ಮಾರ್ವಿ ಶೈಲಿಯ ಅಪೂರ್ವ ಭಾಗವತ, ಯಕ್ಷಗಾನಕ್ಕೆ ಅಮೂಲ್ಯ ಕೊಡುಗೆ ನೀಡಿದ ಹೆಗಡೆವಸಂತಕುಮಾರ್ ಕತಗಾಲ
ಪ್ರಸಿದ್ಧ ಕಲಾವಿದರನ್ನು ಕುಣಿಸುತ್ತ, ನೂರಾರು ಶಿಷ್ಯರಿಗೆ ಯಕ್ಷ ವಿದ್ಯೆಯನ್ನು ಧಾರೆ ಎರೆದು, ಶುದ್ಧ ಯಕ್ಷಗಾನೀಯ ಹಾಡನ್ನು ಉಣಬಡಿಸುತ್ತ ಯಕ್ಷಗಾನದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿದ ಬಡಗುತಿಟ್ಟಿನ ಹಿರಿಯ ಭಾಗವತ ಕೆ.ಪಿ. ಹೆಗಡೆ (ಕೃಷ್ಣ ಪರಮೇಶ್ವರ ಹೆಗಡೆ) ಅವರಿಗೀಗ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿದೆ.
ಪೆರ್ಡೂರು, ಸಾಲಿಗ್ರಾಮ, ಪಂಚಲಿಂಗೇಶ್ವರ, ಕುಮಟಾ, ಮಂದರ್ತಿ, ಕಮಲಶಿಲೆ ಹೀಗೆ ಪ್ರಸಿದ್ಧ ಮೇಳಗಳ ಪ್ರಮುಖ ಭಾಗವತರಾಗಿ ಜನಮನ್ನಣೆ ಗಳಿಸಿದ್ದ ಇವರು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯರಾಗಿಯೂ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ನೂರಾರು ಕಲಾವಿದರನ್ನು ರೂಪಿಸಿದ್ದಾರೆ.ಸರ್ವೇಶ್ವರ ಹೆಗಡೆ ಮೂರೂರು, ರವೀಂದ್ರ ಭಟ್ ಅಚವೆ, ಪರಮೇಶ್ವರ ನಾಯ್ಕ, ಲಂಬೋದರ ಹೆಗಡೆ, ಸುರೇಶ ಶೆಟ್ಟಿ, ಮತ್ತಿತರ ಪ್ರತಿಭಾವಂತ ಭಾಗವತರನ್ನು ಯಕ್ಷಗಾನಕ್ಕೆ ಕೊಟ್ಟ ಗುರು ಕೆ.ಪಿ. ಹೆಗಡೆ. ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ, ದಿ.ಶಂಭು ಹೆಗಡೆ ಕೆರಮನೆ, ಗೋಡೆ ನಾರಾಯಣ ಹೆಗಡೆ, ಕೃಷ್ಣ ಯಾಜಿ ಬಳ್ಕೂರ ಸೇರಿದಂತೆ ಬಹುತೇಕ ಪ್ರಸಿದ್ಧ ಕಲಾವಿದರಿಗೆಲ್ಲ ಸಮರ್ಥವಾಗಿ ಭಾಗವತಿಕೆ ಮಾಡಿದ್ದಾರೆ.
ಕೆ.ಪಿ. ಹೆಗಡೆ ಅವರದ್ದು ಉಪ್ಪೂರರ ಮಾರ್ವಿ ಶೈಲಿ. ಅಸಾಧಾರಣ ಲಯ. ತಾಳ. ಶುದ್ಧ ಯಕ್ಷಗಾನೀಯ ಹಾಡುಗಾರಿಕೆ, ಪ್ರತಿಯೊಬ್ಬ ಕಲಾವಿದನ ಸಾಮರ್ಥ್ಯವನ್ನೂ ಹೊರಹೊಮ್ಮಿಸುವ ಸಾಮರ್ಥ್ಯ. ಈಗಲೂ ಮಾರ್ವಿ ಶೈಲಿಯ ಅಪ್ಪಟ ವಾರಸುದಾರರೆಂದೆ ಕೆ.ಪಿ. ಹೆಗಡೆ ಅವರೇ. ದಿ.ಕಾಳಿಂಗ ನಾವುಡ ಪ್ರಶಸ್ತಿ, ಅನಂತಶ್ರೀ ಪ್ರಶಸ್ತಿ, ಯಕ್ಷಗಾನ ರತ್ನ ಮತ್ತಿತರ ಪ್ರಶಸ್ತಿಗಳು ಇವರಿಗೆ ಸಂದಿವೆ.