ಕೊಟ್ಟೂರು-ಇಟ್ಟಿಗಿ ರಸ್ತೆ ಗುಂಡಿಗಳ ತಾಣ

KannadaprabhaNewsNetwork |  
Published : May 20, 2026, 12:45 AM IST
 ಕೊಟ್ಟೂರಿನಿಂದ ಇಟ್ಟಿಗೆಗೆ ತೆರಳುವ ರಸ್ತೆ ಗುಂಡಿಗಳಿಂದ ಸಂಪೂರ್ಣ ಕಿತ್ತು ಹೋಗಿದೆ. | Kannada Prabha

ಸಾರಾಂಶ

ಹಳೆಯ ಅರಭಾವಿ-ಚಳ್ಳಕೇರಿ ರಾಜ್ಯ ಹೆದ್ದಾರಿಯ ಪ್ರಮುಖ ಮಾರ್ಗವಾದ ಕೊಟ್ಟೂರು ಇಟ್ಟಗಿ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ರಸ್ತೆಯುದ್ದಕ್ಕೂ ನೂರಾರು ಗುಂಡಿಗಳಿದ್ದು ಇಂತಹ ರಸ್ತೆಯಲ್ಲಿಯೇ ವಾಹನ ಸವಾರರು ಅನಿವಾರ್ಯವಾಗಿ ಜೀವವನ್ನು ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕಾದ ಅನಿವಾರ್ಯತೆ ಇದೆ.

ಕೊಟ್ಟೂರು: ಹಳೆಯ ಅರಭಾವಿ-ಚಳ್ಳಕೇರಿ ರಾಜ್ಯ ಹೆದ್ದಾರಿಯ ಪ್ರಮುಖ ಮಾರ್ಗವಾದ ಕೊಟ್ಟೂರು ಇಟ್ಟಗಿ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ರಸ್ತೆಯುದ್ದಕ್ಕೂ ನೂರಾರು ಗುಂಡಿಗಳಿದ್ದು ಇಂತಹ ರಸ್ತೆಯಲ್ಲಿಯೇ ವಾಹನ ಸವಾರರು ಅನಿವಾರ್ಯವಾಗಿ ಜೀವವನ್ನು ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕಾದ ಅನಿವಾರ್ಯತೆ ಇದೆ.

ಕೂಡ್ಲಿಗಿ-ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ತಾಲೂಕುಗಳ ವ್ಯಾಪ್ತಿಯ 20 ಕಿ.ಮೀ. ಉದ್ದದ 10 ಕಿಮೀನಷ್ಟು ರಸ್ತೆ ಸಂಪೂರ್ಣ ಕಿತ್ತು ಹೋಗಿ ಅಧ್ವಾನವಾಗಿದೆ. ಆಗಾಗ ಅಲ್ಲಲ್ಲಿ ಸಿಸಿ ರಸ್ತೆ ಮತ್ತು ತೆಪೆ ಕಾರ್ಯವನ್ನು ಮಾತ್ರ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಕೈಗೊಂಡಿದೆ.

ರಸ್ತೆ ಈ ಪರಿ ಹಾಳಾಗಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಂಬಂಧವೇ ಇಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ದಿನನಿತ್ಯ ಬೈಕ್ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಸ್ವಲ್ಪ ಯಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಈ ಬಗೆಯ ರಸ್ತೆಯಲ್ಲಿ ಸಂಚರಿಸಲಾಗದೇ ಕೊಟ್ಟೂರಿನಿಂದ ಹೂವಿನಹಡಗಲಿಗೆ ತೆರಳುವ ವಾಹನ ಸಂಚಾರಕರು ಇದೀಗ ಹರಪನಹಳ್ಳಿ ಮೂಲಕ ಸುತ್ತು ಹೊಡೆದು ಹಡಗಲಿಗೆ ತೆರಳುತ್ತಿದ್ದಾರೆ.

ಕಾಯಂ ಅಪಘಾತ

ಇಟ್ಟಿಗಿ-ಅಲಬೂರು-ಕೋಗಳಿ ಮತ್ತಿತರ ಗ್ರಾಮಗಳಿಂದ ರೈತರು ಮತ್ತು ಇನ್ನಿತರರು ತಮ್ಮ ಕಾರ್ಯಚಟುವಟಿಕೆಗೆ ಕೊಟ್ಟೂರಿಗೆ ದಿನನಿತ್ಯ ಸಂಚರಿಸುತ್ತಾರೆ. ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿನ ಗುಂಡಿಗಳಿಗೆ ತಪ್ಪಿಸಲು ಹೋಗಿ ಅಪಘಾತ ಮಾಡಿಕೊಂಡವರ ಉದಾಹರಣೆ ಸಾಕಷ್ಟಿವೆ. ರಸ್ತೆಯುದ್ದಕ್ಕೂ ಇರುವ ಗುಂಡಿಗಳಿಗೆ ಸಿಲುಕಿಕೊಳ್ಳುವ ಕಾರು ಮತ್ತಿತರ ವಾಹನಗಳು ತಳಬದಿ ಬಡಿದು ಹಾಳಾಗುತ್ತಿವೆ. ಅದೆಷ್ಟೋ ಟೈರ್‌ಗಳು ಸಿಡಿದಿವೆ. ಮಳೆ ಬಂದರೇ ಈ ರಸ್ತೆ ಮತ್ತಷ್ಟು ಅಧ್ವಾನಗೊಳ್ಳುತ್ತದೆ. ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿಯ ಶಾಸಕರು ಸರ್ಕಾರದ ಅನುದಾನದ ಕೊರತೆಯ ನೆಪಹೊಡ್ಡಿ ರಸ್ತೆ ದುರಸ್ತಿಗೆ ಮುಂದಾಗದೇ ಇರುವುದು ವಾಹನ ಸಂಚಾರಕರನ್ನು ಸಿಟ್ಟಿಗೆಬ್ಬಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರಸ್ತೆಯ ಸ್ಥಿತಿ ಕುರಿತು ವಿವರಿಸುತ್ತ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಸಾಗಿಸಿದ್ದಾರೆ.

ಅಂಚೆ ಕೊಟ್ರೇಶ ಎಂಬುವವರು ಕೊಟ್ಟೂರು ಪಟ್ಟಣದ ಎಲ್ಲ ರಸ್ತೆಗಳು ಸಿ.ಸಿ. ರಸ್ತೆಗಳಾಗಿ ಕಂಗೋಳಿಸುತ್ತಿವೆ. 2 ವರ್ಷಗಳಿಂದ ದುರಸ್ತಿ ಕಾಣದೇ ಯಥಾ ಸ್ಥಿತಿಯಲ್ಲಿರುವ ಇಟ್ಟಿಗಿ ರಸ್ತೆಯಲ್ಲಿ ಶಾಸಕರು ಸಂಚರಿಸಬೇಕು. ಆಗಲಾದರೂ ಈ ರಸ್ತೆ ರಿಪೇರಿಯಾಗುತ್ತದೆ ಎಂಬ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್‌ನಲ್ಲಿ ಸಂಪೂರ್ಣ ಹಾಳಾಗಿರುವ ರಸ್ತೆಯ ಚಿತ್ರ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನಗೆ ವಿಸಿಟಿಂಗ್ ಕಾರ್ಡ್‌ ಜಿಲ್ಲಾಧ್ಯಕ್ಷರು ಬೇಡ: ಎಚ್ಡಿಕೆ
ವನ್ಯಜೀವಿ-ಮಾನವ ಸಂಘರ್ಘ: ಐದೇ ವರ್ಷದಲ್ಲಿ 270 ಸಾವು!