ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಶನಿವಾರ ಕೂಡಿಗೆ ಹಾಲಿನ ಡೈರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
1955ರಲ್ಲಿ ರಾಜ್ಯದಲ್ಲಿಯೇ ಪ್ರಥಮ ಹಾಲಿನ ಡೈರಿಯಾಗಿ ಕೂಡಿಗೆ ಡೈರಿ ಸ್ಥಾಪನೆಗೊಂಡಿದೆ. ಇದನ್ನು ಮದರ್ ಡೈರಿ ಎಂದು ಕೂಡ ಕರೆಯಲಾಗುತ್ತದೆ. ಇದೀಗ ಕಚೇರಿಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, 34 ಲಕ್ಷ ರು. ವೆಚ್ಚದಲ್ಲಿ ತಾತ್ಕಾಲಿಕ ಕಚೇರಿ ನಿರ್ವಹಣೆಗೆ ಕಟ್ಟಡ ನಿರ್ಮಿಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ 20 ಕೋಟಿ ರು. ವೆಚ್ಚದಲ್ಲಿ ಕೂಡಿಗೆ ಡೈರಿಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಸುಮಾರು 39 ಹಾಲು ಉತ್ಪಾದಕರ ಸಂಘಗಳಿದ್ದು, ಪ್ರತಿ ದಿನ ಕೂಡ ಜಿಲ್ಲೆಯಿಂದ ಸುಮಾರು 30 ಸಾವಿರ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದೆ. ದಿನವೊಂದಕ್ಕೆ ಸುಮಾರು 55 ಸಾವಿರ ಲೀಟರ್ ಹಾಲು ಕೂಡಿಗೆ ಡೈರಿಯಿಂದ ಮಾರಾಟವಾಗುತ್ತದೆ. ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಅರಕಲುಗೂಡು, ರಾಮನಾಥಪುರದ ವಿವಿಧ ಹಾಲು ಉತ್ಪಾದರಕ ಸಂಘದಿಂದ 25 ಸಾವಿರ ಲೀಟರ್ ಹಾಲನ್ನು ಟ್ಯಾಂಕರ್ ಮೂಲಕ ತರಲಾಗುತ್ತಿದ್ದು, ಸಂಸ್ಕರಣೆ ಮಾಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾಫಿ ಕೃಷಿ ಪ್ರಧಾನವಾಗಿದೆ. ಇದರಿಂದ ಹೈನುಗಾರಿಕೆ ಮಾಡುವವರ ಸಂಖ್ಯೆ ತೀವ್ರ ಕಡಿಮೆಯಿದೆ. ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಮಾತ್ರ ಹೆಚ್ಚು ಹಾಲು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹಾಲಿಗೆ ಹೆಚ್ಚಿನ ಬೇಡಿಕೆಯಿದೆ. ಆದ್ದರಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರಿಗೆ ಪ್ರೋತ್ಸಾಹ ನೀಡಲಾಗುವುದು. ಕೃಷಿಕರು ಡೈರಿಗೆ ಹಾಲನ್ನು ನೀಡುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.
ಒಂದು ಲೀಟರ್ ಹಾಲಿಗೆ ರು.30.50 ಹೈನುಗಾರರಿಗೆ ನೀಡಲಾಗುತ್ತಿದೆ. ಹಾಲು ದರ ಹೆಚ್ಚಳ ಮಾಡುವ ಬಗ್ಗೆ ಕೆ.ಎಂ.ಎಫ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಸಂಸ್ಕರಣೆ ಹೆಚ್ಚಳ: ಕೂಡಿಗೆ ಹಾಲಿನ ಡೈರಿಯಲ್ಲಿ ಪ್ರಸ್ತುತ 50 ಸಾವಿರ ಲೀಟರ್ ಹಾಲನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಕರಣಾ ಘಟಕ ಮೇಲ್ದರ್ಜೆಗೇರಿಸಿ ಸುಮಾರು 80 ಸಾವಿರದಿಂದ ಒಂದು ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆದಷ್ಟು ಶೀಘ್ರ ಈ ಕೆಲಸ ಆಗಲಿದೆ ಎಂದು ತಿಳಿಸಿದರು.
ಸಂವಾದದ ಬಳಿಕ ಕೂಡಿಗೆ ಹಾಲಿನ ಡೈರಿಯಲ್ಲಿ ಹಾಲು ಸಂಸ್ಕರಣೆ ಮಾಡುವ ಬಗ್ಗೆ ನಿರ್ದೇಶಕರು ಪತ್ರಕರ್ತರಿಗೆ ಮಾಹಿತಿ ನೀಡಿದರು.
ಹಾಲು ಅಮೃತಕ್ಕೆ ಸಮನಾದದ್ದು, ಆದ್ದರಿಂದ ಡೈರಿಗೆ ಹಾಲು ನೀಡುವ ಹೈನುಗಾರರು ಹಾಲಿನ ಗುಣಮಟ್ಟ ಕಾಪಾಡಬೇಕು. ಜಿಲ್ಲೆಯಲ್ಲಿ ಹೈನುಗಾರಿಕೆ ಮಾಡುವವರ ಸಂಖ್ಯೆ ಹೆಚ್ಚಳವಾಗಬೇಕು. ಇದಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದು ಹಾಸನ ಹಾಲು ಒಕ್ಕೂಟ ಕೊಡಗು ಘಟಕ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಹೇಳಿದರು.