ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣತಾಲೂಕಿನ ಕಲಸಿಂದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬುಧವಾರದಂದು ನಡೆದ ಚುನಾವಣೆಯಲ್ಲಿ ಕಲಸಿಂದ ಗ್ರಾಮದ ನಿರ್ದೇಶಕ ಕೆ. ಆರ್. ಕೃಷ್ಣಮೂರ್ತಿರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಕಲಸಿಂದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷರಾಗಿದ್ದ ಬಿ. ಎನ್. ಸ್ವಾಮಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣ, ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಇಲಾಖೆಯು ಬುಧವಾರದಂದು ಚುನಾವಣೆ ನಿಗದಿಗೊಳಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಲಸಿಂದ ಕ್ಷೇತ್ರದಿಂದ ನಿರ್ದೇಶಕನಾಗಿ ಆಯ್ಕೆಯಾಗಿದ್ದ ಕೆ. ಆರ್. ಕೃಷ್ಣಮೂರ್ತಿ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಧಿಕಾರಿ ಬಿ.ಕೆ. ವಿಜಯೇಂದ್ರರವರು ಕೃಷ್ಣಮೂರ್ತಿಯವರ ಆಯ್ಕೆಯನ್ನು ಘೋಷಿಸಿದರು.ನೂತನ ಅಧ್ಯಕ್ಷರನ್ನು ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಅಭಿನಂದಿಸಿದರು, ಈ ವೇಳೆ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರು ಸೊಸೈಟಿಯ ಅಭಿವೃದ್ಧಿಗೆ ಗಣನೀಯ ಸಾಧನೆ ಮಾಡಿದ್ದು, ಸಹಕಾರಿ ಸಂಸ್ಥೆಗಳು ಸಹಕಾರ ತತ್ವದಡಿ ಕಾರ್ಯನಿರ್ವಹಿಸಿದಾಗ ಸಹಕಾರ ಸಂಸ್ಥೆಗಳು ಉನ್ನತಿಕರಣಗೊಳ್ಳಲು ಸಾಧ್ಯ. ಸೊಸೈಟಿ ಆರ್ಥಿಕವಾಗಿ ಸದೃಢವಾಗಿ ಬೆಳೆದಿದ್ದು, ಸಂಘದಡಿ ೬.೨೪ ಕೋಟಿ ರು. ಕೆಸಿಸಿ ಸಾಲ ನೀಡಲಾಗಿದೆ, ಸ್ತ್ರಿಶಕ್ತಿ ಸಂಘಗಳಿಗೆ ೧೧ ಲಕ್ಷ ರೂ. ಸಾಲ ನೀಡುವುದರ ಜೊತೆಗೆ ೨೦೨೫-೨೬ನೇ ಸಾಲಿಗೆ ಸೊಸೈಟಿಯು ೧.೨೩ ಲಕ್ಷ ರು. ನಿವ್ವಳ ಲಾಭ ದಾಖಲಿಸಿದೆ. ಇಷ್ಟು ದೊಡ್ಡ ಮಟ್ಟದ ಸಾಲ ನೀಡಲು ಶಾಸಕ ಸಿ.ಎನ್. ಬಾಲಕೃಷ್ಣ ಅವರು ೨೫ ವರ್ಷಗಳಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸುವುದು ನಮಗೆ ವರದಾನವಾಗಿದೆ. ಸಹಕಾರದ ತತ್ವದಲ್ಲಿ ಹುಟ್ಟಿಕೊಂಡ ಸಂಸ್ಥೆಗಳು ಅಧಿಕ ಲಾಭದ ನಿರೀಕ್ಷೆ ಹೊಂದದೇ ಸಹಕಾರ ರಂಗದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೃಷಿ ಉತ್ತೇಜನಕ್ಕೆ ಯೋಜನೆಗಳನ್ನು ರೂಪಿಸಬೇಕು. ಗ್ರಾಹಕರಿಗೆ, ರೈತರಿಗೆ ಹತ್ತಿರವಾಗಿ ಸೇವೆ ಸಲ್ಲಿಸುವಲ್ಲಿ ಮುಂದಾಗುವಂತೆ ತಿಳಿಸಿದರು.ನೂತನ ಅಧ್ಯಕ್ಷ ಕೆ. ಆರ್. ಕೃಷ್ಣಮೂರ್ತಿ ಮಾತನಾಡಿ, ಕಲಸಿಂದ ಕೃಷಿಪತ್ತಿನ ಸಹಕಾರ ಸಂಘಕ್ಕೆ ಹಿಂದೆ ಅಧ್ಯಕ್ಷರಾಗಿದ್ದವರೆಲ್ಲ ಸಂಘವನ್ನು ಅಭಿವೃದ್ಧಿಯತ್ತ ಮುನ್ನಡೆಸಿದ್ದಾರೆ. ಅವರೆಲ್ಲರ ಮಾರ್ಗದರ್ಶನ, ಸಲಹೆಯನ್ನು ಪಡೆದು ಸಂಘವನ್ನು ನಡೆಸಿಕೊಂಡು ಹೋಗುವುದರ ಜೊತೆಗೆ ನಮ್ಮ ನಾಯಕರಾದ ಬಾಲಕೃಷ್ಣರವರಿಂದ ಹೆಚ್ಚಿನ ಅನುದಾನ ತಂದು ರೈತರಿಗೆ ಮತ್ತಷ್ಟು ಸಾಲ ನೀಡುವ ಮೂಲಕ ರೈತರ ಅರ್ಥಿಕತೆಯನ್ನು ಬಲಗೊಳಿಸಲಾಗುವುದೆಂದರು. ಈ ವೇಳೆ ಸೊಸೈಟಿಯ ಉಪಾಧ್ಯಕ್ಷರಾದ ಜಯಲಕ್ಷ್ಮಿ, ಮಾಜಿ ಅಧ್ಯಕ್ಷರಾದ ಬಿ.ಎನ್.ಸ್ವಾಮಿ, ನಿರ್ದೇಶಕರಾದ ಕಲಸಿಂದ ಶಿವರಾಜ್, ಜಿ.ಆರ್. ಉಮೇಶ್, ತಿಮ್ಮೇಗೌಡ, ವಡ್ಡರಹಳ್ಳಿ ಮೋಹನ್‌ಕುಮಾರ್, ಜಿ.ಎಲ್. ನಾಗೇಶ್, ರತ್ನ, ಹರೀಶ್, ಮುನಿಸ್ವಾಮಿ, ಸೇರಿ ಮುಖಂಡರಾದ ದಿಂಡಗೂರು ಗೋವಿಂದರಾಜ್, ಮಂಜು ಇತರರು ಇದ್ದರು.