39 ಕೆರೆ ನಿರ್ಮಾಣ ಕಾಮಗಾರಿಗೆ ಕೃಷ್ಣ ಭಾಗ್ಯ ಜಲ ನಿಗಮ ಅಸ್ತು

KannadaprabhaNewsNetwork | Published : Apr 17, 2025 12:06 AM

ಸಾರಾಂಶ

ಯಲಬುರ್ಗಾ ಕ್ಷೇತ್ರದಲ್ಲಿ ನೂತನವಾಗಿ 39 ಕೆರೆ ನಿರ್ಮಿಸಿ ಅವುಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಯೋಜನೆ ಹಾಕಿಕೊಂಡು ಕಾರ್ಯ ಕೈಗೆತ್ತಿಕೊಂಡಿದ್ದರು. ಈ ಹಿಂದೆ ಡಿಪಿಆರ್ ಸಿದ್ಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಬಜೆಟ್‌ನಲ್ಲಿ ಯೋಜನೆ ಘೋಷಿಸಿದ್ದರು.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು:

ಯಲಬುರ್ಗಾ ಕ್ಷೇತ್ರದಲ್ಲಿ ನೂತನವಾಗಿ 39 ಕೆರೆ ನಿರ್ಮಾಣ ಯೋಜನೆಗೆ ಕೃಷ್ಣ ಭಾಗ್ಯ ಜಲ ನಿಗಮದ (ಕೆಬಿಜೆಎನ್ಎಲ್) ನಿರ್ದೇಶಕರ ಸಭೆಯಲ್ಲಿ ಸಮ್ಮತಿ ಸಿಕ್ಕಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಹ ಕಾಮಗಾರಿ ತ್ವರಿತ ಅನುಷ್ಠಾನಕ್ಕೆ ಅಸ್ತು ಎಂದಿದ್ದಾರೆ. ಇದರಿಂದ ಶೀಘ್ರದಲ್ಲಿ ನಿರ್ಮಾಣ ಹಾಗೂ ಕೆರೆ ತುಂಬಿಸುವ ಯೋಜನೆ ಆರಂಭವಾಗಲಿದೆ.

ಯಲಬುರ್ಗಾ ಕ್ಷೇತ್ರದಲ್ಲಿ ನೂತನವಾಗಿ 39 ಕೆರೆ ನಿರ್ಮಿಸಿ ಅವುಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಯೋಜನೆ ಹಾಕಿಕೊಂಡು ಕಾರ್ಯ ಕೈಗೆತ್ತಿಕೊಂಡಿದ್ದರು. ಈ ಹಿಂದೆ ಡಿಪಿಆರ್ ಸಿದ್ಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಬಜೆಟ್‌ನಲ್ಲಿ ಯೋಜನೆ ಘೋಷಿಸಿದ್ದರು.

ಭೂಮಿ ನೀಡಲು ಸಭೆ:

₹ 970 ಕೋಟಿ ವೆಚ್ಚದಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ 39 ಕೆರೆ ನಿರ್ಮಾಣಕ್ಕೆ ರಾಯರಡ್ಡಿ ಅವರು ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಂಡು ಭೂಮಿ ಒದಗಿಸಲು ಕೋರಿದ್ದರು. ಹಲವಾರು ಗ್ರಾಮಗಳಲ್ಲಿ ಕೆರೆ ನಿರ್ಮಾಣಕ್ಕೆ ರೈತರು ಭೂಮಿ ನೀಡಲು ದಾಖಲೆ ನೀಡಿದ್ದಾರೆ. ನೂತನವಾಗಿ ಕೆರೆ ನಿರ್ಮಿಸಿ ಕೃಷ್ಣಾ ನದಿಯಿಂದ ನೀರು ತಂದು ಕೆರೆ ತುಂಬಿಸುವ ಯೋಜನೆ ಇದಾಗಿದೆ.

ತ್ವರಿತ ಅನುಷ್ಠಾನಗೊಳಿಸಿ:

ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಬಸವರಾಜ ರಾಯರಡ್ಡಿ ಅವರಿಗೆ ಪತ್ರ ಬರೆದು ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ 39 ಕೆರೆ ತುಂಬಿಸುವ ಜಲಸಂಪನ್ಮೂಲ ಇಲಾಖೆಯ ಕಾರ್ಯವ್ಯಾಪ್ತಿಯ ಕಾಮಗಾರಿಯನ್ನು ಕೃಷ್ಣ ಭಾಗ್ಯ ಜಲ ನಿಗಮದ ನಿರ್ದೇಶಕರ ಮಂಡಳಿಯ 142ನೇ ಸಭೆಯಲ್ಲಿ ಕೈಗೆತ್ತಿಕೊಳ್ಳಲು ಅನುಮತಿ ನೀಡಲಾಗಿದೆ. ₹ 970 ಕೋಟಿ ವೆಚ್ಚದಲ್ಲಿ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ವ್ಯಾಪ್ತಿಯಲ್ಲಿನ 39 ಕೆರೆಗಳಿಗೆ ಕೃಷ್ಣಾ ನದಿಯಿಂದ ಲಿಫ್ಟ್ ಮುಖಾಂತರ ನೀರು ತುಂಬಿಸುವ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೇ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಹ ತಿಳಿಸಿದ್ದಾರೆ.

ರೈತರಿಗೆ ಅನುಕೂಲ:

ಯಲಬುರ್ಗಾ ಕ್ಷೇತ್ರವನ್ನು ನಂಜುಂಡಪ್ಪ ಸಮಿತಿ ವರದಿ ಪ್ರಕಾರ ಬರಪೀಡಿತವೆಂದು ಘೋಷಿಸಲಾಗಿದೆ. ಅಂಜರ್ತಲ ಮಟ್ಟ ಸಹ ಇಲ್ಲಿ ಕಡಿಮೆ ಇದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕ್ಷೇತ್ರವನ್ನು ಡಿಪಿಎಪಿ (ಬಡಪೀಡಿತ ಪ್ರದೇಶ ಕ್ಷೇತ್ರ) ಎಂದು ಸಹ ಪರಿಗಣಿಸಿದೆ. ಅಲ್ಲದೆ ಕಡಿಮೆ ಮಳೆ ಆಗುತ್ತದೆ. ಒಣ ಬೇಸಾಯ ನಂಬಿ ಜನ ಜೀವನ ಸಾಗಿಸುತ್ತಿದ್ದಾರೆ ಎಂದು ಶಾಸಕ ರಾಯರಡ್ಡಿ ಕ್ಷೇತ್ರಕ್ಕೆ ದೊಡ್ಡ ಕೆರೆಗಳ ಅವಶ್ಯಕತೆ ಇದೆ ಎಂದು 39 ಕೆರೆ ನಿರ್ಮಾಣಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರು. ಹೊಸ ಕೆರೆಗಳನ್ನು ನಿರ್ಮಿಸಿದರೆ ಯಲಬುರ್ಗಾ ಕ್ಷೇತ್ರದ ಜನತೆಗೆ ಕುಡಿಯುವ ನೀರು ಮತ್ತು ರೈತರ ಹೊಲಗಳಿಗೆ ನೀರಾವರಿ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿದ್ದರು.39 ಕೆರೆ ತುಂಬಿಸುವ ಯೋಜನೆಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಅನುಮೋದನೆ ನೀಡಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ ಸಹ ಕಾಮಗಾರಿಗಳ ಆರಂಭಕ್ಕೆ ಸಮ್ಮಿತಿಸಿದ್ದಾರೆ. ಸದ್ಯ ಈ ಯೋಜನೆ ಕ್ಯಾಬಿನೆಟ್‌ಗೆ ಬಂದಿದೆ. ನಂತರ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಆಗಿ ಕಾಮಗಾರಿ ಆರಂಭವಾಗಲಿವೆ.

ಬಸವರಾಜ ರಾಯರಡ್ಡಿ, ಸಿಎಂ ಆರ್ಥಿಕ ಸಲಹೆಗಾರ, ಶಾಸಕರು, ಯಲಬುರ್ಗಾ

Share this article