45 ದಿನ ಶಕ್ತಿನಗರದ ಕೃಷ್ಣಾನದಿ ಸೇತುವೆ ಬಂದ್‌: ಡಿವೈಎಸ್‌ಪಿ ಸತ್ಯನಾರಾಯಣರಾವ್

KannadaprabhaNewsNetwork |  
Published : Jan 08, 2024, 01:45 AM IST
07ಕೆಪಿಆರ್‌ಸಿಆರ್01: | Kannada Prabha

ಸಾರಾಂಶ

ಸೇತುವೆ ದುರಸ್ತಿ ಹಿನ್ನೆಲೆ ಜನವರಿ 10ರಿಂದ ಸಂಚಾರ ನಿಷೇಧ. ಶೀಘ್ರ ಮಾರ್ಗ ಬದಲಾವಣೆ ಕುರಿತು ಮಾಹಿತಿ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಕೃಷ್ಣಾ ಸೇತುವೆಯ ದುರಸ್ತಿ ಕಾಮಗಾರಿ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಡಿವೈಎಸ್‌ಪಿ ಸತ್ಯನಾರಾಯಣರಾವ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಗಡಿ ಭಾಗವಾದ ಶಕ್ತಿನಗರದ ಕೃಷ್ಣಾನದಿಯ ಸೇತುವೆ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ಸೇತುವೆ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಇದೇ ಜ.10ರಂದು ಬೆಳಗ್ಗೆ 5 ರಿಂದ 45 ದಿನಗಳವರೆಗೆ ತಾಲೂಕಿನ ಶಕ್ತಿನಗರದ ಕೃಷ್ಣಾ ಸೇತುವೆಯ ಮಾರ್ಗವಾಗಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ಸತ್ಯನಾರಾಯಣರಾವ್ ಅವರು ತಿಳಿಸಿದರು.

ತಾಲೂಕಿನ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಕೃಷ್ಣಾ ಸೇತುವೆಯ ದುರಸ್ತಿ ಕಾಮಗಾರಿ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಯಚೂರು-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ 167ರ ಮಾರ್ಗದಲ್ಲಿರುವ ಕೃಷ್ಣ್ಣಾ ಸೇತುವೆ ಸಂಪೂರ್ಣವಾಗಿ ಶಿಥಿಲಾವಸ್ಥೆ ಹಂತದಲ್ಲಿದೆ. ಈ ಮಾರ್ಗವಾಗಿ ದೊಡ್ಡ ದೊಡ್ಡ ವಾಹನಗಳು ಸಂಚರಿಸುವುದರಿಂದ ಸೇತುವೆ ಮತ್ತಷ್ಟು ಹದಗೆಡುವ ಸಾಧ್ಯತೆಗಳಿದೆ. ಇದರಿಂದ ಯಾವುದೇ ದುರಂತ ಘಟನೆಗಳು ನಡೆಯಬಹುದಾಗಿದೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸೇತುವೆ ದುರಸ್ತಿ ಕಾರ್ಯ ಮುಗಿಯುವವರೆಗೂ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಚರ್ಚಿಸಿ ಮಾರ್ಗ ಬದಲಾವಣೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಕೃಷ್ಣಾ ಸೇತುವೆ ಹಾಳಾಗಿದ್ದರಿಂದ ವಾಹನಗಳು ಸೇತುವೆ ಮಧ್ಯ ಭಾಗದಲ್ಲಿ ಕೆಟ್ಟು ನಿಂತು ಗಂಟೆಗಟ್ಟಲೇ ವಾಹನ ಸಂಚಾರದಲ್ಲಿ ಸಮಸ್ಯೆ ಎದುರಾಗುತ್ತಿದ್ದು, ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಸೇತುವೆಗೆ ವೇರ್ ಕೋಟ್ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸದರಬಜಾರ ಪೊಲೀಸ್ ಠಾಣೆಯ ಸಿಪಿಐ ಗುರುರಾಜ ಕಟ್ಟಿಮನಿ, ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸಾಬಯ್ಯ, ಪಿಡಬ್ಲ್ಯೂಡಿ ಇಇ ಶಂಕರ, ಮಾರ್ಕೆಟ್ ಯಾರ್ಡ್ ಪಿಎಸ್ಐ ಅನಿತಾ, ಪ್ರಾದೇಶಿಕ ಸಾರಿಗೆ ಇಲಾಖೆಯ ಎಸ್.ಸಿ ನಾಗವಂದ, ಸೈದಾಪೂರ ಪಿಎಸ್ಐ ವಿನಾಯಕ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ ಚಂದ್ರಶೇಖರ, ರಾಯಚೂರು ಸಾರಿಗೆ ಸಂಸ್ಥೆಯ ಎರಡನೇ ಘಟಕದ ವ್ಯವಸ್ಥಾಪಕ ವೆಂಕಟೇಶ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು, ತೆಲಂಗಾಣದ ಪೊಲೀಸರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ