ಕನ್ನಡಪ್ರಭ ವಾರ್ತೆ ಮೈಸೂರು
ಸಾರಿಗೆ ಸಂಸ್ಥೆ ನೌಕರರ ಶ್ರಮದ ಫಲವಾಗಿ ಕರ್ನಾಟಕದ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.ನಗರದ ಜಗನ್ಮೋಹನ ಅರಮನೆಯಲ್ಲಿ ಕೆಎಸ್‌ಆರ್‌ಟಿಸಿ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ, ರಾಷ್ಟ್ರಕವಿ ಕುವೆಂಪು ಹಾಗೂ ಪದ್ಮಭೂಷಣ ಪುರಸ್ಕೃತ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿಯೇ ಕೆಎಸ್‌ಆರ್‌ಟಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ನೌಕರರ ಪರಿಶ್ರಮದಿಂದಾಗಿ ಸಂಸ್ಥೆಯು ನಂ.1 ಸ್ಥಾನದಲ್ಲಿದೆ. ಅಂತೆಯೇ ಸಚಿವರೂ ಕೂಡ ನೌಕರ ಸ್ನೇಹಿಯಾಗಿದ್ದಾರೆ ಎಂದರು.ಕೆಎಸ್‌ಆರ್‌ಟಿಸಿ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘವು ಎಲ್ಲಾ ಸಮುದಾಯದ ಜೊತೆ ಒಗ್ಗೂಡಿ ಸಮಾಜಮುಖಿ ಕಾರ್ಯ ಮಾಡಬೇಕು. ಈಗ ತ್ರಿರತ್ನ ಜಯಂತ್ಯೋತ್ಸವದ ಮೂಲಕ ಮಹನೀಯರ ವಿಚಾರಗಳನ್ನು ಜನರಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದರು.
ನಾಡಪ್ರಭು ಕೆಂಪೇಗೌಡರು ರಾಜ್ಯದಲ್ಲಿ ಎಲ್ಲಾ ಜಾತಿ, ಧರ್ಮದವರನ್ನು ಒಗ್ಗೂಡಿಸಿ ಬೆಂಗಳೂರು ನಿರ್ಮಿಸಿದರು. ಬಾಲಗಂಗಾಧರನಾಥ ಸ್ವಾಮೀಜಿ ಮಠದ ಸಂಸ್ಥೆಗಳನ್ನು ವಿಸ್ತರಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಕುವೆಂಪು ಸಾಹಿತ್ಯದ ಮೂಲಕ ವಿಶ್ವಮಾನವ ಸಂದೇಶ ಸಾರಿದರು. ಈ ಮೂವರು ಮಹನೀಯರ ವಿಚಾರಧಾರೆಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯ ಎಂದರು.ಶಾಸಕ ತನ್ವೀರ್ ಸೇಠ್ ಮಾತನಾಡಿ, ಮನುಷ್ಯನು ತಾನು ಮಾಡುವ ಕಾರ್ಯದಲ್ಲಿ ತೃಪ್ತಿಪಟ್ಟರೆ ಮನುಷ್ಯನು ಉತ್ತಮ ಜೀವನ ನಡೆಸಲು ಸಾಧ್ಯ. ನನ್ನ ತಂದೆಯವರು ಅಧಿಕಾರದಹವನ್ನು ಉಟ್ಟಾಹಾಕಿದವರಲ್ಲ ನಾನು ಎಂದು ಸಚಿವರ ಮಗ, ಶಾಸಕರ ಮಗ ಎಂದು ಗುರುತಿಸಿಕೊಂಡವನಲ್ಲ ಎಂದರು.
ನಿವೃತ್ತ ಪಾಂಶುಪಾಲ ಪ್ರೊ.ಎಂ. ಕೃಷೇಗೌಡ ಮಾತನಾಡಿ ಸಾರಿಗೆ ಸಂಸ್ಥೆಯು ಪ್ರತಿನಿತ್ಯ ಕೋಟ್ಯಾತರ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುತ್ತಿರುವುದಕ್ಕೆ ಸಾರಿಗೆ ನೌಕರರ ಶ್ರಮ ಹೆಚ್ಚು. ಚಾಲಕರು ಪ್ರತಿನಿತ್ಯ ನಿದ್ರೆಗೆಟ್ಟು ಕುಟುಂಬದವರನ್ನು ಬಿಟ್ಟು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಬಾಲಗಂಗಾಧರನಾಥ ಸ್ವಾಮೀಜಿ, ಕೆಂಪೆಗೌಡರು, ಕುವೆಂಪು ಅವರು ಒಕ್ಕಲಿಗ ಸಮಾಜಕ್ಕೆ ಸೇರಿದವರಾದರೂ ಚಿಂತನೆ ಮಾಡಿದ್ದು ಲೋಕಕಲ್ಯಾಣಕ್ಕಾಗಿ ಎಂದು ಹೇಳಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲನಾಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಕೆಎಸ್ಸಾರ್ಟಿಸಿ ಬೆಂಗಳೂರು ಕೇಂದ್ರ ಕಚೇರಿಯ ಮುಖ್ಯ ಯಾಂತ್ರಿಕ ಎಂಜಿನಿಯರ್‌ಕೆ.ಎಚ್. ಶ್ರೀನಿವಾಸ್, ಮೈಸೂರು ಗ್ರಾಮಾಂತರ ವಿಭಾಗದ ಅಧಿಕಾರಿ ಬಿ. ಶ್ರೀನಿವಾಸ್, ಮೈಸೂರು ವಿಭಾಗೀಯ ಅಧಿಕಾರಿ ಎಚ್.ಟಿ. ವಿರೇಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಂತ್ ಗೌಡ, ಭಾಗ್ಯಮಾದೇಶ್, ಕೆವಿ. ಮಲ್ಲೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ. ಮಂಜೇಗೌಡ, ಜಿಲ್ಲಾ ಒಕ್ಕಲಿಂಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್ ಮೊದಲಾದವರು ಇದ್ದರು.