ಯೋಗಪಟುವಿಗೆ ವೀಸಾ ಕೊಡಿಸಿದ್ದ ಎಸ್‌ಎಂಕೆ!

KannadaprabhaNewsNetwork | Published : Dec 11, 2024 12:45 AM

ಸಾರಾಂಶ

ಮಹರಾಷ್ಟ್ರದ ರಾಜ್ಯಭವನದಲ್ಲಿ ಎಸ್‌.ಎಂ. ಕೃಷ್ಣ ಅವರನ್ನು ಭೇಟಿಯಾದ ಶಿವಾನಂದ ಕೆಲೂರ, ತಾನೂ ಯೋಗ ಪಟು, ಇಟಲಿಯಲ್ಲಿ ನಡೆಯಲಿರುವ ಯೋಗ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿದೆ. ಆದರೆ, ವೀಸಾ ಸಿಗುತ್ತಿಲ್ಲ ಎಂದು ತನ್ನ ಎಲ್ಲ ಕಷ್ಟಗಳನ್ನು ವಿವರಿಸಿದ್ದ.

ಶಿವಾನಂದ ಗೊಂಬಿ

ಹುಬ್ಬಳ್ಳಿ

ಎಸ್‌.ಎಂ. ಕೃಷ್ಣ ಸಾಹೇಬ್ರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರಿಂದಲೇ ನಾನು ಇಟಲಿಗೆ ಹೋಗುವಂತಾಯ್ತು. ಆ ದೇಶದಲ್ಲಿ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಬಿಂಬಿಸುವ ಯೋಗವನ್ನು ಮೂರು ದಿನ ಪ್ರದರ್ಶಿಸಲು ಸಾಧ್ಯವಾಯ್ತು..!

ಇದು ರೋಣ ತಾಲೂಕಿನ ಹೊಳೆಆಲೂರಿನ ಯುವಕ, ಯೋಗಪಟು ಶಿವಾನಂದ ಕೆಲೂರ ಹೇಳುವ ಮಾತು.

ಈತ ಅಂತಾರಾಷ್ಟ್ರೀಯ ಯೋಗ ಪಟು. 2006ರಲ್ಲಿ ಇಟಲಿಯಲ್ಲಿ ಅಂತಾರಾಷ್ಟ್ರೀಯ ಯೋಗ ಕಾಂಗ್ರೆಸ್‌ ಎಂಬ ಸಮಾವೇಶವಿತ್ತು. ಅಲ್ಲಿ ಬರೋಬ್ಬರಿ 100 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆ ಸಮಾವೇಶದಲ್ಲಿ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ಇಬ್ಬರಲ್ಲಿ ಹುಬ್ಬಳ್ಳಿಯ ಕನಕದಾಸ ಕಾಲೇಜ್‌ನಲ್ಲಿ ಡಿಗ್ರಿ ಓದುತ್ತಿದ್ದ ಶಿವಾನಂದ ಕೆಲೂರ ಕೂಡ ಒಬ್ಬರು.

ಆದರೆ, ಬಡ ಕುಟುಂಬದ ಶಿವಾನಂದನ ಬ್ಯಾಂಕ್‌ ಬ್ಯಾಲೇನ್ಸ್ ಇರಲಿಲ್ಲ. ಕೌಟುಂಬಿಕ ಹಿನ್ನೆಲೆಯೂ ಇರಲಿಲ್ಲ. ಹೀಗಾಗಿ ಎರಡು ಸಲ ವೀಸಾಕ್ಕೆ ಅರ್ಜಿ ಹಾಕಿದರೂ ತಿರಸ್ಕಾರಗೊಂಡಿತ್ತು. ಮುಂಬೈಯಲ್ಲಿನ ಇಟಲಿ ರಾಯಭಾರಿ ಕಚೇರಿಗೆ ಎರಡ್ಮೂರು ಸಲ ಹೋಗಿ ಬಂದರೂ ಈತನ ವೀಸಾ ಸಿಗಲಿಲ್ಲ.

ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದವರು ಎಸ್‌.ಎಂ. ಕೃಷ್ಣ. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಎಂಬುದಷ್ಟೇ ಗೊತ್ತಿದ್ದ ಈ ಯುವಕನಿಗೆ ಅವರ ಕುರಿತು ಯಾವುದೇ ಪರಿಚಯವಿರಲಿಲ್ಲ. ಅಲ್ಲಿನ ಭದ್ರತಾ ಸಿಬ್ಬಂದಿಗೆ ಕೇಳಿದರೆ ಅವರು ರಾಜ್ಯಪಾಲರ ಬಳಿ ಕರ್ತವ್ಯಕ್ಕೆ ಇದ್ದ ಕರ್ನಾಟಕದ ಕೇಡರ್‌ನ ಐಎಎಸ್‌ ಅಧಿಕಾರಿ ಶ್ರೀಧರ ಬಳಿ ಕಳುಹಿಸುತ್ತಾರೆ. ಅವರು ಹುಬ್ಬಳ್ಳಿಯ ಯುವಕ ಎಂಬ ಕಾರಣಕ್ಕೆ ಎಸ್‌.ಎಂ. ಕೃಷ್ಣ ಅವರನ್ನು ಭೇಟಿ ಮಾಡಿಸಿದ್ದರು.

ಆ ಬಳಿಕ ಕೃಷ್ಣ ಅವರನ್ನು ಕಂಡ ಯುವಕ ತನ್ನ ಎಲ್ಲ ಕಷ್ಟಗಳನ್ನು ವಿವರಿಸಿದ್ದಾನೆ. ಆಗ ಕೃಷ್ಣ ಅವರು ತಮ್ಮ ಆಪ್ತ ಸಹಾಯಕನನ್ನು ಕರೆದು ಈ ಯುವಕ, "ಭಾರತದ ಕಲೆಯನ್ನು ವಿದೇಶದಲ್ಲಿ ಪ್ರಚಾರ ಮಾಡಲು ತೆರಳುತ್ತಿದ್ದಾನೆ. ಈತನಿಗೆ ಏನೇನು ಸಹಾಯ ಬೇಕೋ ಎಲ್ಲವನ್ನೂ ಮಾಡಿ " ಎಂದು ಸೂಚಿಸಿದ್ದರು. ಅದರಂತೆ ರಾಜಭವನದ ಅತಿಥಿ ಗೃಹದಲ್ಲೇ ಎರಡು ದಿನ ಯುವಕನನ್ನು ಉಳಿಸಿಕೊಂಡು, ರಾಜಭವನದಿಂದ ಪತ್ರ ಕೊಟ್ಟು ವೀಸಾ ಸಿಗಲು ನೆರವು ನೀಡಿದ್ದರು.

ಇದಲ್ಲದೇ, ಇಟಲಿಗೆ ತೆರಳುತ್ತಿದ್ದ ಈ ಬಡಯುವಕನಿಗೆ ಆಗ ಸರಿಯಾದ ಬಟ್ಟೆ ಕೂಡ ಇರಲಿಲ್ಲ. ರಾತ್ರೋರಾತ್ರಿ ಹೊಸ ಬಟ್ಟೆ ಸಿಗುವಂತೆ ವ್ಯವಸ್ಥೆ ಮಾಡಿದರು. ಹೀಗೆಯೇ ಯೋಗ ಮಾಡುತ್ತಿರು. ನಿಮ್ಮಂತಹ ಪ್ರತಿಭೆಗಳು ವಿದೇಶಗಳಲ್ಲಿ ಭಾರತದ ಕೀರ್ತಿ ಹೆಚ್ಚಿಸಬೇಕು ಎಂದು ಆಶೀರ್ವದಿಸಿ ಬೀಳ್ಕೊಟ್ಟಿದ್ದರು.

ಹೀಗೆ ಎಸ್‌.ಎಂ. ಕೃಷ್ಣ ಬರೀ ರಾಜ್ಯದ ಅಭಿವೃದ್ಧಿಗಷ್ಟೇ ಅಲ್ಲ. ಇಲ್ಲಿನ ಯುವಕರ ವೈಯಕ್ತಿಕ ಸಾಧನೆಗೂ ಸಾಕಷ್ಟು ಪ್ರೋತ್ಸಾಹ, ನೆರವು ನೀಡಿದ್ದಾರೆ ಎಂಬುದಕ್ಕೆ ಶಿವಾನಂದ ಕೆಲೂರನೇ ಸಾಕ್ಷಿಯಾಗಿದ್ದಾನೆ ಎಂದರೆ ತಪ್ಪಾಗಲಿಕ್ಕಿಲ್ಲ. ನಾನಿನ್ನು ಡಿಗ್ರಿ ಓದುತ್ತಿದ್ದೆ. ಎರಡು ಸಲ ವೀಸಾ ತಿರಸ್ಕಾರಗೊಂಡಿತ್ತು. ಏನು ಗೊತ್ತಿಲ್ಲದ, ಅನುಮತಿ ಪಡೆಯದೇ ರಾಜ್ಯಪಾಲರನ್ನು ಭೇಟಿಯಾಗಲು ಅವಕಾಶವಿಲ್ಲ ಎಂಬುದರ ಅರಿವಿಲ್ಲದ ನನಗೆ, ಎಸ್‌.ಎಂ. ಕೃಷ್ಣ ಸಾಹೇಬ್ರು, ರಾಜ್ಯಭವನದಲ್ಲಿ ಎರಡು ದಿನ ಉಳಿಸಿಕೊಂಡು ನೆರವು ನೀಡಿದರು. ಇಟಲಿಗೆ ಕಳುಹಿಸಿಕೊಟ್ಟಿದ್ದರು. ಅವರ ಸಹಾಯ ಎಂದಿಗೂ ಮರೆಯಲಾರೆ ಎಂದು ಅಂತಾರಾಷ್ಟ್ರೀಯ ಯೋಗಪಟು ಶಿವಾನಂದ ಕೆಲೂರ ಹೇಳಿದರು.

Share this article