ಅನುದಾನವಿಲ್ಲದೇ ಸೊರಗಿದ ಕೃಷಿ ಭಾಗ್ಯ ಯೋಜನೆ!

KannadaprabhaNewsNetwork |  
Published : Oct 10, 2026, 02:00 AM IST
ಅಲ್ಪ ಮಳೆಗೂ ಭರ್ತಿಯಾಗಿರುವ ಕೃಷಿ ಹೊಂಡಗಳು. | Kannada Prabha

ಸಾರಾಂಶ

ಶಾಶ್ವತ ಬರಪೀಡಿತ ಜಿಲ್ಲೆ ಎನ್ನುವ ಹಣೆಪಟ್ಟಿ ಹೊಂದಿರುವ ಗದಗ ಜಿಲ್ಲೆ ಸೇರಿದಂತೆ ಸಂಪೂರ್ಣ ಮಳೆಯನ್ನೇ ನೆಚ್ಚಿಕೊಂಡಿರುವ ಬಯಲುಸೀಮೆ ಭಾಗದ ರೈತರ ಪಾಲಿಗೆ ಕೃಷಿ ಭಾಗ್ಯ ಯೋಜನೆ ಸಂಜೀವಿನಿಯಾಗಿದೆ.

ಜಿಲ್ಲೆಯಲ್ಲಿ 2014ರಲ್ಲಿ 2562 ಕೃಷಿ ಹೊಂಡ ನಿರ್ಮಾಣ, 2026ರಲ್ಲಿ ಕೇವಲ 56 ನಿರ್ಮಾಣ, ಅನುದಾನ ಹೆಚ್ಚಳಕ್ಕೆ ರೈತರ ಆಗ್ರಹ

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಶಾಶ್ವತ ಬರಪೀಡಿತ ಜಿಲ್ಲೆ ಎನ್ನುವ ಹಣೆಪಟ್ಟಿ ಹೊಂದಿರುವ ಗದಗ ಜಿಲ್ಲೆ ಸೇರಿದಂತೆ ಸಂಪೂರ್ಣ ಮಳೆಯನ್ನೇ ನೆಚ್ಚಿಕೊಂಡಿರುವ ಬಯಲುಸೀಮೆ ಭಾಗದ ರೈತರ ಪಾಲಿಗೆ ಕೃಷಿ ಭಾಗ್ಯ ಯೋಜನೆ ಸಂಜೀವಿನಿಯಾಗಿದೆ. ಆದರೆ ಬದಲಾದ ಸರ್ಕಾರಗಳ ನೀತಿಯಿಂದಾಗಿ ಕೃಷಿ ಹೊಂಡ ನಿರ್ಮಾಣಕ್ಕೆ ಅನುದಾನ ನೀಡದೇ ಇರುವುದರಿಂದಾಗಿ ಬರಗಾಲದಲ್ಲಿ ವರವಾಗಬೇಕಾಗಿದ್ದ ಯೋಜನೆಯೀಗ ಅನುದಾನವಿಲ್ಲದೇ ಸೊರಗಿ ಹೋಗಿದೆ.

2013ರಿಂದ 2018ರವರೆಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯನ್ನಾಗಿ ಜಾರಿಗೆ ತರಲಾಗಿತ್ತು. ಆ ಅವಧಿಯಲ್ಲಿ ಸರ್ಕಾರ ಭಾರೀ ಪ್ರಮಾಣದ ಅನುದಾನ ಒದಗಿಸಿದ್ದರಿಂದ ಸಾವಿರಾರು ರೈತರ ಹೊಲಗಳಲ್ಲಿ ಕೃಷಿ ಹೊಂಡಗಳು ನಿರ್ಮಾಣವಾಗಿ, ಹನಿ, ತುಂತುರು ನೀರಾವರಿ ಸೌಲಭ್ಯ ದೊರೆತಿತ್ತು. ಆದರೆ, ನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಿ, ಅನುದಾನದಲ್ಲಿ ಗಣನೀಯ ಕಡಿತ ಮಾಡಿದ್ದರಿಂದ ಯೋಜನೆಯ ವೇಗ ಕುಂಠಿತಗೊಂಡಿತ್ತು. ಪ್ರಸ್ತುತ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ, ಈ ಜನಪ್ರಿಯ ಮತ್ತು ಉಪಯುಕ್ತ ಯೋಜನೆಗೆ ಹಿಂದಿನಂತೆಯೇ ಹೆಚ್ಚಿನ ಒತ್ತು ಮತ್ತು ಅನುದಾನ ನೀಡಬೇಕೆಂಬ ನಿರೀಕ್ಷೆ ರೈತರಿಂದ ಕೇಳಿ ಬರುತ್ತಿದೆ.

ಸಾಕಷ್ಟು ಅನುಕೂಲ:

​ಈ ಯೋಜನೆಯು ಕೇವಲ ಹೊಂಡ ನಿರ್ಮಾಣಕ್ಕೆ ಸೀಮಿತವಾಗಿರದೆ, ಕೃಷಿ ಹೊಂಡ, ಡೀಸೆಲ್ ಪಂಪ್‌ಸೆಟ್ ಹಾಗೂ ಸ್ಪ್ರಿಂಕ್ಲರ್ (ತುಂತುರು ನೀರಾವರಿ) ಒಳಗೊಂಡ ಸಮಗ್ರ ಪ್ಯಾಕೇಜ್ ಮಾದರಿಯಾಗಿರುವುದರಿಂದ ರೈತರಿಗೆ ಹೆಚ್ಚು ಅನುಕೂಲಕರವಾಗಿದೆ. ಮಳೆ ಕೈಕೊಟ್ಟ ಸಂದರ್ಭದಲ್ಲಿ ಹೊಂಡದಲ್ಲಿ ಶೇಖರಣೆಗೊಂಡ ನೀರಿನಿಂದ ಕನಿಷ್ಠ ನಾಲ್ಕೈದು ಎಕರೆ ಜಮೀನಿಗೆ ಒಂದೆರಡು ಬಾರಿ ನೀರು ಹಾಯಿಸಿ, ಬೆಳೆ ನಷ್ಟವಾಗದಂತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಪ್ರಸಕ್ತ ದಿನಗಳಲ್ಲಿ ಸ್ಪ್ರಿಂಕ್ಲರ್‌ಗಳ ಬೇಡಿಕೆ ಹೆಚ್ಚಾಗಿದ್ದು, ಕೃಷಿ ಭಾಗ್ಯದ ಜತೆಗೆ ತುಂತುರು ನೀರಾವರಿ ಸೌಲಭ್ಯವನ್ನು ಹೆಚ್ಚುವರಿಯಾಗಿ ಒದಗಿಸುವುದರಿಂದ ನೀರಿನ ಮಿತವ್ಯಯದೊಂದಿಗೆ ಬೆಳೆ ರಕ್ಷಣೆಗೆ ಅನುಕೂಲವಾಗಿತ್ತು.ಕೃಷಿಹೊಂಡ, ಡೀಸೆಲ್ ಪಂಪ್ ಮತ್ತು ಸ್ಪ್ರಿಂಕ್ಲರ್ ಬಂದ ಮೇಲೆ ಸಂಕಷ್ಟದ ವೇಳೆಯಲ್ಲೂ 4-5 ಎಕರೆಗೆ ಎರಡು ಸುತ್ತು ನೀರು ಕೊಟ್ಟು ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಸರ್ಕಾರ ಈ ಬಾರಿಯೂ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕು ಎನ್ನುತ್ತಾರೆ ಸವಡಿ ಗ್ರಾಮದ ರೈತ ಮೇಘರಾಜ ಭಾವಿ.ಬಯಲುಸೀಮೆ ಹಾಗೂ ಮಳೆಯಾಶ್ರಿತ ಪ್ರದೇಶಗಳಲ್ಲಿ ಅಂತರ್ಜಲ ಮತ್ತು ಮಳೆ ಕೊರತೆ ಎದುರಾದಾಗ ಕೃಷಿ ಭಾಗ್ಯ ರೈತರ ಪಾಲಿಗೆ ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ಕೃಷಿ ಹೊಂಡದ ಜೊತೆಗೆ ಡೀಸೆಲ್ ಪಂಪ್ ಮತ್ತು ತುಂತುರು ನೀರಾವರಿ (ಸ್ಪ್ರಿಂಕ್ಲರ್) ಘಟಕಗಳನ್ನು ಪ್ಯಾಕೇಜ್ ರೂಪದಲ್ಲಿ ನೀಡುವುದರಿಂದ ನೀರಿನ ಸದ್ಬಳಕೆಯಾಗಿ ಬೆಳೆ ಸಂರಕ್ಷಣೆ ಸಾಧ್ಯವಾಗುತ್ತಿದೆ. ಪ್ರಸ್ತುತ ರೈತರಿಂದ ಸ್ಪ್ರಿಂಕ್ಲರ್ ಹಾಗೂ ಹೊಂಡಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಅನುದಾನ ಒದಗಿಸಿ, ಅರ್ಹ ರೈತರಿಗೆ ಆದ್ಯತೆಯ ಮೇರೆಗೆ ಯೋಜನೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಮಲ್ಲಯ್ಯ ಕೋರನವರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೆಂಡರ್ ನೆಪದಲ್ಲಿ ಮೀನುಗಾರರಿಗೆ ಎನ್‌ಒಸಿಗೆ ತೊಂದರೆ: ಹೋರಾಟದ ಎಚ್ಚರಿಕೆ
ಸಂಕನೂರ ಪರ ರೂಪಾಲಿ ನಾಯ್ಕ ಮತಯಾಚನೆ