ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನೌಕರರು ತಮ್ಮ ಭವಿಷ್ಯದ ನೆಲೆಗಾಗಿ ರೂಪಿಸಿಕೊಂಡಿರುವ ಪ್ರತಿಷ್ಠಿತ ಎಂಪಿಎಂ ಬಡಾವಣೆಗೆ ಹಲವು ವರ್ಷಗಳ ನಂತರ ಶುಕ್ರವಾರದಿಂದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.ಎಂಪಿಎಂ ಬಡಾವಣೆ ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-206ರ ಪಕ್ಕದಲ್ಲಿದ್ದರೂ ಸಹ ಹಲವು ವರ್ಷಗಳಿಂದ ಕೆಎಸ್ಆರ್‌ಟಿಸಿ ಬಸ್ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು.
ತರೀಕೆರೆ-ಭದ್ರಾವತಿ ನಡುವೆ ಸಂಚರಿಸುವ ಸಾಮಾನ್ಯ ಸಾರಿಗೆ ಬಸ್ (ಲೋಕಲ್), ಕೆಎಸ್ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಜಯಶ್ರೀ ವೃತ್ತ(ಶ್ರೀ ಜಯಚಾಮರಾಜೇಂದ್ರ ಒಡೆಯರ್ ವೃತ್ತ), ಪ್ರೊ. ಬಿ. ಕೃಷ್ಣಪ್ಪ ವೃತ್ತ(ಮಿಲ್ಟ್ರಿಕ್ಯಾಂಪ್) ಬಳ್ಳಾಪುರ, ಉಜ್ಜನಿಪುರ ಮಾರ್ಗವಾಗಿ ಎಂಪಿಎಂ ಬಡಾವಣೆ ತಲುಪಲಿದೆ. ನಂತರ ಬಾರಂದೂರು, ಎಂಸಿ ಹಳ್ಳಿ ಮೂಲಕ ತರೀಕೆರೆ ತಲುಪಲಿದೆ. ಬೆಳಿಗ್ಗೆ 10 ಗಂಟೆಗೆ ಹಾಗೂ ಸಂಜೆ 5.30ಕ್ಕೆ ಎರಡು ಬಾರಿ ಬಸ್ ಸಂಚರಿಸಲಿದೆ.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಹಾಗೂ ನಿರ್ದೇಶಕರು, ಕೆಎಸ್ಆರ್‌ಟಿಸಿ ಸಿಬ್ಬಂದಿ ಮತ್ತು ಎಂಪಿಎಂ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು.