ಕನ್ನಡಪ್ರಭ ವಾರ್ತೆ ಯಾದಗಿರಿ
ನಗರಸಭೆಯ ಕಂದಾಯ ನಿರೀಕ್ಷಕ ಮಾನಪ್ಪ ಬಡಿಗೇರ್, ಪ್ರಭಾರಿ ಮೈನೋದ್ದೀನ್ ಮೊಹ್ಮದ್ ಹಜರತ್ ಹಾಗೂ ಶಹಾಪುರ ನಗರಸಭೆಯಲ್ಲಿ ನೀರು ಸರಬರಾಜು ವಿಭಾಗದ ಮೇಲ್ವಿಚಾರಕರಾಗಿರುವ ಹಣಮಂತಪ್ಪ ಆಶನಾಳ ಎಂಬುವವರನ್ನು ಬಂಧಿಸಲಾಗಿದೆ.
ಘಟನೆ ವಿವರ :ಯಾದಗಿರಿ ಸೀಮಾಂತರದ ಸರ್ವೆ ನಂ. 151 ರಲ್ಲಿನ ನಿವೇಶನ ಸಂಖ್ಯೆ 42ನ್ನು ಮಲ್ಲಮ್ಮ ರಾಮಣ್ಣ ಎಂಬುವವರ ಹೆಸರಿಗೆ ಮಾಡಿಕೊಟ್ಟಿದ್ದ ಈ ಮೂವರು, ರಜೆ ದಿನವಾದ ಭಾನುವಾರ ಸಂಜೆ 4ರ ಸುಮಾರಿಗೆ ನಗರಸಭೆ ಕಚೇರಿಗೆ ಬಂದು, ಅಲ್ಲಿದ್ದ ಕಾವಲುಗಾರ ತಿಪ್ಪಣ್ಣ ಎಂಬುವವನಿಗೆ ಬೆದರಿಸಿ ಕಚೇರಿ ಬೀಗ ತೆಗೆದುಕೊಂಡು ಕೋಣೆಗಳಿಗೆ ಹೋಗಿ ಹಲವಾರು ಕಡತಗಳನ್ನು ಪರಿಶೀಲಿಸಿ ಅಕ್ರಮ ಎಸಗಿದ್ದು ಸಿಸಿಟಿವಿ ಮೂಲಕ ಕಂಡು ಬಂದಿದೆ ಮತ್ತು ಈ ವೇಳೆ ಓರ್ವ ಸಾರ್ವಜನಿಕ ವ್ಯಕ್ತಿ ಅಲ್ಲಿರುವುದು ಕಾಣಿಸಿದೆ ಎಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ, ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಹೇಳಿದ್ದಾರೆ.
ಆ ರೀತಿಯಾಗಿ ಸರ್ಕಾರಕ್ಕೂ ಮತ್ತು ಇಲಾಖೆಗೂ ಮೋಸ ಮಾಡಿರುವ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಯಾದಗಿರಿ ನಗರದ ಯಾದಗಿರಿ (ಅ) ಸರ್ವೆ ನಂ. 151 ರಲ್ಲಿಯ ಆಶ್ರಯ ಯೋಜನೆಯ ನಿವೇಶನಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣ ಆರೋಪ ಈ ಮೂವರ ಮೇಲಿದೆ. ಇದರ ದೂರಿಗೆ ಸಂಬಂಧಿಸಿದಂತೆ ಜಂಟಿ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಒಂದು ತಂಡ ರಚಿಸಲಾಗಿತ್ತು.
ಆದರೆ, ಸದರಿ ಕಡತಗಳನ್ನು ತನಿಖೆಗೆ ಹಾಜರುಪಡಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಪ್ರಯುಕ್ತ ಸರ್ವೆ ನಂ. 151/1 ರ ಆಶ್ರಯ ಲೇಔಟ್‌ನಲ್ಲಿನ ಮೂಲ ಫಲಾನುಭವಿಗಳ ದಾಖಲಾತಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ, ಮೂಲ ಫಲಾನುಭವಿಗಳು ಅಥವಾ ಅನಧಿಕೃತ ಫಲಾನುಭವಿಗಳು ಇರುವ ಕುರಿತು ಸಮಗ್ರ ವರದಿಯನ್ನು ತಯಾರಿಸಿ ಸಲ್ಲಿಸುವುದು ಹಾಗೂ ಹಂಚಿಕೆಯಾಗದ ಕೆಲವೊಂದು ನಿವೇಶನಗಳಿಗೆ ಯಾವ ಆಧಾರದ ಮೇಲೆ ನಮೂನೆ-3 ಮತ್ತು ಪಿ.ಐ.ಡಿ. ಸಂಖ್ಯೆ ನೀಡಲಾಗಿರುತ್ತದೆ ಎಂಬುದರ ಕುರಿತು ಸಂಪೂರ್ಣ ವರದಿಯನ್ನು ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿತ್ತು. ಇದರನ್ವಯ, ಪೌರಾಯುಕ್ತರು ವರದಿ ಸಲ್ಲಿಸಿ ದೂರು ದಾಖಲಿಸಿದ್ದಾರೆ.