ಕೂಡ್ಲಿಗಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ಸಕಲ ಸೌಕರ್ಯದೊಂದಿಗೆ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಿದ್ದೇನೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ ತಿಳಿಸಿದರು.
ಅವರು ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಸಹಯೋಗದಲ್ಲಿ ತಾಲೂಕಿನ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಮವಾರ ಆಯೋಜಿಸಿದ್ದ ಅಸಾಂಕ್ರಾಮಿಕ ರೋಗ ಪತ್ತೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಕ್ಷೇತ್ರದ ಪ್ರತಿಯೊಬ್ಬರ ಆರೋಗ್ಯದ ಕಾಳಜಿ ಹೊಂದಿದ್ದು, ಸುಸಜ್ಜಿತ ಹಾಗೂ ಸಕಲ ಸೌಕರ್ಯಗಳ ಆಸ್ಪತ್ರೆಗಳು, ಉಪಕೇಂದ್ರಗಳನ್ನಾಗಿ ಮಾಡಲಾಗುವುದು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಪರವಾಗಿ ಧ್ವನಿ ಎತ್ತಲಾಗುವುದು. ಅಲ್ಲದೆ, ಖಾಸಗಿ ಕಟ್ಟಡಗಳಲ್ಲಿ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುವುದು. ಈವರೆಗೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ₹೫೫೦ ಕೋಟಿಗೂ ಹೆಚ್ಚಿನ ಅನುದಾನ ತಂದಿದ್ದು, ಮುಂದಿನ ದಿನಗಳಲ್ಲಿ ಮಾದರಿ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಮತ್ತಷ್ಟು ಅನುದಾನ ತರಲಾಗುವುದು ಎಂದು ತಿಳಿಸಿದರು.
ವಿಜಯನಗರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಯೋಜನೆಗಳಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ತಳಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಾರೆ. ಇಂಥವರ ಆರೋಗ್ಯ ಕಾಳಜಿ ಹೊಂದಿರುವ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಆರೋಗ್ಯ ಇಲಾಖೆಯ ಜತೆ ಕಿದ್ವಾಯಿ ಆಸ್ಪತ್ರೆಯ ವೈದ್ಯರಿಂದ ಅಸಾಂಕ್ರಾಮಿಕ ರೋಗಗಳ ಪತ್ತೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ. ಪ್ರದೀಪಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ವಿ.ತಮ್ಮಣ್ಣ, ಮುಖಂಡರಾದ ಹಿರೇಕುಂಬಳಗುಂಟೆ ಟಿ.ಉಮೇಶ್, ವಕೀಲ ಡಿ.ಎಚ್.ದುರುಗೇಶ್, ಮಾದಿಹಳ್ಳಿ ನಜೀರ್, ಕುಮಾರ್, ಬಣವಿಕಲ್ಲು ಎರಿಸ್ವಾಮಿ, ಎಂ.ಬಿ.ಅಯ್ಯನಹಳ್ಳಿ ಅಜ್ಜನಗೌಡ, ಜಯರಾಮ ನಾಯಕ ಸೇರಿ ಇತರರಿದ್ದರು. ಇದೇ ಸಂದರ್ಭದಲ್ಲಿ ಕೂಡ್ಲಿಗಿ ಕ್ಷೇತ್ರದ ಆಲೂರು, ಹುಡೇಂ, ಬೆಳ್ಳಿಗಟ್ಟ, ತೂಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 4 ಹೊಸ ಆ್ಯಂಬುಲೆನ್ಸ್‌ಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು.