ರಬಕವಿ-ಬನಹಟ್ಟಿ : ಪ್ರಸಕ್ತ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ ರಬಕವಿ ಸಮೀಪದ ಕೃಷ್ಣಾ ನದಿಯ ಹಿನ್ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಮುಂಬರುವ ಬೇಸಿಗೆ ವೇಳೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಪ್ರಸಕ್ತ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ ರಬಕವಿ ಸಮೀಪದ ಕೃಷ್ಣಾ ನದಿಯ ಹಿನ್ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಮುಂಬರುವ ಬೇಸಿಗೆ ವೇಳೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.
ಸುಮಾರು 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಹಿಪ್ಪರಗಿ ಬ್ಯಾರೇಜ್ಗೆ ಹರಿದುಬರುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಮತ್ತೊಂದೆಡೆ, ಹಿನ್ನೀರಿನ ಪ್ರದೇಶದಲ್ಲಿ ವಿವಿಧ ನೀರಾವರಿ ಯೋಜನೆಗಳ ಮೂಲಕ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ನದಿಯಲ್ಲಿನ ನೀರಿನ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಕೃಷ್ಣಾ ನದಿಯ ನೀರನ್ನೇ ಅವಲಂಬಿಸಿರುವ ರಬಕವಿ-ಬನಹಟ್ಟಿ ನಗರ ಸೇರಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಕುಡಿಯುವ ನೀರಿನ ಜೊತೆಗೆ ಕೃಷಿ ಚಟುವಟಿಕೆಗಳು ಹಾಗೂ ಜಾನುವಾರುಗಳಿಗೂ ನೀರಿನ ಕೊರತೆ ಉಂಟಾಗುವ ಭೀತಿ ವ್ಯಕ್ತವಾಗಿದೆ.
ಕಳೆದ ವರ್ಷ ಇದೇ ಅವದಿಯಲ್ಲಿ ಹಿಪ್ಪರಗಿ ಬ್ಯಾರೇಜ್ನಲ್ಲಿ ೬ ಟಿಎಂಸಿ ನೀರು ಸಂಗ್ರಹವಾಗಿತ್ತು, ಆದರೆ ಈ ಬಾರಿ ಅ.೨೩ರಂದು ಕೇವಲ ೩.೬೮ ಟಿಎಂಸಿ ಮಾತ್ರ ನೀರು ಸಂಗ್ರಹವಿದೆ.ನೀರಿನ ಮಟ್ಟ ದಿನದಿಂದ ದಿನಕ್ಕೆ ತೀರ ಕುಸಿಯುತ್ತ ಹೋಗುತ್ತಿದ್ದು, ಇದೇ ರೀತಿ ಬಿಸಿಲಿನ ತಾಪಮಾನ ಮುಂದುವರಿದರೆ, ಹಿಂಗಾರು ಮಳೆಯಾಗದಿದ್ದರೆ ಡಿಸೇಂಬರ್ ಕೊನೆಯವಾರದೊಳಗೆ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆ ಕಾಣುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಹಿನ್ನೀರಿನ ಮಟ್ಟದ ಮೇಲೆ ನಿರಂತರ ನಿಗಾ ವಹಿಸುತ್ತಿದ್ದು, ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವಂತೆ, ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಇದಕ್ಕೆ ಸಾರ್ವಜನಿಕರ ಸಹಕಾರ ಬಹುಮುಖ್ಯವಾಗಿದೆ.
- ಶ್ವೇತಾ ಬೀಡಕರ, ಎಸಿ. ಜಮಖಂಡಿ
ನಗರಸಭೆ ವ್ಯಾಪ್ತಿಯಲ್ಲಿನ ಜನರು ಸಹ ನೀರು ಬಳಕೆಯಲ್ಲಿ ಜಾಗರೂಕತೆಯಿಂದ ವ್ಯಯ ಮಾಡದೆ ಹಿತಮಿತವಾಗಿ ಬಳಸಬೇಕು. ಆದರೂ ಸಾರ್ವಜನಿಕರಿಗೆ ನೀರಿನ ಯಾವುದೇ ತೊಂದರೆಯಾಗದಂತೆ ನಿರಂತರ ಈಗಿನಿಂದಲೆ ನಾವು ಎಲ್ಲ ವ್ಯವಸ್ಥೆ ಮಾಡಿಕೊಳ್ಳುತಿದ್ದೇವೆ.
-ಮಹಾಂತೇಶ ಬೀಳಗಿ, ಪೌರಾಯುಕ್ತರು, ನಗರಸಭೆ ರಬಕವಿ-ಬನಹಟ್ಟಿ
ಹತ್ತಾರು ಜಲ ಯೋಜನೆಗಳಿಗೆ ಹಿಪ್ಪರಗಿ ಬ್ಯಾರೇಜ್ ಸಂಗ್ರಹಿತ ನೀರು ಬಳಕೆಯಾಗುತ್ತಿರುವುದರಿಂದ ಬೇಸಿಗೆ ಬಿಸಿಲಿಗಿಂತ ಪ್ರಖರ ಬಿಸಿಲಿಂದಾಗಿ ನೀರು ಬಾಷ್ಪೀಕರಣಗೊಂಡು ನದಿ ನೀರು ಖಾಲಿಯಾಗುತ್ತಿದ್ದು, ಮುಂಬರುವ ಬೇಸಿಗೆ ದಿನಗಳ ಲಕ್ಷಿಸಿ ಅಧಿಕಾರಿಗಳು ಬ್ಯಾರೇಜ್ ನೀರು ಖಾಲಿಯಾಗದಂತೆ ಕ್ರಮ ಜರುಗಿಸಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.