ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಖಂಡಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ತಾಲೂಕಿನ ಬಟ್ಲಕಟ್ಟೆಯಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.
- ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಸರ್ಕಾರ ಕ್ರಮಕ್ಕೆ ಖಂಡನೆ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಖಂಡಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ತಾಲೂಕಿನ ಬಟ್ಲಕಟ್ಟೆಯಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಸುಮನ್ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಬಡವರ ಮಕ್ಕಳನ್ನು ಶಿಕ್ಷಣದಿಂದ ದೂರ ತಳ್ಳುವುದಾಗಿದೆ. ಆದ್ದರಿಂದ ಹಳ್ಳಿಗಳಲ್ಲಿ ಪ್ರತಿರೋಧ ಚಳವಳಿಗಳು ಬೆಳೆಯಬೇಕಿದೆ ಎಂದು ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಜನಗಳ ನಂಬಿಕೆಗೆ ದ್ರೋಹ ಬಗೆಯುತ್ತಿದೆ. ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಹೇಳಿಕೆ ನೀಡುತ್ತದೆ. ಆದರೆ, ಹೇಳಿಕೆ ಬೆನ್ನಲ್ಲೇ ನಾವು ಗ್ರಾಮ ಪಂಚಾಯಿತಿಗೆ ಬಂದು ಶಾಲೆ ತರುತ್ತೇವೆ, ಎಸ್‌ಡಿಎಂಸಿ ಸದಸ್ಯರು ಮತ್ತು ಪೋಷಕರು ಒಪ್ಪಿದರೆ ಆ ಶಾಲೆ ವಿಲೀನವಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಅವರೇ ಹೇಳುತ್ತಿದ್ದಾರೆ. ಹಾಗಾದರೆ ಯಾವುದು ಸತ್ಯ? ಹದಡಿ ಮ್ಯಾಗ್ನೆಟ್ ಶಾಲೆ ಆಗುತ್ತಿದ್ದು, ಈ ಶಾಲೆಗೆ ಬಟ್ಟಲಕಟ್ಟೆ ಮತ್ತು ಹೊಸ ಬೆತ್ತಲೆರಿ ಗ್ರಾಮದ 2 ಸರ್ಕಾರಿ ಶಾಲೆಗಳನ್ನ ಉನ್ನತೀಕರಣದ ಹೆಸರಿನಲ್ಲಿ ವಿಲೀನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗಾದರೆ ಬಟ್ಟಲಕಟ್ಟೆ ಗ್ರಾಮದ ಶಾಲೆ ಬಾಗಿಲು ಮುಚ್ಚುತ್ತದೆ ಎಂದರು.
ಬಟ್ಟಲಕಟ್ಟ ಗ್ರಾಪಂ ಸದಸ್ಯ ಬೀರೇಶ ಮಾತನಾಡಿ, 60 ವರ್ಷ ಇತಿಹಾಸದ ಶಾಲೆಯನ್ನು ಬಾಗಿಲು ಮುಚ್ಚಲು ಬಿಡುವುದಿಲ್ಲ. 10 ವರ್ಷದ ಕೆಳಗಿನ ಮಕ್ಕಳು ದೂರದ ಊರಿಗೆ ಹೋಗಿ ಬರುವುದು ಬಹಳ ಕಷ್ಟವಾಗಲಿದೆ. ನಮಗೆ ಮ್ಯಾಗ್ನೆಟ್ಟು ಬೇಡ, ಏನೂ ಬೇಡ. ನಮ್ಮ ಊರ ಶಾಲೆ ನಮಗೆ ಬೇಕು ಎಂದು ಸ್ಪಷ್ಟಪಡಿಸಿದರು.
ಎಐಕೆಕೆಎಂಎಸ್ ರೈತ ಮುಖಂಡರಾದ ಮಧು ತೊಗಲೇರಿ, ಎಐಡಿಎಸ್‌ಓ ಜಿಲ್ಲಾ ಕಾರ್ಯಕರ್ತ ಎಚ್.ಡಿ. ಗಂಗಾಧರ, ರೈತ ಸಂಘಟನೆಯ ಕಾರ್ಯಕರ್ತ ರಾಜು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಂಜಿನಪ್ಪ, ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
- - -
-21ಕೆಡಿವಿಜಿ31:
ದಾವಣಗೆರೆ ತಾಲೂಕಿನ ಬಟ್ಟಲಕಟ್ಟೆಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಖಂಡಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.