21ರಂದು ‘ಕುದ್ರೋಳಿ ತೀರ್ಥಾಟನೆ’: 10 ಸಾವಿರಕ್ಕೂ ಅಧಿಕ ಮಂದಿ ಭಾಗಿ

KannadaprabhaNewsNetwork |  
Published : Feb 15, 2026, 04:15 AM IST
ತೀರ್ಥಾಟನೆಯ ಪೋಸ್ಟರ್‌ ಬಿಡುಗಡೆಗೊಳಿಸುತ್ತಿರುವುದು. | Kannada Prabha

ಸಾರಾಂಶ

ಬಿಲ್ಲವ ಸಮುದಾಯದವರಿಗೆ ದೇವಾಲಯಗಳಿಗೆ ಪ್ರವೇಶವಿಲ್ಲದ ಕಾಲಘಟ್ಟದಲ್ಲಿ ನಾರಾಯಣ ಗುರುಗಳು 1912ರ ಫೆ.21ರಂದು ಶಿವಲಿಂಗ ಪ್ರತಿಷ್ಠಾಪನೆಯ ಮೂಲಕ ಕುದ್ರೋಳಿ ಕ್ಷೇತ್ರದಲ್ಲಿ ಕ್ರಾಂತಿಗೆ ನಾಂದಿ ಹಾಡಿದ್ದರು. ಇದರ ಸ್ಮರಣಾರ್ಥ ಫೆ. 21ರಂದು ಕ್ಷೇತ್ರದ ವತಿಯಿಂದ ‘ಕುದ್ರೋಳಿ ತೀರ್ಥಾಟನೆ’ ನಡಿಗೆ

ಮಂಗಳೂರು: ಬಿಲ್ಲವ ಸಮುದಾಯದವರಿಗೆ ದೇವಾಲಯಗಳಿಗೆ ಪ್ರವೇಶವಿಲ್ಲದ ಕಾಲಘಟ್ಟದಲ್ಲಿ ನಾರಾಯಣ ಗುರುಗಳು 1912ರ ಫೆ.21ರಂದು ಶಿವಲಿಂಗ ಪ್ರತಿಷ್ಠಾಪನೆಯ ಮೂಲಕ ಕುದ್ರೋಳಿ ಕ್ಷೇತ್ರದಲ್ಲಿ ಕ್ರಾಂತಿಗೆ ನಾಂದಿ ಹಾಡಿದ್ದರು. ಇದರ ಸ್ಮರಣಾರ್ಥ ಫೆ. 21ರಂದು ಕ್ಷೇತ್ರದ ವತಿಯಿಂದ ‘ಕುದ್ರೋಳಿ ತೀರ್ಥಾಟನೆ’ ನಡಿಗೆ ಆಯೋಜಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯರಾಜ್‌ ಸೋಮಸುಂದರಂ, ಅಂದು ಬೆಳಗ್ಗೆ 9 ಗಂಟೆಗೆ ಸೆಂಟ್ರಲ್‌ ರೈಲ್ವೆ ನಿಲ್ದಾಣದಿಂದ ಆರಂಭಗೊಳ್ಳುವ ತೀರ್ಥಾಟನೆಯು ನಗರದಲ್ಲಿ ಸುಮಾರು 7 ಕಿ.ಮೀ.ಗಳ ನಡಿಗೆಯ ಮೂಲಕ 11.30ರ ವೇಳೆಗೆ ಕುದ್ರೋಳಿ ಕ್ಷೇತ್ರವನ್ನು ತಲುಪಲಿದೆ ಎಂದು ಹೇಳಿದರು.10 ಸಾವಿರಕ್ಕೂ ಅಧಿಕ ಮಂದಿ ಭಾಗಿ: ಕೋಶಾಧಿಕಾರಿ ಪದ್ಮರಾಜ್‌ ಆರ್‌. ಪೂಜಾರಿ ಮಾತನಾಡಿ, ಈಗ ಪ್ರಥಮ ಬಾರಿ ನಡೆಯುತ್ತಿರುವ ತೀರ್ಥಾಟನೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಯಲಿದೆ. ರೈಲ್ವೇ ನಿಲ್ದಾಣದಲ್ಲಿ ಸುಮಾರು 500 ಮಂದಿಯಷ್ಟು ನಾರಾಯಣ ಗುರು ಅನುಯಾಯಿಗಳು ಸೇರಿಕೊಂಡು ಅಲ್ಲಿಂದ ತೀರ್ಥಾಟನೆ ನಡಿಗೆ ಆರಂಭಿಸಿ ನೆಹರೂ ಮೈದಾನಕ್ಕೆ ಆಗಮಿಸಲಾಗುವುದು. ಅಲ್ಲಿ ಇತರ ಕಡೆಗಳಿಂದ ಬರುವ ಗುರುಗಳ ಅನುಯಾಯಿಗಳೊಂದಿಗೆ ಕ್ಲಾಕ್‌ಟವರ್‌, ನವಭಾರತ ಸರ್ಕಲ್‌, ಪಿವಿಎಸ್‌, ಲೇಡಿಹಿಲ್‌ ಮೂಲಕ ಕ್ಷೇತ್ರಕ್ಕೆ ತಲುಪಲಿದೆ ಎಂದು ತಿಳಿಸಿದರು.

ಬೆಳಗ್ಗೆ ಕ್ಷೇತ್ರದಲ್ಲಿ ಗುರು ಪ್ರಾರ್ಥನೆ ಹಾಗೂ ಬಿಲ್ವಾರ್ಚನೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ತೀರ್ಥಾಟನೆಯು ಕ್ಷೇತ್ರ ತಲುಪಿದ ಬಳಿಕ ಬಿಲ್ವ ಪತ್ರಾರ್ಚನೆ ಹಾಗೂ ಸ್ವಾಮೀಜಿಗಳ ಆಶೀರ್ವಚನ, ಪ್ರಸಾದ ವಿತರಣೆಯೊಂದಿಗೆ ಸಂಪನ್ನವಾಗಲಿದೆ. ಈ ಕಾರ್ಯದಲ್ಲಿ 500ಕ್ಕೂ ಅಧಿಕ ಅರ್ಚಕರು (ಶಾಂತಿಗಳು) ಭಾಗವಹಿಸಲಿದ್ದಾರೆ ಎಂದರು.

ರಾಜಕೀಯ ರಹಿತ ಯಾತ್ರೆ: ತೀರ್ಥಾಟನೆ ನಡಿಗೆಯಲ್ಲಿ ಗುರುಗಳ ಜ್ಞಾನದ ಸಂಕೇತವಾದ ಹಳದಿ ವಸ್ತ್ರಧಾರಣೆಯೊಂದಿಗೆ ‘ಓಂ ಶ್ರೀ ನಾರಾಯಣ ಪರಮ ಗುರುವೇ ನಮ:’ ಎಂಬ ಮಂತ್ರೋಚ್ಛಾರಣೆಯೊಂದಿಗೆ ನಡೆಯಲಿರುವ ಈ ರಾಜಕೀಯ ರಹಿತ ಯಾತ್ರೆಯು ಕೇವಲ ಪಾದಯಾತ್ರೆ ಮಾತ್ರ ಆಗಿರದೆ ಆತ್ಮಶುದ್ಧಿಯ ಪಥ, ಸಮಾಜ ಜಾಗೃತಿಯ ಸಂಕಲ್ಪವಾಗಿರಲಿದೆ. ಪ್ರಥಮ ಬಾರಿಗೆ ನಡೆಯುತ್ತಿರುವ ಈ ತೀರ್ಥಾಟನೆಯನ್ನು ಮುಂದಿನ ವರ್ಷದಿಂದ ಜಾತ್ರೋತ್ಸವದ ಸಂದರ್ಭ ಜೋಡಣೆ ಮಾಡಿಕೊಂಡು ದೊಡ್ಡ ಮಟ್ಟದಲ್ಲಿ ನಡೆಸಲಿದ್ದೇವೆ ಎಂದು ಪದ್ಮರಾಜ್‌ ಹೇಳಿದರು.ಕ್ಷೇತ್ರದ ಪ್ರಮುಖರಾದ ಉರ್ಮಿಳಾ ರಮೇಶ್‌ ಕುಮಾರ್‌, ದೇವೇಂದ್ರ ಪೂಜಾರಿ, ಕೃತಿನ್‌ ಧೀರಜ್‌ ಅಮೀನ್‌, ಕಿಶೋರ್‌ ಕುಮಾರ್‌, ಡಾ.ಬಿ.ಜಿ. ಸುವರ್ಣ, ಶೈಲೇಂದ್ರ ಸುವರ್ಣ, ಚಂದನ್‌ ದಾಸ್‌, ಗೌರವಿ ರಾಜಶೇಖರ್‌, ಜಯಾನಂದ್‌ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಹಾಳು ಮಾಡುತ್ತಿರುವ ಪ್ರೇಮಿಗಳ ದಿನ
ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಗ್ರಾಮೀಣ ಕ್ಷೇತ್ರ