ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಹಾಗೂ ಪ್ರಚಾರ ಸಾಮಗ್ರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಉತ್ತರ ಕರ್ನಾಟಕ ಜೀವನದಿ ಕೃಷ್ಣೆಯ ಭವ್ಯ ಸಂಸ್ಕೃತಿ ಅನಾವರಣದ ಆಶಯದೊಂದಿಗೆ ಉತ್ಸವ ಆಯೋಜಿಸಿದ್ದು, ನಾಡಿನ ಜಗದ್ಗುರುಗಳು, ಸಂತ-ಮಹಾಂತರು ಹಾಗೂ ನಾಗಾ ಸಾಧುಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಸೆ.4ರಂದು ಬೆಳಗ್ಗೆ 5 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಕೃಷ್ಣಾನದಿ ಪೂಜೆ, ಪುಣ್ಯಸ್ನಾನ, ಬಾಗಿನ ಅರ್ಪಣೆ, ಹೋಮ-ಹವನ ಸಹಿತ ವಿಶೇಷ ಪೂಜೆಗಳು ನಡೆಯಲಿವೆ. ಉತ್ತರಪ್ರದೇಶದ ಕಾಶಿಯಿಂದ ಆಗಮಿಸುತ್ತಿರುವ ಅರ್ಚಕರ ತಂಡದಿಂದ ವಿಶೇಷ ಕೃಷ್ಣಾರತಿ ನಡೆಯಲಿದೆ. ಶ್ರೀಶೈಲದಿಂದ ಆಗಮಿಸುವ ಅರ್ಚಕರ ಸಾನ್ನಿಧ್ಯದಲ್ಲಿ ಭ್ರಮರಾಂಭ ಸಹಿತ ಮಲ್ಲಿಕಾರ್ಜುನ ಕಲ್ಯಾಣೋತ್ಸವ ಹಾಗೂ ಶ್ರೀಶೈಲ ಧರ್ಮರಥದ ಶೋಭಾಯಾತ್ರೆ ನಡೆಯಲಿದೆ. ಮಲ್ಲಿಕಾರ್ಜುನ ರಥ ಮತ್ತು ಪಲ್ಲಕ್ಕಿ ವಾದ್ಯಮೇಳದೊಂದಿಗೆ ಹಿಪ್ಪರಗಿ ಗ್ರಾಮದ ಮೂಲಕ ಕೃಷ್ಣಾನದಿ ತೀರಕ್ಕೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಕಲ್ಯಾಣೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ದಂಪತಿಗಳು ಪೂಜೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.ಸಂಜೆ ಕೃಷ್ಣಾರತಿ, ಭಜನೆ, ಭಕ್ತಿಗೀತೆಗಳ ಸಹಿತ ವಿವಿಧ ಭವ್ಯಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಗ್ರಾಮದ ಕಲಾವಿದರಿಂದ ಕೃಷ್ಣನ ಕುರಿತ ಕೃಷ್ಣ ಲಹರಿ ಸಹಿತ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ ಕೃಷ್ಣ ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ ಎಂದರು.
ಹುಟ್ಟುಹಬ್ಬ-ಸಮಾಜಮುಖಿ ಸೇವೆ: ಡಾ.ಮುರುಗೇಶ ನಿರಾಣಿ 61ನೇ ಹುಟ್ಟುಹಬ್ಬದ ನಿಮಿತ್ತ ಸೆಪ್ಟೆಂಬರ್ ನಲ್ಲಿ ಜಿಲ್ಲಾದ್ಯಂತ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 501 ದೇವಸ್ಥಾನಗಳಲ್ಲಿ ವಿಶೇಷ ಮಹಾಪೂಜೆ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮತ್ತು ವೃದ್ಧಾಶ್ರಮಗಳಲ್ಲಿ ಹಣ್ಣು-ಹಂಪಲು ವಿತರಣೆ, ಅನಾಥಾಶ್ರಮ ಮತ್ತು ವಿಕಲಚೇತನ ಕೇಂದ್ರಗಳಲ್ಲಿ ಸಿಹಿ ವಿತರಣೆ, ಉಚಿತ ಆರೋಗ್ಯ ತಪಾಸಣೆ ಜತೆಗೆ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಉಚಿತ ನೇತ್ರ ತಪಾಸಣೆ, ಪಶು ಚಿಕಿತ್ಸಾ ಶಿಬಿರಗಳು, ಗೋಶಾಲೆಗಳಲ್ಲಿ ಗೋಪೂಜೆ, ಮೇವು ವಿತರಣೆ, ರೈತರಿಗೆ ಸಾವಯವ ಕೃಷಿ ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕೃಷಿ ತಂತ್ರಜ್ಞಾನದ ಕುರಿತು ತರಬೇತಿ ಹಾಗೂ ಮಹಾವೃಕ್ಷ ಅಭಿಯಾನ ಕೂಡ ಹಮ್ಮಿಕೊಳ್ಳಲಾಗಿದೆ. ಜಿಲ್ಲಾದ್ಯಂತ ಶಾಲೆ-ಕಾಲೇಜು, ದೇವಸ್ಥಾನ, ರುದ್ರಭೂಮಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು, ಅವುಗಳ ಸಂರಕ್ಷಣೆಗೆ ಡ್ರಿಪ್ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ರೈತರ ಬೇಡಿಕೆಯಂತೆ 40 ರಿಂದ 50 ಸಾವಿರ ಸಸಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗತ್ತಿದೆ ಎಂದರು.
ನದಿ ಸಂರಕ್ಷಣೆಗೆ ಕರೆ: ಕೃಷ್ಣಾನದಿ ಉತ್ತರ ಕರ್ನಾಟಕದ ಜೀವನಾಡಿ. ನೀರಿನ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆಗೆ ಆದ್ಯತೆ ನೀಡಬೇಕಿದೆ. ಕೃಷ್ಣಾರತಿ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ನದಿ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಸಾಂಸ್ಕೃತಿಕ ಉತ್ಸವವಾಗಬೇಕು ಎಂದರು.