ಕನ್ನಡಪ್ರಭ ವಾರ್ತೆ ಆಲೂರು ಆಲೂರು ಒಂದು ತಾಲೂಕು ಕೇಂದ್ರ ಎಂಬುದನ್ನ ಮರೆತಿರುವ ಕೆಲವು ಡಿಪೋಗಳ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಇಲಾಖೆಯ ಆದೇಶವಿದ್ದರೂ ಕೂಡ ಆಲೂರು ಪಟ್ಟಣದ ಒಳಗಡೆ ಇರುವ ಬಸ್ ನಿಲ್ದಾಣಕ್ಕೆ ಬಾರದೆ ಆಲೂರು ಕೂಡಿಗೆಯ ಬೈಪಾಸ್‌ನಿಂದ ನೇರವಾಗಿ ಸಕಲೇಶಪುರ ಮತ್ತು ಮಂಗಳೂರು ಕಡೆಗೆ ಸಂಚರಿಸುತ್ತಿದ್ದಾರೆ. ಹಾಸನದಿಂದ ಆಲೂರಿಗೆ ಟಿಕೆಟ್ ಅನ್ನು ಪಡೆದುಕೊಂಡರು ಕೂಡ ಪ್ರಯಾಣಿಕರನ್ನು ಆಲೂರು ಪಟ್ಟಣದಲ್ಲಿ ಇಳಿಸದೆ ಆಲೂರು ಕೂಡಿಗೆಯಲ್ಲಿ ಮತ್ತು ಬೈರಾಪುರ ಸರ್ಕಲ್‌ನಲ್ಲಿ ಇಳಿಸಿ ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಈ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಸಾರಿಗೆ ಇಲಾಖೆಯ ಸಿಬ್ಬಂದಿಯ ವಿರುದ್ಧ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅದರ ಪರಿಣಾಮ ಸೋಮವಾರ ಆಲೂರು ವೃತ್ತ ನಿರೀಕ್ಷಕ ಗಂಗಾಧರ್ ಸಾರಿಗೆ ಅಧಿಕಾರಿಯೊಂದಿಗೆ ದೂರವಾಣಿಯ ಮೂಲಕ ಚರ್ಚಿಸಿ ಇನ್ನು ಮೂರು ದಿನಗಳೊಳಗಾಗಿ ಸಮಸ್ಯೆಯನ್ನು ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆದರೆ ಅದಕ್ಕೆ ನೀವೇ ನೇರ ಹೊಣೆಯಾಗುತ್ತೀರಿ ಎಂದು ತಿಳಿಸಿದ್ದು, ಇಲಾಖೆಯ ಅಧಿಕಾರಿಗಳು ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ನಂತರ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಯ ಮುಖಂಡರು ಸರ್ಕಲ್ ಇನ್ಸ್ ಪೆಕ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು ಮೂರ್ನಾಲ್ಕು ದಿನ ಕಾದು ನೋಡಿ ಸಮಸ್ಯೆ ಬಗೆಹರಿಯದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ಸುಗಳನ್ನು ತಡೆದು ಹೋರಾಟ ನಡೆಸಲಾಗುವುದೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಪತ್ರಿಕೆಯೊಂದಿಗೆ ಮಾತನಾಡಿದ ಪ್ರತಿಭಟನಾಕಾರರು, ಪ್ರತಿದಿನ ಹಲವಾರು ಬಸ್ಸುಗಳು ಆಲೂರು ಪಟ್ಟಣವನ್ನು ಪ್ರವೇಶಿಸದೆ ನೇರವಾಗಿ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಕಲೇಶಪುರ ಮತ್ತು ಮಂಗಳೂರು ಧರ್ಮಸ್ಥಳವನ್ನು ತಲುಪುತ್ತವೆ. ಹಾಸನದಿಂದ ಆಲೂರಿಗೆ ಪ್ರಯಾಣಿಕರು ಟಿಕೆಟನ್ನು ಪಡೆದುಕೊಂಡಿದ್ದರೂ ಅವರು ಆಲೂರು ಪಟ್ಟಣದ ಒಳಗೆ ಯಾಕೆ ಬಸ್ಸು ಹೋಗುತ್ತಿಲ್ಲ ಎಂಬುದನ್ನು ಪ್ರಶ್ನಿಸಿದರೆ ಅವರ ಮೇಲೆ ದರ್ಪದಿಂದ ವರ್ತಿಸುವುದರ ಜೊತೆಗೆ ಅವರನ್ನು ಆಲೂರು ಕೂಡಿಗೆಯಲ್ಲೇ ಇಳಿಸಿ ಅಥವಾ ಬೈರಾಪುರ ಸರ್ಕಲ್‌ನಲ್ಲಿ ಇಳಿಸಿ ಹೋಗುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಆಲೂರು ಕೂಡಿಗೆಯಿಂದ ಆಲೂರು ಪಟ್ಟಣ ಎರಡು ಕಿಲೋಮೀಟರ್ ಮತ್ತು ಬೈರಾಪುರದಿಂದ ಆಲೂರು ಪಟ್ಟಣ ಎರಡು ಕಿಲೋಮೀಟರ್ ಅಂತರವಿದ್ದು ರಾತ್ರಿ ವೇಳೆಯಲ್ಲಿ ಮಹಿಳೆಯರನ್ನು ಮತ್ತು ಮಕ್ಕಳನ್ನು ವಯೋವೃದ್ಧರನ್ನು ಈ ರೀತಿ ನಡೆಸಿಕೊಂಡರೆ ರಾತ್ರಿ ವೇಳೆಯಲ್ಲಿ ಅವರು ಮನೆ ತಲುಪುವುದು ಹೇಗೆ. ಈ ಸಂದರ್ಭದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಇದಕ್ಕೆ ಯಾರು ಹೊಣೆ? ಅಲ್ಲದೆ ಇಲಾಖೆಯವರು ಹಲವಾರು ಬಸ್ಸುಗಳನ್ನು ನಾನ್ ಸ್ಟಾಪ್ ಗಾಡಿಗಳಾಗಿ ನಿಯೋಜಿಸಿದ್ದು ಈ ಬಸ್ಸುಗಳನ್ನು ಬಾಳ್ಳುಪೇಟೆಯಲ್ಲಿ ನಿಲುಗಡೆ ನೀಡುತ್ತಿದ್ದಾರೆ. ಅಲ್ಲಿ ನಿಲುಗಡೆ ನೀಡುವುದಕ್ಕೆ ನಮ್ಮದೇನು ತಕರಾರಿಲ್ಲ. ಆದರೆ ಆಲೂರು ತಾಲೂಕು ಕೇಂದ್ರವಾಗಿದ್ದು ಇಲ್ಲಿ ಏಕೆ ನಿಲುಗಡೆ ನೀಡುವುದಿಲ್ಲ ಎಂಬುದು ನಮ್ಮ ಪ್ರಶ್ನೆಯಾಗಿದೆ. ಇನ್ನು ಕೆಲವು ದಿನ ಕಾದು ನೋಡುತ್ತೇವೆ. ಇಲ್ಲದೆ ಹೋದರೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.