ಶಿಥಿಲಾವಸ್ಥೆಯಲ್ಲಿ ಕೃಷ್ಣಾನಗರ ಕೋಟೆ: ಬೇಕಿದೆ ಕಾಯಕಲ್ಪ

KannadaprabhaNewsNetwork |  
Published : Jun 03, 2025, 01:27 AM IST
೧ಎಸ್.ಎನ್.ಡಿ.೦೧- ಸಂಡೂರು ಬಳಿಯ ಕೃಷ್ಣಾನಗರದ ಕೋಟೆಯ ಪ್ರವೇಶ ದ್ವಾರ ಶಿಥಿಲಗೊಂಡಿರುವುದು. ೧ಎಸ್.ಎನ್.ಡಿ.೦೨- ಸಂಡೂರು ಬಳಿಯ ಕೃಷ್ಣಾನಗರದ ಐತಿಹಾಸಿಕ ಕೋಟೆಯ ಮೇಲೆ ಗಿಡಗಂಟಿ ಬೆಳೆದಿವೆ. | Kannada Prabha

ಸಾರಾಂಶ

ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕೃಷ್ಣಾನಗರದಲ್ಲಿನ ಐತಿಹಾಸಿಕ ಕೋಟೆ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಶಿಥಿಲಗೊಂಡಿದೆ.

ಹೈದರಾಲಿ, ಟಿಪ್ಪುಸುಲ್ತಾನರಿಂದ ಕಟ್ಟಲ್ಪಟ್ಟ ಕೋಟೆಸೈನಿಕ ತರಬೇತಿ, ಯುದ್ಧಾಸ್ತ್ರಗಳನ್ನು ಸಂಗ್ರಹಿಸಿಡುತ್ತಿದ್ದ ಸ್ಥಳ

ವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರು

ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕೃಷ್ಣಾನಗರದಲ್ಲಿನ ಐತಿಹಾಸಿಕ ಕೋಟೆ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಶಿಥಿಲಗೊಂಡಿದೆ. ಈ ಐತಿಹಾಸಿಕ ಕೋಟೆ ಜೀರ್ಣಾವಸ್ಥೆ ತಲುಪಿ ನಾಮಾವಶೇಷವಾಗುವ ಮುಂಚೆ ಅದನ್ನು ದುರಸ್ತಿಗೊಳಿಸಿ, ಮುಂದಿನ ತಲೆಮಾರುಗಳಿಗೂ ಅದರ ಅಸ್ತಿತ್ವ ಉಳಿಸಿ, ತಿಳಿಸುವ ಅಗತ್ಯವಿದೆ. ರಾಜ್ಯ ಪುರಾತತ್ವ ಇಲಾಖೆ ಅಡಿಯಲ್ಲಿ ಈ ಕೋಟೆ ಬರುತ್ತಿದ್ದರೂ, ಶಿಥಿಲಗೊಂಡಿರುವ ಈ ಕೋಟೆಯ ದುರಸ್ತಿ ಹಾಗೂ ಸಂರಕ್ಷಣಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ.

ಸಂಡೂರು ಹಾಗೂ ಕೃಷ್ಣಾನಗರದ ಮಧ್ಯ ಇರುವುದು ಒಂದು ಚಿಕ್ಕ ಹಳ್ಳ ಮಾತ್ರ. ಹಳ್ಳ ದಾಟಿದರೆ ಕಾಣ ಸಿಗುವುದೇ ಐತಿಹಾಸಿಕ ಕೃಷ್ಣಾನಗರ ಕೋಟೆ. ಈ ಕೋಟೆಯ ನಿರ್ಮಾಣವನ್ನು ಹೈದರಾಲಿ ಪ್ರಾರಂಭಿಸಿದರೆ, ಪೂರ್ಣಗೊಳಿಸಿದ್ದು ಅವರ ಮಗ ಟಿಪ್ಪು ಸುಲ್ತಾನ್.ಸೈನಿಕರ ತರಬೇತಿ ಹಾಗೂ ಯುದ್ಧಾಸ್ತ್ರಗಳನ್ನು ಸಂಗ್ರಹಿಸಲು ಈ ಕೋಟೆಯನ್ನು ಉಪಯೋಗಿಸಲಾಗುತ್ತಿತ್ತೆಂದು ಹೇಳಲಾಗುತ್ತಿದೆ. ಈ ಹಿಂದೆ ಕೋಟೆಯ ಕೆಲವು ಭಾಗಗಳ ದುರಸ್ತಿ ಸಂದರ್ಭ ದೊಡ್ಡ ದೊಡ್ಡ ಗುಂಡುಗಳು ದೊರೆತಿರುವುದು ಹೇಳಿಕೆಗೆ ಪುಷ್ಟಿ ನೀಡಿದೆ.

ಕೋಟೆಯ ಒಳಗಡೆ ಜನವಸತಿ ಇದೆ. ನೂರಾರು ಕುಟುಂಬಗಳು ಕೋಟೆಯ ಒಳಗಡೆ ನೆಲೆ ಕಂಡುಕೊಂಡಿವೆ. ಕೃಷ್ಣಾನಗರ ಗ್ರಾಮವು ಗ್ರಾಪಂ ಕೇಂದ್ರವಾಗಿದೆ. ಕೋಟೆಯ ಹೊರಗಡೆಯಿಂದ ಒಳಗಿನ ಗ್ರಾಮಕ್ಕೆ ತಲುಪಲು ಮೂರು ಹೆಬ್ಬಾಗಿಲುಗಳನ್ನು ದಾಟಬೇಕು.

ಕಲ್ಲು ಇಟ್ಟಿಗೆ ಗಾರೆಗಳಿಂದ ನಿರ್ಮಿಸಲಾಗಿರುವ ಈ ಕೋಟೆಯ ಮೇಲೀಗ ಗಿಡಗಂಟಿಗಳು ಬೆಳೆದ ಕಾರಣ, ಅವುಗಳ ಬೇರುಗಳು ಕೋಟೆಯ ಒಳಹೋಗಿ ಗೋಡೆಗಳನ್ನು ಶಿಥಿಲಗೊಳಿಸಿವೆ. ಹಾಗಾಗಿ ಅಲ್ಲಲ್ಲಿ ಕೋಟೆಯ ಗೋಡೆ ಬಿರುಕು ಬಿಟ್ಟಿದೆ. ಕೋಟೆಯ ಸುತ್ತಲಿದ್ದ ಕಂದಕದಲ್ಲಿ ಕಸಕಡ್ಡಿಗಳು ಸಂಗ್ರಹಗೊಂಡು, ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಹಂತ ತಲುಪಿದೆ.

ಐತಿಹಾಸಿಕ ಕೃಷ್ಣಾನಗರ ಕೋಟೆ ತನ್ನ ಅಸ್ತಿತ್ವ ಉಳಿಸಿಕೊಂಡು, ಮುಂದಿನ ತಲೆಮಾರುಗಳಿಗೂ ಇದು ಕಾಣಸಿಗಬೇಕೆಂದರೆ, ಈ ಕೋಟೆಯನ್ನು ದುರಸ್ತಿಗೊಳಿಸಿ, ಸಂರಕ್ಷಿಸಬೇಕಿದೆ. ರಾಜ್ಯ ಪುರಾತತ್ವ ಇಲಾಖೆ ಕೋಟೆಯ ದುರಸ್ತಿ ಹಾಗೂ ಸಂರಕ್ಷಣೆಗೆ ಮುಂದಾಗಬೇಕೆಂಬುದು ಜನರ ಹಕ್ಕೊತ್ತಾಯ.

PREV

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು