ಕುಡಚಿ-ಬಾಗಲಕೋಟೆ ರೈಲು ಸೇವೆ ಶೀಘ್ರ ಪ್ರಾರಂಭ: ಪಿ.ಸಿ.ಗದ್ದಿಗೌಡರ

KannadaprabhaNewsNetwork | Updated : Apr 28 2024, 12:39 PM IST

ಸಾರಾಂಶ

ಜಮಖಂಡಿಯಲ್ಲಿ ವೈದ್ಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಮಾತನಾಡಿ, ಕುಡಚಿ-ಬಾಗಲಕೋಟೆ ರೈಲು ಸೇವೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಹೇಳಿದರು.

 ಜಮಖಂಡಿ :  ಕುಡಚಿ-ಬಾಗಲಕೋಟೆ ರೈಲು ಸೇವೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಭರವಸೆ ನೀಡಿದರು.

ಶುಕ್ರವಾರ ನಗರದ ವೈದ್ಯೆ ಡಾ.ವಿಜಯಲಕ್ಷ್ಮೀ ತುಂಗಳ ಅವರ ಮನೆಯಲ್ಲಿ ಏರ್ಪಡಿಸಿದ್ದ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುಡಚಿ-ಬಾಗಲಕೋಟೆ ರೈಲು ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಲೋಕಾಪುರದಲ್ಲಿ ರೈಲ್ವೆ ನಿಲ್ದಾಣ ಪೂರ್ಣಗೊಂಡಿದ್ದು, ಸಿಗ್ನಲ್ ಅಳವಡಿಕೆ ಕಾಮಗಾರಿ ಭರದಿಂದ ಸಾಗಿದೆ. ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗಲಿದೆ ಎಂದರು.

ಡಾ.ಡಿ.ಟಿ.ಕೊಕಟನೂರ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ ಅವರು, ಮೋದಿ ಅವರ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಕೊರೊನಾ ಸಂದರ್ಭದಲ್ಲಿ ದೇಶದಲ್ಲೇ ವ್ಯಾಕ್ಸಿನ್ ತಯಾರಿಸಿ ದೇಶದ ಜನರಿಗೆ ಉಚಿತವಾಗಿ ನೀಡಿದ್ದು ಅಲ್ಲದೇ, ಪಕ್ಕದ ರಾಷ್ಟ್ರಗಳಿಗೂ ವ್ಯಾಕ್ಸಿನ್ ಪೂರೈಸಿದ್ದು ನಮ್ಮ ಸರ್ಕಾರದ ಸಾಧನೆಯಾಗಿದೆ. ಚಂದ್ರಯಾನ-3, ಎಕ್ಸಪ್ರೆಸ್ ಹೈವೇಗಳ ನಿರ್ಮಾಣ, ಆರೋಗ್ಯವಿಮೆ, 23 ಎಐಐಎಂಎಸ್‌ಗಳ ಸ್ಥಾಪನೆ, ದೇಶದ ಆರ್ಥಿಕ ಸ್ಥಿತಿ ಸುಧಾರಣೆ, ಡಿಜಟಲೀಕರಣ, ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಮೋದಿ ಸರ್ಕಾರದಲ್ಲಿ ಕಾಣಬಹುದು ಎಂದು ಗದ್ದಿಗೌಡ ವಿವರಿಸಿದರು.

ಡಾ.ದಡ್ಡಿ ಮಾತನಾಡಿ, ವೈದ್ಯರಿಗೆ ಕಾರ್ಯನಿರ್ವಹಿಸಲು ಭಯಮುಕ್ತ ವಾತಾವರಣ ನಿರ್ಮಾಣ ಮಾಡಬೇಕು, ಕೇಂದ್ರ ಸರ್ಕಾರವೇ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.

ಡಾ.ರುದ್ರಸ್ವಾಮಿಮಠ ಡಾ.ಸೊನವಾಲ್ಕರ್ ಮಾತನಾಡಿ, ವೈದ್ಯರ ಭವನದ ಬೇಡಿಕೆ ಬಹುದಿನಗಳಿಂಲೂ ಪೂರ್ಣಗೊಂಡಿಲ್ಲ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು. ಪ್ರಾಸ್ಥಾವಿಕವಾಗಿ ಮಾತನಾಡಿದ ಡಾ.ವಿಜಯಲಕ್ಷ್ಮೀ ತುಂಗಳ ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮ ಜೀವದ ಹಂಗು ತೊರೆದು ಸಮಾಜ ಸೇವೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗದರ್ಶನ ದಂತೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ ಎಂದರು. ಸಂವಾದ ಕಾರ್ಯಕ್ರಮದಲ್ಲಿ ನಗರದ ನಾನಾ ಕ್ಷೇತ್ರದಲ್ಲಿನ ವೈದ್ಯರು ಪಾಲ್ಗೊಂಡಿದ್ದರು.

Share this article