ಕೋಟೂರ-ಶಿವಾಪೂರ ವಿದ್ಯುತ್ ಕೇಂದ್ರ ಶೀಘ್ರ ಪ್ರಾರಂಭಿಸಿ

KannadaprabhaNewsNetwork |  
Published : Oct 21, 2025, 01:00 AM IST
ಯರಗಟ್ಟಿ ತಾಲೂಕಿನ ಕೋಟೂರ-ಶಿವಾಪೂರ ಗ್ರಾಮದ 110 ಕೆವಿ ವಿದ್ಯುತ್ ಘಟಕವನ್ನು ಚಾಲ್ತಿ ಮಾಡುವಂತೆ ಸವದತ್ತಿ-ಬೈಲಹೊಂಗಲ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಬೆಳಗಾವಿ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕೆಪಿಟಿಸಿಎಲ್ ಅಧಿಕಾರಿಗಳಿಗೆ ಮೂರು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ವಿದ್ಯುತ್ ಘಟಕವನ್ನು ಪ್ರಾರಂಭಿಸುವಂತೆ ಗಡುವು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಯರಗಟ್ಟಿ

ತಾಲೂಕಿನ ಕೋಟೂರ- ಶಿವಾಪೂರ ಗ್ರಾಮ 110 ಕೆವಿ ವಿದ್ಯುತ್ ಘಟಕದ ಕಾಮಗಾರಿ ಪೂರ್ಣಗೊಳಿಸಿ, ಶೀಘ್ರವೇ ಪ್ರಾರಂಭಿಸುವಂತೆ ಒತ್ತಾಯಿಸಿ ಕೃಷಿ ಸಮಾಜ ವತಿಯಿಂದ ಹೆಸ್ಕಾಂ ಕಚೇರಿ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಕೃಷಿ ಸಮಾಜದ ರಾಜ್ಯಾಧ್ಯಕ್ಷ ಮಾಣಿಕ್ಯ ಚಿಲ್ಮೂರ ನೇತೃತ್ವದಲ್ಲಿ ಯರಗಟ್ಟಿ ವಿದ್ಯುತ್ ಕಚೇರಿ ಎದುರು ಪ್ರತಿಭಟಿಸಿದ ರೈತರು, ಕೆಪಿಟಿಸಿಎಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹಳ್ಳಿಗಳಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ರೈತರ ಬದುಕು ದುಸ್ತರವಾಗಿದೆ. ನೀರಿಲ್ಲದೇ ಬೆಳೆಗಳು ಒಣಗುತ್ತಿವೆ. ಸರಿಯಾದ ಸಮಯಕ್ಕೆ 110ಕೆವಿ ವಿದ್ಯುತ್ ಘಟಕ ಪ್ರಾರಂಭಿಸುವಂತೆ ಮತ್ತು ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿದರು.

ಯುವ ಘಟಕದ ರಾಜ್ಯಾಧ್ಯಕ್ಷ ಮಹಾಂತೇಶ ತೋಟಗಿ ಮಾತನಾಡಿ, ಕಳೆದ ಎರಡು ವರ್ಚಗಳಿಂದ 110 ಕೆವಿ ವಿದ್ಯುತ್ ಘಟಕದ ಕಾಮಗಾರಿ ವಿಳಂಬವಾಗಿದೆ. ಇದರಿಂದ ಕೋಟೂರ-ಶಿವಾಪೂರ ಸುತ್ತಮುತ್ತಲಿನ ಗ್ರಾಮಗಳಗೆ ವಿದ್ಯುತ್ ವ್ಯತ್ಯಯವಾಗಿ ಸಮಸ್ಯೆಯಾಗುತ್ತಿದೆ. ಸಾಲ ಮಾಡಿ ಜಮೀನಲ್ಲಿ ಬೆಳೆ ಬೆಳೆದಿದ್ದು, ಇದೀಗ ವಿದ್ಯುತ್ ಇಲ್ಲದೆ ಸರಿಯಾಗಿ ನೀರು ಹರಿಸಲಾಗುತ್ತಿಲ್ಲ. ಇದರಿಂದ ಬೆಳೆಗಳು ಒಣಗುತ್ತಿದ್ದು, ನಷ್ಟದಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.

ಯರಗಟ್ಟಿ ತಾಲೂಕಿನಲ್ಲಿ ಪ್ರತ್ಯೇಕ ವಿದ್ಯುತ್ ಪ್ರಸರಣ ಕೇಂದ್ರ ಇಲ್ಲದಿರುವುದರಿಂದ ಸರಿಯಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ. ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಸರಿಯಾಗಿ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಹನಮಂತ ಉಳ್ಳಾಗಡ್ಡಿ, ಅಶೋಕ ಹುಂಡೇಕಾರ, ಮಹಾವೀರ ಹುಕ್ಕೇರಿ, ಶ್ರೀಧರ ಉದಗಟ್ಟಿ, ತವನಪ್ಪ ಇಂಡಿ, ಮಲಕಾಜಿ ಅಂಗಡಿ, ಈರಣ್ಣಾ, ಲಕ್ಷೇಟ್ಟಿ, ಚಿದಾನಂದ ಹಮ್ಮನ್ನವರ, ಭೀಮಶಿ ಮಾಳಕ್ಕನವರ, ಸೈದುಸಾಬ ಸನದಿ, ಬಾಳಪ್ಪ ಬಾಗೇವಾಡಿ, ವಿಠ್ಠಲ ರೆಬ್ಬನ್ನವರ, ರಾಮಚಂದ್ರ ಬಡಿಗೇರ, ಸೋಮು ರೈನಾಪೂರ, ಮಲ್ಲಪ್ಪ ಡೋಣಿ ಸೇರಿದಂತೆ ಅನೇಕರು ಇದ್ದರು.

ಕೋಟೂರ- ಶಿವಾಪೂರ ಗ್ರಾಮದ 110 ಕೆವಿ ವಿದ್ಯುತ್ ಘಟಕ ಚಾಲ್ತಿ ಮಾಡುವಂತೆ ಸವದತ್ತಿ- ಬೈಲಹೊಂಗಲ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಬೆಳಗಾವಿ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಮೂರು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ವಿದ್ಯುತ್ ಘಟಕವನ್ನು ಪ್ರಾರಂಭಿಸುವಂತೆ ಗಡುವು ನೀಡಲಾಗಿದೆ. ಇಲ್ಲವಾದರೆ ಕೆಪಿಟಿಸಿಎಲ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದೆಂದು ಮಹಾಂತೇಶ ತೋಟಗಿ ಹೇಳಿದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ