ಕನ್ನಡಪ್ರಭ ವಾರ್ತೆ ಅಫಜಲ್ಪುರ ಕರಜಗಿ
ಅಫಜಲಪೂರ ತಾಲೂಕಿನ ಚೀಣಮಗೇರದ ಕೆಪಿಆರ್ ಸಕ್ಕರೆ ಕಾರ್ಖಾನೆ ರಾತ್ರಿ ವೇಳೆ ಕಾರ್ಖಾನೆಯ ತ್ಯಾಜ್ಯ ನೀರನ್ನು ರೈತರ ಜಮೀನಿಗೆ ಹರಿಯಲುಬಿಟ್ಟಿದೆ. ಪರಿಣಾಮವಾಗಿ ಜಮೀನಿನಲ್ಲಿನ ಬೆಳೆ ನಾಶವಾಗಿದೆ ಎಂದು ಚಿಣಮಗೇರ ಗ್ರಾಮದ ರೈತ ಮಹಾಂತಯ್ಯ ಸ್ವಾಮೀ ಕಣ್ಣೀರು ಹಾಕಿದ್ದಾರೆ.ಸಕ್ಕರೆ ಕಾರ್ಖಾನೆ ತ್ಯಾಜ್ಯ ನೀರು ಜಮೀನಿಗೆ ಹರಿಯಲು ಬಿಟ್ಟು ರೈತರ ಬದುಕಿನ ಜೊತೆಗೆ ಕಳ್ಳಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಾರ್ಖಾನೆಯ ತ್ಯಾಜ್ಯ ನೀರು ಸಂಪೂರ್ಣವಾಗಿ ಜಮೀನಿಗೆ ನುಗ್ಗಿ ಬೆಳೆಗಳು ಹಾಳಾಗಿವೆ. ಜಮೀನಿನಲ್ಲಿ ಮಲೀನ ನೀರು ನಿಲ್ಲುವದರಿಂದ ಧನಕರುಗಳಿಗೆ ಕುಡಿಯಲು ನೀರಿನ ಅಭಾವವಾಗುತ್ತಿದೆ ಎಂದು ದೂರಿದ್ದಾರೆ.ಲಕ್ಷಾಂತರ ಬೆಲೆ ಬಾಳುವ ಬೆಳೆಗೆಳು ಈ ಕಾರ್ಖಾನೆಯ ತ್ಯಾಜ್ಯ ನೀರಿಗೆ ಒಣಗಿ ನಾಶವಾಗುತ್ತಿವೆ, ರೈತರ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಹೀಗೆ ಮುಂದುವರೆದರೆ ಹೊಟ್ಟೆಗೆ ಹಿಟ್ಟು ಇಲ್ಲದೆ ನಾವು ಆತ್ಮ ಹತ್ಯೆ ಮಾಡಿಕೊಳ್ಳಬೇಕಾಗುತ್ತೆ. ಕೂಡಲೇ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಹಾಗೂ ತಾಲೂಕು ತಹಸೀಲ್ದಾರ್ ಮತ್ತು ಶಾಸಕರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಶೀಘ್ರ ನ್ಯಾಯ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಹೋರಾಟಗಾರ ಹಾಗೂ ರೈತ ಮುಖಂಡ ರಮೇಶ ಜಮಾದಾರ ಮಾತನಾಡಿದ್ದು, ಕೆಪಿಆರ್ ಸಕ್ಕರೆ ಕಾರ್ಖಾನೆ ರೈತರ ಹಿತ ಕಾಪಾಡುವಂತ ಕೆಲಸ ಮಾಡಬೇಕು, ಹೊರತು ರೈತರ ಬದುಕನ್ನು ಬೀದಿಗೆ ತರುವಂತ ಕೆಲಸ ಮಾಡಬಾರದು. ಏಕೆಂದರೆ ಇಡಿ ಕಾರ್ಖಾನೆಯ ತ್ಯಾಜ್ಯ ನೀರು ರೈತರ ಜಮೀನುಗಳನ್ನು ನುಂಗಿ ಹಾಕುತ್ತಿದೆ, ಅಲ್ಲಿ ಯಾವುದೇ ಬೇಳೆ ಬೆಳೆಯಲು ಆಗುತ್ತಿಲ್ಲ. ಇದರಿಂದ ರೈತರಿಗೆ ತೊಂದರೆ ಆಗುತ್ತಿದೆ. ತಕ್ಷಣ ಈ ಬಗ್ಗೆ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.ಈ ಕುರಿತು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಲಕ್ಷ ತೋರುತ್ತಿದೆ, ನೀರು ನೇರ ಹೊಳೆಗೆ ಸೇರಿದರೆ ತೊಂದರೆ ಇಲ್ಲ. ಅಚ್ಚುಕಟ್ಟಾಗಿ ಕಾಲುವೆ ನಿರ್ಮಿಸಿದರೆ ರೈತರ ಜಮೀನಿಗೆ ನೀರು ಸೇರುವದಿಲ್ಲ, ಈ ಬಗ್ಗೆ ಕಾರ್ಖಾನೆಯವರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ತ್ಯಾಜ್ಯ ನೀರು ರೈತರ ಜಮೀನಿಗೆ ಸೇರದಂತೆ ಜಾಗ್ರತೆವಹಿಸಬೇಕು. ಬೆಳೆ ನಾಶವಾಗಿ ಜಮೀನಿಗೆ ಹಾನಿಯಾದ್ದರಿಂದ ರೈತ ಮಹಾಂತಯ್ಯಸ್ವಾಮಿಗೆ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಕಾರ್ಖಾನೆ ಎರಡು ಗೆಟ್ ಬಂದ ಮಾಡಿ, ನ್ಯಾಯಾಲಯದಲ್ಲಿ ಮೊಕದಮ್ಮೆದಾಖಲಿಸಿ ಕಾರ್ಖಾನೆ ಬಂದ್ ಮಾಡಿಸಬೇಕಾಗುತ್ತದೆ. ಜೈಲಿಗೆ ಹೋಗಲು ಸಿದ್ದರಿದ್ದೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಕೆಪಿಆರ್ ಸಕ್ಕರೆ ಕಾರ್ಖಾನೆ ಚಿಣಮಗೇರದವರು ಪದೇ ಪದೇ ರೈತರ ಜಮೀನುಗಳಿಗೆ ರಾತ್ರಿ ಸಮಯ ತ್ಯಾಜ್ಯ ನೀರು ಬಿಡುತಿದ್ದು, ರೈತ ಮಹಾಂತಯ್ಯ ಸ್ವಾಮೀ ಜಮೀನಿನ ಬೇಳೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ತ್ಯಾಜ್ಯ ನೀರು ಬಿಡುವುದನ್ನು ಕಾರ್ಖಾನೆ ನಿಲ್ಲಿಸಬೇಕು. ರೈತನಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ರಾಜ್ಯ ರೈತ ಸಂಘ ಹಸಿರು ಸೇನೆಯು ಕಾರ್ಖಾನೆಯ ಮುಖ್ಯ ಗೆಟ್ ಬಂದ್ ಮಾಡಿ, ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಹಸಿರು ಕಲಬುರ್ಗಿಯ ಕಾರ್ಯದರ್ಶಿ ಮಹಾಂತೇಶ್ ಜಮಾದಾರ ಹೇಳಿದ್ದಾರೆ.