ಕ್ಯಾಬಿನೆಟ್‌ ಏನು ಟೂರಿಂಗ್‌ ಟಾಕೀಸಾ?: ಎಚ್‌ಡಿಕೆ

KannadaprabhaNewsNetwork |  
Published : Sep 20, 2026, 03:00 AM IST
ಎಚ್‌ಡಿಕೆ | Kannada Prabha

ಸಾರಾಂಶ

‘ಜಿಲ್ಲೆಗೊಂದು ಸಚಿವ ಸಂಪುಟ ಸಭೆ ಮಾಡಲು ಕ್ಯಾಬಿನೆಟ್‌ ಏನು ಟೂರಿಂಗ್‌ ಟಾಕೀಸಾ’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಜಿಲ್ಲೆಗೊಂದು ಸಚಿವ ಸಂಪುಟ ಸಭೆ ಮಾಡಲು ಕ್ಯಾಬಿನೆಟ್‌ ಏನು ಟೂರಿಂಗ್‌ ಟಾಕೀಸಾ’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಂಗಲ್‌ ಹನುಮಂತಯ್ಯ ಅವರು ವಿಧಾನಸೌಧದಲ್ಲಿ ಕ್ಯಾಬಿನೆಟ್‌ ಹಾಲ್‌ ಕಟ್ಟಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಕ್ಯಾಬಿನೆಟ್ ಸಭೆ ಮಾಡುವುದರ ಫಲವೇನು? ಈ ಹಿಂದಿನ ಮುಖ್ಯಮಂತ್ರಿಗಳು ಸಹ ಜಿಲ್ಲಾ ಕೇಂದ್ರಗಳಲ್ಲಿ ಕ್ಯಾಬಿನೆಟ್‌ ಸಭೆ ಮಾಡಿದ್ದರು. ಫಲ ಏನು ಸಿಕ್ಕಿದೆ ಎಂದು ಕೇಳಿದರು.

ಈಗ ಜಿಲ್ಲೆಗಳಿಗೆ ದಂಡು ದಾಳಿ ಕರೆದುಕೊಂಡು ದುಂದು ವೆಚ್ಚ ಮಾಡಿಕೊಂಡು ಕ್ಯಾಬಿನೆಟ್‌ ಸಭೆ ಮಾಡುತ್ತಿದ್ದಾರೆ. ಇದು ಪ್ರಚಾರದ ಸ್ಟಂಟ್‌ ಬಿಟ್ಟರೆ ಬೇರೇನೂ ಅಲ್ಲ. ಹೊರಗೆ ಕ್ಯಾಬಿನೆಟ್‌ ಸಭೆ ಮಾಡಲು ಇವರು ಖರ್ಚು ಮಾಡುತ್ತಿರುವ ಹಣವನ್ನು ರೈತರಿಗಾದರೂ ಕೊಟ್ಟಿದ್ದರೆ ಅವರಿಗೆ ಸಹಾಯ ಆಗುತ್ತಿತ್ತು ಎಂದು ಹೇಳಿದರು.

ಮೊದಲೇ ರಾಜ್ಯದ ಬೊಕ್ಕಸಕ್ಕೆ ಭಾರ ಹೆಚ್ಚಾಗಿದೆ. ಅದರ ಜತೆಗೆ ಇಂಥ ದುಂದುವೆಚ್ಚ ಬೇರೆ. ಇಂಥ ಪ್ರವಾಸಗಳು ಸರ್ಕಾರಕ್ಕೆ ಹೊರೆಯೇ ಹೊರತು ಬೇರೇನೂ ಅಲ್ಲ. ಜನರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ. ಇಂಥ ಸಭೆಗಳಿಂದ ರಾಜ್ಯ ಉದ್ಧಾರ ಆಗುವುದಿಲ್ಲ ಎಂದು ಹರಿಹಾಯ್ದರು.

ಜಾತಿ ಹೆಸರು ಹೇಳಿಕೊಂಡರೆ ಉಪಯೋಗವಿಲ್ಲ:

ಕಳೆದ 30-40 ವರ್ಷಗಳಿಂದ ಎಚ್‌.ಡಿ.ದೇವೇಗೌಡರ ಹೋರಾಟದ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯ ನಮ್ಮ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಹಲವು ಜನ ನನ್ನ ಬಳಿ ಬಂದು ಒಕ್ಕಲಿಗ ಮುಖ್ಯಮಂತ್ರಿ ಇದ್ದಾರೆ. ಆರಾಮಾಗಿ ಕೆಲಸ ಮಾಡಿಕೊಂಡು ಹೋಗಲು ಬಿಡಿ ಎನ್ನುತ್ತಾರೆ. ಒಳ್ಳೇ ರೀತಿಯ ಕೆಲಸ ಮಾಡಿದರೆ ನಾವು ಬೆಂಬಲ ಕೊಡುತ್ತೇವೆ. ರಾಜ್ಯದಲ್ಲಿ ಮುಖ್ಯಮಂತ್ರಿ ಆದವರು ಜಾತಿ ಹೆಸರಿನಲ್ಲಿ ಕೆಲಸ ಮಾಡಲು ಆಗುವುದಿಲ್ಲ. ರಾಜ್ಯದ ಆರೂವರೆ ಕೋಟಿ ಜನರ ಸೇವೆ ಮಾಡಬೇಕು. ಜಾತಿ ಹೆಸರು ಹೇಳಿಕೊಂಡು ಹೋದರೆ ಉಪಯೋಗಕ್ಕೆ ಬರಲ್ಲ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

-ಕೋಟ್‌-

ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮೊದಲು 24 ಎಇಇ ಕಾನೂನು ಬಾಹಿರ ನೇಮಕಾತಿ ಬಗ್ಗೆ ಉತ್ತರ ಕೊಡಲಿ. ನಾನು ಹಿಟ್‌ ಆ್ಯಂಡ್‌ ರನ್‌ ಮಾಡುವುದಿಲ್ಲ. ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ. ಯಾರು ಎಷ್ಟಾದರೂ ವ್ಯಂಗ್ಯವಾಗಿ ಮಾತಾಡಲಿ.

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಗಲು ನಿರಂತರ ೭ ಗಂಟೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಿ
ಕ್ವಾರಿ ಮಾಲೀಕರಿಗೆ ನೋಟಿಸ್ ನೀಡಿರುವವರ ಪೈಕಿ ನಾನೂ ಒಬ್ಬ-ಸಚಿವ ಲಮಾಣಿ