಿ. ೮ರಂದು ನಡೆಯಲಿದೆ. ಇದಕ್ಕಾಗಿ ಈಗಾಗಲೇ ಅಸಂಖ್ಯಾತ ಭಕ್ತರು ಕೊಟ್ಟೂರಿನತ್ತ ದಾಪುಗಾಲು ಇಡುತ್ತಿದ್ದಾರೆ.
ಮಹಾ ಕಾರ್ತಿಕೋತ್ಸವ ನಡೆಯುವ ಮುಂಚೆ ನಡೆಯುವ ದೀಪಾವಳಿ ಪಾಡ್ಯದಿಂದ ಕೊಟ್ಟೂರೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ಆರಂಭಗೊಂಡು, ೧೩ನೇ ಉತ್ಸವವಾಗಿ ಬೆಳ್ಳಿ ರಥೋತ್ಸವದೊಂದಿಗೆ ಮಹಾಕಾರ್ತಿಕೋತ್ಸವ ಸಂಪನ್ನಗೊಳ್ಳಲಿದೆ.
ಕೊಟ್ಟೂರೇಶ್ವರ ಅನೇಕ ಬಗೆಯ ಪವಾಡ, ಜೀವಂತ ಯೋಗ ಸಮಾಧಿಯಾಗಿರುವ ಪ್ರಖ್ಯಾತಿಯಿಂದ ಅಸಂಖ್ಯಾತ ಭಕ್ತರಿದ್ದಾರೆ. ಕಾರ್ತೀಕೋತ್ಸವದಲ್ಲಿ ೫೦ ಸಾವಿರಕ್ಕೂ ಮತ್ತು ಸ್ವಾಮಿಯ ರಥೋತ್ಸಕ್ಕೆ ೩ರಿಂದ ೪ ಲಕ್ಷ ಜನಸಾಗರ ಸೇರುವುದು ದಾಖಲೆಯಾಗಿದೆ. ಸ್ವಾಮಿ ಭಕ್ತರ ಇಷ್ಟದೈವವಾಗಿದೆ. ಕಾರ್ತಿಕ ಮಾಸದಲ್ಲಿ ಸ್ವಾಮಿಯ ಹೆಸರಿನಲ್ಲಿ ಮಾಲೆ ಧರಿಸುವ ಪರಿಪಾಠ ಕಳೆದ ಹತ್ತಾರು ವರ್ಷಗಳಿಂದ ನಿರಂತರ ನಡೆದುಕೊಂಡು ಬಂದಿದೆ. ಕೊಟ್ಟೂರೇಶ್ವರ ಮಾಲೆ ಧರಿಸುವ ಪ್ರತಿಯೊಬ್ಬರೂ ಸ್ವಾಮಿಗೆ ಇಷ್ಟವಾದ ರುದ್ರಾಕ್ಷಿ, ವಿಭೂತಿ, ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತ ಲಿಂಗಪೂಜೆಯಲ್ಲಿ ಮಾಲಾಧಾರಿಗಳು ತೊಡಗಿಸಿಕೊಳ್ಳುತ್ತಾರೆ. ಮಾಲಾಧಾರಿಗಳು ತಮಗೆ ಅನುಕೂಲವಾಗುವ ೩, ೫, ೯, ೧೧, ೨೧ ಮತ್ತು ೪೫ ದಿನಗಳನ್ನು ಆಯ್ಕೆ ಮಾಡಿಕೊಂಡು ಈ ವ್ರತಾಚರಣೆ ಮಾಡುತ್ತ ಬರುತ್ತಾರೆ. ಕಾರ್ತಿಕೋತ್ಸವದ ನಂತರ ಮಾಲಾ ವಿಸರ್ಜನೆ ಕಾರ್ಯ ಕೈಗೊಳ್ಳುತ್ತಾರೆ. ಮಾಲಾಧಾರಿಗಳು ಶ್ವೇತಾ ವಸ್ತ್ರಾಧಾರಿಗಳಾಗಿ ಕೊರಳಲ್ಲಿ ಕೆಂಪು ವಸ್ತ್ರ ಧರಿಸುತ್ತಾ ಬಂದಿದ್ದಾರೆ. ಈ ಮಾಲಾಧಾರಣೆ ಪರಂಪರೆ ಇದೀಗ ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕವಾಗಿ ವ್ಯಾಪಿಸಿದೆ.ಬಂದೋಬಸ್ತ್:
ಸ್ವಾಮಿಯ ಮಹಾಕಾರ್ತಿಕೋತ್ಸವ ನಿಮಿತ್ತ ಕೊಟ್ಟೂರು ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜನೆಗೊಳ್ಳಲು ಈಗಾಗಲೇ ಪೊಲೀಸ್ ಆಡಳಿತ ಸಿದ್ಧತೆ ಕೈಗೊಂಡಿದೆ. ಓರ್ವ ಡಿವೈಎಸ್ಪಿ, ೧೦ ಸಿಪಿಐ, ೨೫ ಪಿಎಸ್ಐ ಅಲ್ಲದೇ ೫೦೦ ಪಿಸಿಗಳು ೦೪ ಕೆ.ಎಸ್.ಆರ್.ಪಿ. ಮತ್ತು ಇತರ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದಲ್ಲದೇ ಕೊಟ್ಟೂರು ಪಟ್ಟಣದೊಳಗೆ ಡಿ. ೮ರಂದು ಸಂಜೆ ೬ ಗಂಟೆಯಿಂದ ಮಧ್ಯರಾತ್ರಿ ೧೨ ಗಂಟೆ ವರೆಗೆ ಎಲ್ಲ ಬಗೆಯ ವಾಹನಗಳನ್ನು ಪೊಲೀಸ್ ಆಡಳಿತ ನಿರ್ಬಂಧಿಸಿದೆ. ಹೊರವಲಯದಿಂದ ವಾಹನಗಳ ಕಾರ್ಯಾಚರಣೆಯನ್ನು ಕೈಗೊಳ್ಳಲು ಪರ್ಯಾಯ ಸಂಚಾರ ನಕ್ಷೆ ಸಿದ್ಧಪಡಿಸಲಾಗಿದೆ. ಪಟ್ಟಣದ ಹರಪನಹಳ್ಳಿ, ಕೂಡ್ಲಿಗಿ, ಉಜ್ಜಿನಿ, ಹಡಗಲಿ, ಹಗರಿಬೊಮ್ಮನಹಳ್ಳಿ ಕಡೆಗಳಿಂದ ರಾತ್ರಿ ಬರುವ ಬಸ್‌ಗಳು ಬೇರೆ ಮಾರ್ಗದಿಂದ ಸಂಚರಿಸಲು ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ.ಕೊಟ್ಟೂರೇಶ್ವರ ಮಹಾಕಾರ್ತಿಕೋತ್ಸವದಲ್ಲಿ ಯಾವುದೇ ಬಗೆಯ ತೊಂದರೆ ಬಾರದಂತೆ ಎಲ್ಲ ಬಗೆಯ ಸಿದ್ಧತೆ ಕೈಗೊಂಡಿದ್ದೇವೆ. ಸಂಚಾರ ವ್ಯವಸ್ಥೆಗೆ ಧಕ್ಕೆ ಬಾರದಂತೆ ಪರ್ಯಾಯ ಮಾರ್ಗ ರಚಿಸಿ ಈ ಸಂಬಂಧ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಕಾರ್ತಿಕೋತ್ಸವ ಮತ್ತು ಬೆಳ್ಳಿ ರಥೋತ್ಸವದ ಯಶಸ್ಸಿಗೆ ಭಕ್ತರು ಪೊಲೀಸ್ ಆಡಳಿತದೊಂದಿಗೆ ಸಹಕರಿಸಬೇಕು ಎನ್ನುತ್ತಾರೆ ಕೊಟ್ಟೂರು ಪಿಎಸ್ಐ ಗೀತಾಂಜಲಿ ಸಿಂಧೆ.
ಕೊಟ್ಟೂರೇಶ್ವರ ಮಹಾಕಾರ್ತಿಕೋತ್ಸವ, ಭವ್ಯ ರಥೋತ್ಸವವನ್ನು ಕಣ್ತುಂಬಿಕೊಳ್ಳುವುದೇ ನಮ್ಮ ಪುಣ್ಯ. ಕಳೆದ ೩೦ ವರ್ಷಗಳಿಂದ ನಿರಂತರವಾಗಿ ಈ ಎರಡು ಉತ್ಸವದಲ್ಲಿ ಹಾಜರಾಗುತ್ತಿರುವೆ. ಕೊಟ್ಟೂರೇಶ್ವರ ಕೃಪೆ, ಆಶೀರ್ವಾದದಿಂದ ನಮ್ಮ ತರದ ಅನೇಕ ಕುಟುಂಬಕ್ಕೆ ಒಳಿತಾಗುತ್ತಾ ಬಂದಿದೆ ಎನ್ನುತ್ತಾರೆ ದಾವಣಗೆರೆಯ ಭಕ್ತೆ ನಿರ್ಮಲಾ.