)
ಉಡುಪಿ: ಕೃಷ್ಣಮಠದಲ್ಲಿ ಪರ್ಯಾಯ ನಡೆಸುವ ಯತಿಗಳಿಗೆ ದೊಡ್ಡ ಹೊಣೆಗಾರಿಕೆ ಇದೆ, ಕೃಷ್ಣನ ಪೂಜೆಯ ಜೊತೆಗೆ ವೇದಾಂತ ಸಾಮ್ರಾಜ್ಯವನ್ನು ಪರಿಪಾಲನೆ ಮಾಡುವುದು, ಸಮಾಜಕ್ಕೆ ವೇದ ವಿದ್ಯೆಯನ್ನು ನೀಡುವುದು ಮತ್ತು ಧಾರ್ಮಿಕ ಪ್ರಜ್ಞೆ ಬೆಳೆಸುವುದು ಕೂಡ ಪರ್ಯಾಯ ಪೀಠಾಧೀಶರ ಹೊಣೆ ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.
ದೇವರ ಪ್ರಜ್ಞೆ ಬೆಳೆಸದಿದ್ದರೆ, ಜನರು ಪಾಪ ಭೀತಿ ಇಲ್ಲದೇ ತಪ್ಪು ಮಾರ್ಗದಲ್ಲಿ ನಡೆದು ಧರ್ಮಕ್ಕೆ ಹಾನಿಯಾಗುತ್ತದೆ. ಹಾಗಾಗಬಾರದು, ಜನರು ಧರ್ಮ ಮಾರ್ಗದಲ್ಲಿ ನಡೆಯಬೇಕು, ಅದಕ್ಕೆ ಬೇಕಾದ ಮಾರ್ಗದರ್ಶನ |ಪೀಠಾಧಿಪತಿಗಳಿಂದ ಆಗಬೇಕು ಎಂದವರು ಹೇಳಿದರು.
ಮಠಾಧಿಪತಿಗಳು ಬೋಧನೆ ಮಾಡಬೇಕು ಎನ್ನುತ್ತಾರೆ, ಆದರೆ ಬೋಧನೆಯಿಂದ ಸಮಾಜದ ಜನರ ಮೇಲೆ ಯಾವುದೇ ಪರಿಣಾಮಗಳಾಗುತ್ತಿಲ್ಲ, ಮೊದಲು ಮಠಾಧಿಪತಿಗಳು ಅದರಂತೆ ನಡೆದುಕೊಳ್ಳಬೇಕು, ಅದು ಬೇರೆಯವರ ಮೇಲೆ ಪರಿಣಾಮ ಬೀರುತ್ತದೆ, ಆಗ ಭೋದನೆಗೆ ಬೆಲೆ ಬರುತ್ತದೆ ಎಂದು ಶ್ರೀಗಳು ಸಲಹೆ ಮಾಡಿದರು.ಮಠಾಧಿಪತಿಗಳು ಲೋಕ ಕಲ್ಯಾಣ ಮಾಡಬೇಕು ಎನ್ನುತ್ತಾರೆ, ಅದಕ್ಕೆ ಮೊದಲು ಸ್ವಯಂ ಕಲ್ಯಾಣ ಮಾಡಿಕೊಳ್ಳಬೇಕು ಎಂದು ಕೃಷ್ಣನೇ ಗೀತೆಯಲ್ಲಿ ಹೇಳಿದ್ದಾನೆ. ಆದರೇ ಸ್ವಯಂ ಕಲ್ಯಾಣ ಎಂದರೇ ಹಣ ಸಂಪತ್ತು ಸಂಗ್ರಹಿಸುವುದಲ್ಲ, ಪ್ರಚಾರಕೊಸ್ಕರ ಕೆಲಸ ಮಾಡುವುದಲ್ಲ, ದೇವರ ಪ್ರೀತಿಗಾಗಿ ಮಾಡಬೇಕು, ಆಗ ಪ್ರತಿಯೊಬ್ಬರ ಆತ್ಮ ಕಲ್ಯಾಣವಾಗುತ್ತದೆ, ಆ ಮೂಲಕ ದೇಶದ ಕಲ್ಯಾಣವಾಗುತ್ತದೆ ಎಂದು ಶ್ರೀಗಳು ವಿಶ್ಲೇಷಿಸಿದರು.
ನಂತರ ಇತರ ಮಠಾಧೀಶರೂ ಸಂದೇಶ ನೀಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮೈಸೂರು ಮಹಾರಾಜ ಯುದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಭಾಶಂಸನೆಗೈದರು.ಬೆಂಗಳೂರು ಇಸ್ಕಾನ್‌ನ ಅಧ್ಯಕ್ಷ ಮಧು ಪಂಡಿತ್ ದಾಸ್ ಮತ್ತು ಉಪಾಧ್ಯಕ್ಷ ಚಂಚಲಪತಿ ದಾಸ್ ವೇದಿಕೆಯಲ್ಲಿದ್ದರು. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್‌ಕುಮಾರ ಕೊಡ್ಗಿ, ಗುರುರಾಜ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಹಿಂಪನ ಎಂ. ಬಿ,. ಪುರಾಣಿಕ್, ಉದ್ಯಮಿ ವಿಷ್ಣುಶರಣ್ ಭಟ್, ಕೆನರಾ ಬ್ಯಾಂಕ್ ನ ಹಿರಿಯ ಅಧಿಕಾರಿಗಳಾದ ಎಚ್.ಕೆ. ಗಂಗಾಧರ್, ರಾಘವೇಂದ್ರ ಭಟ್, ಎಸ್‌ಬಿಐನ ಪ್ರಕಾಶ್ ಅಡಿಗ, ಯುಬಿಐನ ಅಶೋಕ್ ಪಾಂಡೆ, ಎಲ್‌ಐಸಿಯ ಗಣಪತಿ ಭಟ್, ಕಟೀಲಿನ ವೆಂಕಟರಮಣ ಅಸ್ರಣ್ಣ, ಅದಾನಿ ಸಮೂಹದ ಕಿಶೋರ್ ಆಳ್ವ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶಪಾಲ್ ಸುವರ್ಣ ಸ್ವಾಗತಿಸಿದರು, ಪ್ರ.ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ವಂದಿಸಿದರು.