ಕೆಪಿಎಸ್ಸಿ ಅಧ್ಯಕ್ಷ ಸಾಹುಕಾರ್‌ ಮತ್ತೆ ಸಸ್ಪೆಂಡ್‌

KannadaprabhaNewsNetwork |  
Published : Aug 26, 2026, 02:00 AM IST
ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ವರದಿ. | Kannada Prabha

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಮತ್ತೆ ಅಮಾನತುಗೊಳಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಮತ್ತೆ ಅಮಾನತುಗೊಳಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶಕ್ಕೆ ಶಿವಶಂಕರಪ್ಪ ಸಾಹುಕಾರ್ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಇದೀಗ ಮತ್ತೊಮ್ಮೆ ಆ.18 ರಂದು ಹೈಕೋರ್ಟ್‌ ನೀಡಿದ್ದ ಆದೇಶ ಹಾಗೂ ಆ.21ರ ಸಚಿವ ಸಂಪುಟ ಸಭೆಯ ಸಲಹೆಯ ಮೇರೆಗೆ ಶಿವಶಂಕರಪ್ಪ ಅವರನ್ನು ಅಮಾನತುಗೊಳಿಸಿದ್ದು, ರಾಷ್ಟ್ರಪತಿಗಳ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ ಎಂದು ಲೋಕಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ತಮ್ಮ ಪುತ್ರಿಗೆ ಅಕ್ರಮವಾಗಿ ಸರ್ಕಾರಿ ಕೆಲಸಕ್ಕೆ ಸೇರಲು ಸಹಕರಿಸಿರುವ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ರಾಜ್ಯಪಾಲರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಜು.10 ರಂದು ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿದ್ದರು.

ಆದರೆ ರಾಜ್ಯ ಸಚಿವ ಸಂಪುಟದ ಸಲಹೆ, ಶಿಫಾರಸು ಇಲ್ಲದೆ ಅಮಾನತು ಆದೇಶ ಮಾಡಲಾಗಿದೆ ಎಂಬ ಕಾರಣಕ್ಕೆ ಆದೇಶ ರದ್ದುಪಡಿಸಲು ಶಿವಶಂಕರಪ್ಪ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಯು ರಾಜ್ಯಪಾಲರಿಗೆ ಶಿವಶಂಕರಪ್ಪ ಅವರ ಅಮಾನತಿಗೆ ಶಿಫಾರಸು ಮಾಡಿ ಘಟನೋತ್ತರ ತೀರ್ಮಾನ ಮಾಡಿತ್ತು.

ಆದರೆ, ಹೈಕೋರ್ಟ್‌ ಘಟನೋತ್ತರ ಸಂಪುಟ ತೀರ್ಮಾನವನ್ನು ಪುರಸ್ಕರಿಸಿಲ್ಲ. ರಾಜ್ಯ ಸಂಪುಟ ಸಭೆಯ ಶಿಫಾರಸು ಇಲ್ಲದೆ ಅಮಾನತು ಮಾಡಿರುವುದು ಕಾನೂನು ಬದ್ಧವಲ್ಲ ಎಂಬ ಕಾರಣ ನೀಡಿ ಶಿವಶಂಕರಪ್ಪ ಸಾಹುಕಾರ್‌ ಅಮಾನತು ಆದೇಶ ರದ್ದುಪಡಿಸಿತ್ತು. ಹೀಗಾಗಿ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಮತ್ತೆ ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ಹೈಕೋರ್ಟ್‌ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ಆ.21 ರಂದು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡುವಂತೆ ಮತ್ತೊಮ್ಮೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಂಪುಟ ತೀರ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಬಿದ್ದಿದೆ.ಸಾಹುಕಾರ್‌, ಜ್ಞಾನೇಂದ್ರ ಸೇರಿ

30 ಜನಕ್ಕೆ ಸಿಐಡಿ ಬುಲಾವ್:ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಸಂಬಂಧ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಹಾಗೂ ನಿಗೂಢವಾಗಿ ಅಜ್ಞಾತವಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಸೇರಿ ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) 30 ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿದೆ.ನಗರದ ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿ ಮುಂದೆ ಆ.27ರ ಗುರುವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಶಿವಶಂಕರಪ್ಪ ಸೇರಿದಂತೆ 30 ಜನರಿಗೆ ಮಂಗಳವಾರ ಸಿಐಡಿ ಸೂಚಿಸಿದೆ.ಈ ಬೆನ್ನಲ್ಲೇ ನೇಮಕಾತಿ ಅಕ್ರಮ ಬಯಲಾದ ಬಳಿಕ ಬಂಧನ ಭೀತಿಯಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಜ್ಞಾತವಾಗಿರುವ ಶಿವಶಂಕರಪ್ಪ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರು ವಿಚಾರಣೆಗೆ ಬರಲಿದ್ದಾರೆಯೇ ಎಂಬ ಕುತೂಹಲ ಮೂಡಿದಿದೆ. ವಿಚಾರಣೆಗೆ ಗೈರಾದರೆ ಮುಂದಿನ ಕಾನೂನು ಕ್ರಮಕ್ಕೆ ಸಿಐಡಿ ಸಹ ಆಲೋಚಿಸಿದೆ ಎನ್ನಲಾಗಿದೆ.ಐಎಎಸ್ ಅಧಿಕಾರಿ ಊರಿಗೆ ನೋಟಿಸ್:ಉತ್ತರಪ್ರದೇಶದ ಬರೇಲಿಯಲ್ಲಿರುವ ಜ್ಞಾನೇಂದ್ರ ಅವರ ಹುಟ್ಟೂರಿನ ವಿಳಾಸಕ್ಕೆ ಸಿಐಡಿ ನೋಟಿಸ್ ರವಾನಿಸಿದೆ. ಇನ್ನುಳಿದಂತೆ ಶಿವಶಂಕಪ್ಪ ಹಾಗೂ ಇತರೆ ಅಧಿಕಾರಿಗಳ ಮನೆಗಳಿಗೆ ನೋಟಿಸ್ ನೀಡಿದ್ದಾರೆ.

ಕೆಪಿಎಸ್‌ಸಿ ಮೇಲೆ ಮತ್ತೆ ದಾಳಿ:ನೇಮಕಾತಿ ಹಗರಣ ಸಂಬಂಧ ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ದಾಳಿ ನಡೆಸಿ ದಾಖಲೆಗಳನ್ನು ಸಿಐಡಿ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ್ದಾರೆ.ಆ.5ರಂದು ಕೆಪಿಎಸ್‌ಸಿ ಮೇಲೆ ಸಿಐಡಿ ದಾಳಿ ನಡೆಸಿತ್ತು. ಈಗ ಎರಡನೇ ಬಾರಿಗೆ ಕೆಪಿಎಸ್‌ಸಿಯಲ್ಲಿ ಶೋಧನೆ ನಡೆಸಿ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ 11 ಗಂಟೆಗೆ ಎಸ್ಪಿ ರಾಘವೇಂದ್ರ ಹೆಗಡೆ ಸಾರಥ್ಯದಲ್ಲಿ ಕಾರ್ಯಾಚರಣೆಗಿಳಿದ ಸಿಐಡಿ ಅಧಿಕಾರಿಗಳು, ಸುಮಾರು ಏಳು ತಾಸು ಕೆಪಿಎಸ್‌ಸಿಯಲ್ಲಿ ಜಾಲಾಡಿದ್ದಾರೆ.ಅಭ್ಯರ್ಥಿಗಳಿಗೆ ಸಿಐಡಿ ಪುನಃ ಬುಲಾವ್:ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಆ ಹುದ್ದೆಗಳಿಗೆ ಆಯ್ಕೆಯಾದ ಎಲ್ಲ 329 ಅಭ್ಯರ್ಥಿಗಳನ್ನು ಎರಡನೇ ಬಾರಿಗೆ ವಿಚಾರಣೆಗೊಳಪಡಿಸಲು ಸಿಐಡಿ ಮುಂದಾಗಿದೆ. ಈ ಸಂಬಂಧ ಅಭ್ಯರ್ಥಿಗಳಿಗೆ ನೋಟಿಸ್ ನೀಡಿರುವ ಸಿಐಡಿ, ಗುರುವಾರದಿಂದ ಹಂತ ಹಂತವಾಗಿ ಅಭ್ಯರ್ಥಿಗಳನ್ನು ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಳ್ಳಲಿದೆ.ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆದಾಗ ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕಾರ್ಯನಿರ್ವಹಿಸಿದ್ದರು. ಇದೇ ಹಗರಣ ಸಂಬಂಧ ಇ.ಡಿ. ತನಿಖೆ ಶುರುವಾದ ನಂತರ ಬೆಂಗಳೂರು ತೊರೆದು ಅವರು ಅಜ್ಞಾತವಾಗಿದ್ದಾರೆ. ವೈಯಕ್ತಿಕ ವಿಷಯವಾಗಿ ರಜೆ ಪಡೆದು ತೆರಳಿರುವ ಜ್ಞಾನೇಂದ್ರ ಅವರು ಎರಡ್ಮೂರು ದಿನಗಳಲ್ಲಿ ಮರಳಲಿದ್ದಾರೆ ಎಂದು ಖುದ್ದು ರಾಜ್ಯ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇದಾದ ನಂತರವೂ ಅವರು ನಿಗೂಢವಾಗಿಯೇ ಉಳಿದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗು, ಕರಾವಳಿಯಲ್ಲಿ ಭರ್ಜರಿ ಮಳೆ
ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್​