ದುರಸ್ತಿಯಲ್ಲಿ 21 ಸಂಸ್ಕರಣಾ ಘಟಕ: ಹಳ್ಳ ಹಿಡಿದ ಕಸ ಸಂಗ್ರಹಣಾ ವ್ಯವಸ್ಥೆ,

KannadaprabhaNewsNetwork |  
Published : Jan 19, 2026, 01:15 AM IST
21ಎಚ್‌ಯುಬಿ51ಎಕಸ ಸಂಗ್ರಹಣಾ ವಾಗನಗಳು ನಿಗದಿತ ವೇಳೆಗೆ ಬಾರದಿರುವುದರಿಂದ ಜನ ರಸ್ತೆಯಲ್ಲಿ ಚೆಲ್ಲಿರುವ ಕಸ. | Kannada Prabha

ಸಾರಾಂಶ

ಕಳೆದ ಮೂರು ತಿಂಗಳಿಂದ ಕಾಂಪ್ಯಾಕ್ಟ್ ಸ್ಚೇಷನ್ ಗಳು ದುರಸ್ತಿಯಲ್ಲಿರುವುದರಿಂದ ಕಸ ಸಂಗ್ರಹಣೆಯಲ್ಲಿ ಏರುಪೇರಾಗಿದ್ದು, ಜನ ರಸ್ತೆ ಮೇಲೆ ಕಸ ಚೆಲ್ಲುವಂತಾಗಿದೆ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ಅವಳಿ ನಗರವನ್ನು ಸ್ವಚ್ಛ, ಸುಂದರವಾಗಿಟ್ಟುಕೊಳ್ಳಲು ಮಹಾನಗರ ಪಾಲಿಕೆ ಕಾಲಕಾಲಕ್ಕೆ ಹಲವು ಕಾರ್ಯಕ್ರಮ ರೂಪಿಸಿ ಜಾರಿ ಮಾಡುತ್ತಲೇ ಇದೆ. ಆದರೆ, ಒಂದಿಲ್ಲೊಂದು ರೀತಿಯಲ್ಲಿ ಈ ಕಾರ್ಯಕ್ಕೆ ಅಡೆತಡೆ ಉಂಟಾಗುತ್ತಿವೆ. ಸದ್ಯ ಪಾಲಿಕೆಯ ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 27 ಕಸ ಸಂಸ್ಕರಣಾ ಘಟಕಗಳ (ಕಾಂಪ್ಯಾಕ್ಟ್ ಸ್ಚೇಷನ್) ಪೈಕಿ 21 ದುರಸ್ತಿಯಲ್ಲಿದ್ದು, ಕಸ ಸಂಗ್ರಹ ವ್ಯವಸ್ಥೆ ಹಳ್ಳ ಹಿಡಿದಿದೆ.

ಈ ಸಂಸ್ಕರಣಾ ಘಟಕಗಳು ದುರಸ್ತಿಯಲ್ಲಿರುವುದು ಮನೆ-ಮನೆ ಕಸ ಸಂಗ್ರಹಣೆ ಮೇಲೆಯೂ ಪರಿಣಾಮ ಬೀರಿದೆ. ಇಂದಿರಾ ನಗರ, ಲಿಂಗರಾಜ ನಗರ, ಕೇಶ್ವಾಪುರ, ಆನಂದನಗರದ ನಂದಿನಿ ಲೇಔಟ್‌ಗಳಲ್ಲಿರುವ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಆಯಾ ಭಾಗದ ಕಸ ಸಂಗ್ರಹಿಸಿ ತಂದು ಈ ಕಾಂಪ್ಯಾಕ್ಟ್ ಸ್ಟೇಷನ್‌ಗಳಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಸ್ಕರಿಸಿ ಹೇಸಿಗೆ ಮಡ್ಡಿಗೆ ದೊಡ್ಡ ವಾಹನಗಳಲ್ಲಿ ಸಾಗಿಸಲಾಗುತ್ತದೆ.

ಕಸ ಸಂಗ್ರಹಕ್ಕೆ ಅಡಚಣೆ

ಕಸ ಸಂಸ್ಕರಣಾ ಘಟಕಗಳು ಹಾಳಾಗಿರುವುದರಿಂದ ನಗರದಲ್ಲಿ ಸಂಗ್ರಹಿಸಿದ ಕಸವನ್ನು ಕಾರವಾರ ರಸ್ತೆಯ ಹೇಸಿಗೆ ಮಡ್ಡಿಗೆ ಸಾಗಿಸಬೇಕಿದೆ. ಮೊದಲು ನಾಲ್ಕು ಘಟಕಗಳಲ್ಲಿ ಸಂಸ್ಕರಣಗೊಳ್ಳುತ್ತಿದ್ದ ಎಲ್ಲ ತ್ಯಾಜ್ಯವನ್ನು ಹೇಸಿಗೆ ಮಡ್ಡಿಗೆ ಸಾಗಿಸುತ್ತಿರುವುದರಿಂದ ಅಲ್ಲಿಯೂ ಒತ್ತಡ ಹೆಚ್ಚಾಗಿ ಕಸ್ ಡಂಪ್ ಮಾಡಲು ಗಂಟೆಗಟ್ಟಲೇ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಬೆಳಗಿನ ವೇಳೆ 9ರಿಂದ 10 ಗಂಟೆಯೊಳಗೆ ಕಸ ಸಂಗ್ರಹಣೆಗೆ ಬರುತ್ತಿದ್ದ ವಾಹನಗಳು ಒಂದೆರಡು ಗಂಟೆ ತಡವಾಗಿ ಬರುತ್ತಿವೆ. ಇದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ.ಬ್ಲ್ಯಾಕ್‌ ಸ್ಪಾಟ್‌ ಹೆಚ್ಚಳ

ಪಾಲಿಕೆ ಬ್ಲ್ಯಾಕ್ ಸ್ಪಾಟ್‌ ಗುರುತಿಸಿ ಅವುಗಳನ್ನು ಸ್ವಚ್ಛ ಮಾಡಿ ರಂಗೋಲಿ ಬಿಡಿಸಿ ಆ ಸ್ಥಳಗಳಲ್ಲಿ ಕಸ ಚೆಲ್ಲದಂತೆ ಜಾಗೃತಿ ಮೂಡಿಸುತ್ತಿದೆ. ಆದರೆ, ಸಕಾಲಕ್ಕೆ ಕಸ ಸಂಗ್ರಹಿಸಲು ವಾಹನ ಬರದೆ ಇರುವುದರಿಂದ ಜನರು ಖಾಲಿ ಜಾಗದಲ್ಲಿ ಕಸ ಎಸೆಯಲು ಶುರು ಮಾಡಿದ್ದಾರೆ.

ಮೂರು ತಿಂಗಳಿಂದ ಕಸ ಸಂಸ್ಕರಣಾ ಘಟಕಗಳು ದುರಸ್ತಿಯಲ್ಲಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚುವಂತಾಗಿದೆ. ಶನಿವಾರವಷ್ಟೇ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರು ಈ ಘಟಕಗಳನ್ನು ಪರಿಶೀಲಿಸಿದ್ದು ಶೀಘ್ರ ದುರಸ್ತಿ ಮಾಡುವಂತೆ ಘಟಕ ತಯಾರಿಕಾ ಕಂಪನಿಗೆ ಸೂಚಿಸಿದ್ದಾರೆ.

ಏನಿದು ಕಸ ಸಂಸ್ಕರಣಾ ಘಟಕ?

ಕಸ ಸಂಸ್ಕರಣಾ ಘಟಕ (ಕಾಂಪ್ಯಾಕ್ಟ್ ಸ್ಟೇಷನ್) ಎಂದರೆ ಕಡಿಮೆ ಸ್ಥಳಾವಕಾಶದಲ್ಲಿ ತ್ಯಾಜ್ಯ ಸಂಸ್ಕರಿಸುವ, ಸಂಕುಚಿತಗೊಳಿಸುವ ಘಟಕ. ಮನೆ, ಹೋಟೆಲ್, ಅಂಗಡಿ ಮುಂತಾದೆಡೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಈ ಘಟಕಗಳಲ್ಲಿ ಹಾಕಲಾಗುತ್ತದೆ. ಇಲ್ಲಿ ಕಸ ಸಂಸ್ಕರಿಸುವ ಜತೆಗೆ ಗಾತ್ರ ಕಡಿಮೆ ಮಾಡಿ, ದೊಡ್ಡ ವಾಹನಗಳ ಮೂಲಕ ಮುಖ್ಯ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತದೆ.

ಎರಡ್ಮೂರು ತಿಂಗಳಿಂದ ಕಸ ಸಂಗ್ರಹಣಾ ವಾಹನ ತಡವಾಗಿ ಬರುತ್ತಿವೆ. ನಾವು ಬೆಳಗ್ಗೆ ಉದ್ಯೋಗಕ್ಕೆ ಹೋಗುವುದರಿಂದ ವಾರಕ್ಕೆ 1 ಅಥವಾ 2 ಬಾರಿ ಕಸ ಹಾಕುವಂತೆ ಆಗಿದೆ. ವಾಹನಗಳ ವಿಳಂಬದಿಂದ ಕೆಲವರು ರಸ್ತೆಯಲ್ಲಿಯೇ ಕಸ ಹಾಕುತ್ತಿದ್ದಾರೆ ಎನ್ನುತ್ತಾರೆ ಕೇಶ್ವಾಪುರ ನಿವಾಸಿ ಸ್ಮೀತಾ.

ಕಸ ಸಂಸ್ಕರಣಾ ಘಟಕಗಳು ಹಾಳಾಗಿದ್ದು, ಮನೆ-ಮನೆ ಕಸ ಸಂಗ್ರಹ ತಡವಾಗುತ್ತಿದೆ. ನಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ನಿತ್ಯ ಮಧ್ಯಾಹ್ನ 2ರೊಳಗೆ ಕಸ ಸಂಗ್ರಹಿಸಿ ಘಟಕಗಳಿಗೆ ತಂದು ಡಂಪ್ ಮಾಡುತ್ತಿದ್ದೆವು. ವಾಹನ ತುಂಬಿದ ಮೇಲೆ ಅದನ್ನು ಖಾಲಿ ಮಾಡಿ ಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಕಸ ಸಂಗ್ರಹಣಾ ವಾಹನ ಚಾಲಕ ಹೇಳುತ್ತಾರೆ.

ಮೂರು ತಿಂಗಳಿಂದ ಹುಬ್ಬಳ್ಳಿಯ 27 ಕಸ ಸಂಸ್ಕರಣಾ ಘಟಕಗಳಳ ಪೈಕಿ 21 ದುರಸ್ತಿಯಲ್ಲಿದ್ದು, ದೆಹಲಿ ಮೂಲದ ಕಂಪನಿ ದುರಸ್ತಿ ಮಾಡುತ್ತಿದೆ. ಎಲ್ಲ ಘಟಕಗಳ ದುರಸ್ತಿಗೆ 45 ದಿನ ಕಾಲಾವಕಾಶ ಕೇಳಿದ್ದಾರೆ. ಆದರೂ ಶೀಘ್ರ ದುರಸ್ತಿ ಮಾಡುವಂತೆ ಸೂಚಿಸಲಾಗಿದೆ ಎಂದು ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರರಾದ ಸಂತೋಷಕುಮಾರ ಬಿ. ಯರಂಗಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೆಹಲಿ ಭೇಟಿ ವೇಳೆ ಉಪಮುಖ್ಯಮಂತ್ರಿ ನಿಗೂಢ ಹೇಳಿಕೆ
ಹುಣಸೂರಿನಲ್ಲಿ ₹10 ಕೋಟಿ ಚಿನ್ನ ದೋಚಿದ್ದವರು ಬಿಹಾರದಲ್ಲಿ ಬಲೆಗೆ