)
ಕನ್ನಡಪ್ರಭ ವಾರ್ತೆ ಬೆಂಗಳೂರು:
ಈಗಾಗಲೇ ಸಿಐಡಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರ ಬೆನ್ನಲ್ಲೇ ಇ.ಡಿ ಅಧಿಕಾರಿಗಳು ಶುಕ್ರವಾರ ಸಂಜೆ ಈ ಇಬ್ಬರನ್ನೂ ಬಂಧಿಸಿದೆ. ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿಗಳನ್ನು ಇ.ಡಿ ಅಧಿಕಾರಿಗಳು ಸೋಮವಾರ(ಸೆ.21) ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇ.ಡಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಕಳೆದ ಮೂರು ದಿನಗಳಿಂದ ಈ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಆರೋಪಿಗಳು ವಿಚಾರಣೆಗೆ ಸಮರ್ಪಕವಾಗಿ ಸಹಕರಿಸದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಹಿಂದೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಸಂದರ್ಭದಲ್ಲಿ ಮಧ್ಯವರ್ತಿ ಬಸವರಾಜು ಕನ್ನಾಳೆ ಜತೆ ಸೇರಿಕೊಂಡು ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಆ.18ರಂದು ಇ.ಡಿ. ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದರು. ಇ.ಡಿ ದಾಳಿ ಬೆನ್ನಲ್ಲೇ ಆತ ರಾಜ್ಯದಿಂದಲೇ ಪರಾರಿಯಾಗಿದ್ದರು. ಈ ನಡುವೆ ಸಿಐಡಿ ಅಧಿಕಾರಿಗಳು ಈ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ ಕನ್ನಾಳೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಇಬ್ಬರನ್ನು ಬಂಧಿಸಿದ್ದರು. ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಆರೋಪಿ ಜ್ಞಾನೇಂದ್ರ ಕುಮಾರ್ ₹52 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಜ್ರಾಭರಣ ಖರೀದಿಸಿ ಸ್ನೇಹಿತೆಗೆ ಉಡುಗೊರೆ ನೀಡಿದ್ದಾರೆ. ಮಧ್ಯವರ್ತಿ ಬಸವರಾಜ ಕನ್ನಾಳೆ ಬ್ಯಾಂಕ್ ಖಾತೆಯಿಂದ ಜ್ಯುವೆಲ್ಲವರಿ ಅಂಗಡಿಗೆ ಹಣ ಪಾವತಿಸಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಂತೆಯೇ ಕೆಲ ಅಭ್ಯರ್ಥಿಗಳು ಬಸವರಾಜ ಕನ್ನಾಳೆ ಅವರ ಬ್ಯಾಂಕ್ ಖಾತೆಗೆ ಲಕ್ಷಾಂತರ ರು. ಹಣ ಪಾವತಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಕೆಲ ಅಭ್ಯರ್ಥಿಗಳು ನಗದು ರೂಪದಲ್ಲೇ ಆರೋಪಿಗಳಿಗೆ ಹಣ ನೀಡಿರುವುದು ತಿಳಿದುಬಂದಿದೆ. ಈ ಅಕ್ರಮ ಹಣ ವರ್ಗಾವಣೆ ಸಂಬಂಧ ಇ.ಡಿ.ಅಧಿಕಾರಿಗಳು ವಿಚಾರಣೆ ನಡೆಸಲು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಜ್ಞಾನೇಂದ್ರ ಕುಮಾರ್ ಮತ್ತು ಅವರ ಸ್ನೇಹಿತೆಗಾಗಿ 23 ವಿಮಾನ ಟಿಕೆಟ್‌ಗಳು ಮತ್ತು ಇತರೆ ವೆಚ್ಚಗಳಿಗಾಗಿ ಬಸವರಾಜ ಕನ್ನಾಳೆ ₹11 ಲಕ್ಷ ಭರಿಸಿದ್ದರು. ಬೀದರ್‌ನ ಭಗವತಿ ಎಂಟರ್‌ಪ್ರೈಸಸ್ ಮೂಲಕ ಈ ವಿಮಾನದ ಟಿಕೆಟ್‌ಗಳನ್ನು ಖರೀದಿಸಿದ್ದರು. ಜ್ಞಾನೇಂದ್ರ ಕುಮಾರ್ ಮತ್ತು ಅವರ ಸ್ನೇಹಿತೆ ಉತ್ತರಪ್ರದೇಶ ಸೇರಿ ದೇಶದ ವಿವಿಧ ಸ್ಥಳಗಳಿಗೆ ವಿಮಾನದಲ್ಲಿ ಪ್ರಯಾಣಿಸಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.