ಮಾಗಡಿ: ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಕೆಂಪಸಾಗರ ಗ್ರಾಮದಲ್ಲಿ 50 ಲಕ್ಷ ರು. ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಗುದ್ದಲಿಪೂಜೆ ನಡೆಸಿದರು.
ಕೆಂಪಸಾಗರ ಕೆರೆ ಪ್ರವಾಸಿ ತಾಣ: ಕೆಂಪಸಾಗರ ಕೆರೆಯ ನೈಸರ್ಗಿಕ ಸೌಂದರ್ಯ ಹಾಗೂ ಬೋಟಿಂಗ್, ಸನ್‌ಸೆಟ್ ಪಾಯಿಂಟ್ ಅಭಿವೃದ್ಧಿಪಡಿಸುವ ಸಾಧ್ಯತೆಗಳ ಪ್ರಶ್ನೆಗೆ ಅಶೋಕ್ ಪ್ರತಿಕ್ರಿಯಿಸಿ, ಕೆಂಪಸಾಗರ ಗ್ರಾಮ ಕೆಂಪೇಗೌಡರ ಕಾಲದಿಂದಲೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ರಾಮನಗರದ ಕಣ್ವ ಜಲಾಶಯದ ಮಾದರಿಯಲ್ಲಿ ಬೋಟಿಂಗ್ ಹಾಗೂ ಪ್ರವಾಸಿ ತಾಣವಾಗಿ ರೂಪಿಸುವ ಉತ್ತಮ ಸಲಹೆ ಬಂದಿದೆ. ಇದು ಪ್ರಕೃತಿಯ ರಮಣೀಯ ಕೇಂದ್ರವಾಗಿದ್ದು, ಇದರಿಂದ ಗ್ರಾಮ ಪಂಚಾಯಿತಿಗೂ ಆದಾಯ ಬರಲಿದೆ. ಈ ವಿಷಯವನ್ನು ಶಾಸಕರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಅಶೋಕ್ ಹೇಳಿದರು.
ರೈತರ ಹಿತರಕ್ಷಣೆಗೆ ಬಮೂಲ್ ಬದ್ಧ:ಇದೇ ಸಂದರ್ಭದಲ್ಲಿ ಹಿಂಡಿ-ಬೂಸಾ ಬೆಲೆ ಏರಿಕೆ ಕುರಿತು ರೈತರ ಆತಂಕಕ್ಕೆ ಉತ್ತರಿಸಿದ ಅವರು, ಬಮೂಲ್ ವತಿಯಿಂದ ಸರಬರಾಜು ಮಾಡುವ ಪಶು ಆಹಾರದ ಬೆಲೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ. ಖಾಸಗಿ ಮಾರುಕಟ್ಟೆಯ ಬೆಲೆ ಏರಿಕೆ ನಮ್ಮ ನಿಯಂತ್ರಣದಲ್ಲಿಲ್ಲದಿದ್ದರೂ, ರೈತರ ಹಿತ ಕಾಯಲು ಬಮೂಲ್ ಸದಾ ಸಿದ್ಧವಿದೆ. ಅಲ್ಲದೆ, ಈ ಬಾರಿ ಬಮೂಲ್ ಟ್ರಸ್ಟ್ ವತಿಯಿಂದಲೇ ಜಾನುವಾರುಗಳ ವಿಮೆ ಮಾಡಿಸಲು ತೀರ್ಮಾನಿಸಿದೆ. ಇದರಿಂದ ಬರುವ ಉಳಿತಾಯದ ಹಣವನ್ನು ಪುನಃ ಮೂರು ಜಿಲ್ಲೆಗಳ ಹೈನುಗಾರರಿಗೆ ತಲುಪಿಸಲು ಆಡಳಿತ ಮಂಡಳಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಅಶೋಕ್ ಹೇಳಿದರು.
(ಫೋಟೋ ಕ್ಯಾಪ್ಞನ್)