ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪ್ರಖ್ಯಾತ ಪ್ರಬಂಧಕಾರ, ದಿ.ಎ.ಎನ್.ಮೂರ್ತಿರಾಯರ ಪುತ್ಥಳಿಯನ್ನು ಹುಟ್ಟೂರು ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶಾಸಕ ಎಚ್.ಟಿ.ಮಂಜು ಅನಾವರಣಗೊಳಿಸಿದರು.ಗ್ರಾಮದ ಯುವಕರು ಮತ್ತು ಸಾಹಿತ್ಯ ಪ್ರೇಮಿಗಳು ಹಿರಿಯರ ಮಾರ್ಗದರ್ಶನದಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿರಾಯರ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಶಾಸಕರು, ಕೃಷ್ಣರಾಜಪೇಟೆ ತಾಲೂಕು ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದೀಯವಾಗಿ ಶ್ರೀಮಂತವಾಗಿದೆ. ಮಲೆ ಮಹದೇಶ್ವರರ ಮೊಟ್ಟ ಮೊದಲ ಪವಾಡ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಘಟಿಸಿದೆ ಎಂದು ಜಾನಪದೀಯ ಐತಿಹ್ಯಗಳು ದಾಖಲಿಸಿವೆ ಎಂದರು.ಹಿರಿಯ ವಚನಕಾರ ಸ್ವತಂತ್ರ ಸಿದ್ದಲಿಂಗೇಶ್ವರರು, ಬೈರವೇಶ್ವರ ಕಾವ್ಯ ಕರ್ತೃ ನಂಜುಂಡಾರಾಧ್ಯ, ಜಾನಪದ ಮುಂಗೋಳಿ ಅರ್ಚಕ ರಂಗಸ್ವಾಮಿ ಭಟ್ಟ, ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿ, ಯುಗಸಂಧ್ಯಾ ಮಹಾಕಾವ್ಯದ ಕತೃ ಪ್ರೊ.ಸುಜನಾ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ ಎಂದು ಹೇಳಿದರು.
ಅಧುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರ ಸಾಲಿನ ಮುಂಚೂಣಿಯಲ್ಲಿ ಅಕ್ಕಿಹೆಬ್ಬಾಳು ಎ.ಎನ್.ಮೂರ್ತಿರಾಯರು ಇದ್ದಾರೆ. ಅಕ್ಕಿಹೆಬ್ಬಾಳು ಕನ್ನಡ ಸಾರಸ್ವತ ಲೋಕಕ್ಕೆ ಮಹತ್ತರ ಕಾಣಿಕೆ ನೀಡಿದೆ. ಮೂರ್ತಿರಾಯರಲ್ಲದೆ ಹಾಸ್ಯ ಸಾಹಿತಿ, ಅ.ರಾ.ಮಿತ್ರ, ಅ.ನ.ಸು., ಎ.ಎಸ್.ಮೂರ್ತಿ ಅವರಂತಹ ಮಹಾನ್ ಸಾಹಿತಿಗಳನ್ನು ಅಕ್ಕಿಹೆಬ್ಬಾಳಿನ ಮಣ್ಣು ನಾಡಿನ ಸಾಂಸ್ಕೃತಿಕ ಮತ್ತು ಸಾಹಿತಿಕ ಕ್ಷೇತ್ರಕ್ಕೆ ನೀಡಿದೆ ಎಂದರು.ಪ್ರೊಫೆಸರ್ ಮೂರ್ತಿರಾಯರು ಅಕ್ಕಿಹೆಬ್ಬಾಳು ಗ್ರಾಮದವರು ಎಂಬುದು ನಮ್ಮ ಹೆಮ್ಮೆ. ಗ್ರಾಮದಿಂದ ಪ್ರಾರಂಭವಾದ ಸಾಹಿತ್ಯ ಕೃಷಿಯು ಇಡೀ ವಿಶ್ವವನ್ನೇ ತಿರುಗಿನೋಡುವಂತೆ ಮಾಡಿದೆ. ಪಂಪ ಪ್ರಶಸ್ತಿ ಪಡೆದಿರುವ ದೇವರು ಕೃತಿ ನಿಜಕ್ಕೂ ಸಾಹಿತ್ಯದ ಹೊಸ ಅಧ್ಯಯನವೇ ಬದಲಾಗುವ ಹಾಗೆ ಮಾಡುತ್ತದೆ ಎಂದು ಹೇಳಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಜಮೀರ್ ಅಹಮದ್ ಮತ್ತು ಸಮಾಜ ಸೇವಕರಾದ ಎ.ಆರ್.ರಘು ಮುಂತಾದವರು ಸೇರಿ ಗ್ರಾಮದಲ್ಲಿ ಸುಂದರ ವೃತ್ತವನ್ನು ನಿರ್ಮಿಸಿ ತಮ್ಮೂರಿನ ಶ್ರೇಷ್ಠ ಸಾಹಿತಿಯ ಪುತ್ಥಳಿ ಪ್ರತಿಷ್ಠಾಪಿಸಿರುವುದು ಶ್ಲಾಘನೀಯ ಎಂದರು.ಗ್ರಾಮ ಮುಖಂಡ ಎ.ಆರ್.ರಘು ಮಾತನಾಡಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ಉದ್ಯಾನವನ ನಿರ್ಮಿಸಲು ಸಸಿಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಪ್ರೊ.ಲಾ.ನ.ಸ್ವಾಮಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಜಮೀರ್ ಅಹ್ಮದ್, ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್, ಡಾಕ್ಟರ್ ಸಾಗರ್, ಎ.ಸಿ ಮಂಜೇಗೌಡರು, ಅಣ್ಣಯ್ಯ ಸೇರಿ ಗ್ರಾಮಸ್ಥರು ಹಾಗೂ ಮುಖಂಡರು ಹಾಜರಿದ್ದರು.