ಕೃಷ್ಣಾ ಮೇಲ್ದಂಡೆ ಯೋಜನೆ ಕೇವಲ ಹೇಳಿಕೆಗೆ ಸೀಮಿತ: ಉದ್ಯಮಿ ಮುರುಗೇಶ ನಿರಾಣಿ

KannadaprabhaNewsNetwork |  
Published : Dec 15, 2025, 04:00 AM IST
ಮಾಜಿ ಸಚಿವ ಮುರುಗೇಶ ನಿರಾಣಿ | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಬಹು ನಿರೀಕ್ಷಿತ ಕೃಷ್ಣಾ ಮೇಲ್ದಂಡೆ ಯೋಜನೆ ಬರಿ ಹೇಳಿಕೆಗಳಿಗೆ ಸೀಮಿತವಾಗಿದೆ. ಯಾವುದೇ ಪ್ರಗತಿ ಆಗಿಲ್ಲ, ಯೋಜನೆಗೆ ಸರ್ಕಾರ ಯಾವುದೇ ಕಾಲಮಿತಿ ನಿಗದಿಗೊಳಿಸಿಲ್ಲ ಎಂದು ಮಾಜಿ ಸಚಿವ, ಉದ್ಯಮಿ ಮುರುಗೇಶ ನಿರಾಣಿ ವಿಷಾದ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಉತ್ತರ ಕರ್ನಾಟಕದ ಬಹು ನಿರೀಕ್ಷಿತ ಕೃಷ್ಣಾ ಮೇಲ್ದಂಡೆ ಯೋಜನೆ ಬರಿ ಹೇಳಿಕೆಗಳಿಗೆ ಸೀಮಿತವಾಗಿದೆ. ಯಾವುದೇ ಪ್ರಗತಿ ಆಗಿಲ್ಲ, ಯೋಜನೆಗೆ ಸರ್ಕಾರ ಯಾವುದೇ ಕಾಲಮಿತಿ ನಿಗದಿಗೊಳಿಸಿಲ್ಲ ಎಂದು ಮಾಜಿ ಸಚಿವ, ಉದ್ಯಮಿ ಮುರುಗೇಶ ನಿರಾಣಿ ವಿಷಾದ ವ್ಯಕ್ತಪಡಿಸಿದರು. ಪಂಚಮಸಾಲಿ ನೌಕರರ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ₹5000 ಕೋಟಿ ಯುಕೆಪಿಗೆ ಮೀಸಲಿಡಲಾಗಿತ್ತು. ಆದರೆ ಸಿದ್ದರಾಮಯ್ಯ ಅವರ ಸರ್ಕಾರ ಈ ಹಣವನ್ನು ಬೇರೆ ಕೆಲಸಕ್ಕೆ ಬಳಸಿಕೊಂಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರ ಆಡಳಿತ ಪ್ರಾರಂಭಿಸಿ ಎರಡುವೆರೆ ವರ್ಷ ಕಳೆದರೂ ಅಭಿವೃದ್ಧಿ ಕಾಮಗಾರಿಗಳಾಗುತ್ತಿಲ್ಲ. ಬಾಗಲಕೋಟೆ ಜಿಲ್ಲೆಯ ಬದಾಮಿ ಕ್ಷೇತ್ರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮರುಜನ್ಮ ನೀಡಿದೆ. ಆದರೆ ಅಭಿವೃದ್ಧಿಯಲ್ಲಿ ಜಿಲ್ಲೆ ಕಡೆಗಣಿಸಲಾಗಿದೆ. ಬಜೆಟ್‌ನಲ್ಲಿ ವಿವಿಧ ಇಲಾಖೆಗಳ ಹೆಡ್‌ಗಳಿಗೆ ಹಣ ಮಂಜೂರು ಮಾಡಿದ್ದು, ಆಯಾ ಹೆಡ್‌ಗಳಲ್ಲಿ ಹಣ ವಿಲ್ಲದಂತಾಗಿದೆ. ಎಲ್ಲಾ ಹಣವನ್ನು ಬೆರೆಡೆ ಖರ್ಚು ಮಾಡಿದ್ದರಿಂದ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ ಎಂದು ತಿಳಿಸಿದರು.

ಅನ್ಯಾಯದ ವಿರುದ್ಧ ಪ್ರತ್ಯೇಕ ರಾಜ್ಯದ ಕೂಗು;

ಸರ್ಕಾರ ಉತ್ತರ ಕರ್ನಾಟಕ ನಿರ್ಲಕ್ಷಿಸಿದ ಪರಿಣಾಮ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ವಾಗುತ್ತಿರುವುದು ಈ ಭಾಗದ ಜನರನ್ನು ಕೆರಳುವಂತೆ ಮಾಡಿದೆ. ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಪಾಟೀಲರು ಬೆಳಗಾವಿ ಅಧಿವೇಶನದಲ್ಲಿ ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ. ನಮ್ಮ ಭಾಗಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಮುಖ್ಯಮಂತ್ರಿಗಳ ಕರ್ತವ್ಯ. ಅಂದರೆ ಮಾತ್ರ ರಾಜ್ಯ ಅಖಂಡವಾಗಿ ಉಳಿಯುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಜಮಖಂಡಿ ಜಿಲ್ಲಾಕೇಂದ್ರ ಘೋಷಿಸಿ;

ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳನ್ನು ವಿಭಜಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಉಪವಿಭಾಗ ಕೇಂದ್ರವಾಗಿರುವ ಜಮಖಂಡಿ ಜಿಲ್ಲಾ ಕೇಂದ್ರ ಘೋಷಿಸಬೇಕು. ಜಮಖಂಡಿಯ ಪಟವರ್ಧನ ಮಹಾರಾಜರ ಬೇಡಿಕೆಯಂತೆ ಜಮಖಂಡಿಗೆ ರೈಲು ನಿಲ್ದಾಣ, ಜಿಲ್ಲಾ ಕೇಂದ್ರ, ಸಾವಳಗಿಯನ್ನು ತಾಲೂಕು ಕೇಂದ್ರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಅಭಿವೃದ್ಧಿ ಕುಂಠಿತ:

ಸಿಎಂ ಗದ್ದುಗೆ ಗುದ್ದಾಟದ ನಡುವೆ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ, ಬರೀ ಡಿನ್ನರ್‌ ಮೀಟಿಂಗ್‌ ಮಾಡುತ್ತ ಕಾಲಹರಣ ನಡೆದಿದೆ. ರಾಜ್ಯದಲ್ಲಿ ತೆರಿಗೆಯನ್ನು ವಿಪರೀತವಾಗಿ ಹೆಚ್ಚಿಸಲಾಗಿದೆ. ಕಾರ್ಖಾನೆಗಳಿಗೆ ₹5ಲಕ್ಷ ಇದ್ದ ನೀರಿನ ತೆರಿಗೆಯನ್ನು ₹1ಕೋಟಿಗೆ ಹೆಚ್ಚಿಸಲಾಗಿದೆ. ಟ್ಯಾಕ್ಸ್‌ ಸ್ಲಾಬ್‌ನ್ನು ತೆಗೆಯಲಾಗಿದ್ದು, ಸಿಕ್ಕಾಪಟ್ಟೆ ಹೆಚ್ಚಿಸಲಾಗಿದೆ. ಮೊಲ್ಯಾಸಿಸ್‌ ನಿಂದ ₹28 ಸಾವಿರ ಕೋಟಿ ತೆರಿಗೆ ಹಣ ಬರುತ್ತದೆ. ಸರ್ಕಾರ ರೈತರ ಹಿತ ಕಾಯುವ ಕೆಲಸ ಮಾಡಬೇಕು. ಸಕ್ಕರೆ ಕಾರ್ಖಾನೆಗಳ ವಿದ್ಯುತ್‌ ಉತ್ಪಾದನೆಯ ಮೇಲೆ ವಿಧಿಸಿರುವ 60 ಪೈಸೆ ತೆರಿಗೆ ತೆಗೆಯಬೇಕು, ಕಾರ್ಖಾನೆಗಳು ಉಳಿಯಬೇಕು ಅಂದರೆ ರೈತರ ಬೇಡಿಕೆಗಳನ್ನು ಈಡೇರಿಸಬಹುದಾಗಿದೆ ಎಂದು ತಿಳಿಸಿದರು. ರಾಜ್ಯದ 27 ಸಕ್ಕರೆ ಕಾರ್ಖಾನೆಗಳ ಪೈಕಿ 14 ಮಾರಾಟಕ್ಕಿವೆ. 11 ಕಾರ್ಖಾನೆಗಳು ಕೋಮಾ ಸ್ಟೇಜ್‌ನಲ್ಲಿವೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ