ಕನ್ನಡಪ್ರಭ ವಾರ್ತೆ ಕುದೂರು
ಬಿಡಿಸಿಸಿ ಬ್ಯಾಂಕ್ ನ ಕುದೂರು ಶಾಖೆಯಲ್ಲಿ ನಕಲಿ ಚಿನ್ನದ ವ್ಯವಹಾರ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿದೆ. ಈ ಕುರಿತು ಸಿಬಿಐ ತನಿಖೆಯಾಗಬೇಕಿದೆ. ರೈತರ ಪರವಾಗಿ ನಡೆಯುತ್ತಿರುವ ಬ್ಯಾಂಕಿನಲ್ಲಿ ಇಂತಹ ಅವ್ಯವಹಾರ ಅಕ್ಷಮ್ಯ ಅಪರಾಧವಾಗಿದೆ ಎಂದು ಗ್ರಾಮಪಂಚಾಯ್ತಿ ಮಾಜಿ ಸದಸ್ಯ ಹೊನ್ನರಾಜು ಆಕ್ರೋಶ ವ್ಯಕ್ತಪಡಿಸಿದರು.ಕುದೂರು ಗ್ರಾಮದ ನವಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಚಿನ್ನವನ್ನು ಪರೀಕ್ಷೆ ಮಾಡಿದಾಗ ಅದು ಅಸಲಿಯದ್ದಾಗಿತ್ತು. ಬ್ಯಾಂಕಿನ ಸ್ಟ್ರಾಂಗ್ ರೂಮಿನಲ್ಲಿ ಅದು ಹೇಗೆ ನಕಲಿಯಾಯಿತು ಎಂದು ಚಿನ್ನಪರೀಕ್ಷಕರು ಕೇಳಿದ್ದಾರಂತೆ. ಹಾಗಿದ್ದರೆ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲರನ್ನು ಹೊರಗೆ ಎಳೆಯಬೇಕು. ಜನಸಾಮಾನ್ಯರಿಗೆ ಬ್ಯಾಂಕಿನ ಬಗ್ಗೆ ಇರುವ ನಂಬಿಕೆಯನ್ನು ಉಳಿಸುವ ಕೆಲಸವಾಗಬೇಕು ಎಂದು ತಿಳಿಸಿದರು
ರೈತ ಮುಖಂಡ ರಾಪಯ್ಪಗೌಡ ಮಾತನಾಡಿ. ನಿರ್ದೇಶಕ ಆಶೋಕ್ ರವರು ಬ್ಯಾಂಕಿನ ಜವಾಬ್ಧಾರಿಯನ್ನು ಹೊತ್ತವರಾಗಿದ್ದಾರೆ. ನಾರಸಂದ್ರದಲ್ಲೂ ಕೂಡಾ ಬೇರೆಯದೇ ರೀತಿಯ ಅವ್ಯವಹಾರ ಆಗಿದೆ. ಹಾಗಿದ್ದರೆ ಅವರು ಇದ್ದ ಕಡೆಗೆ ಇಂತಹ ಕೆಲಸಗಳು ಏಕಾಗುತ್ತವೆ. ಬ್ಯಾಂಕಿನ ತನಿಖೆ ಶಿಸ್ತುಬದ್ದವಾಗಿ ನಡೆಯಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ. ಎಂತಹ ದೊಡ್ಡ ವ್ಯಕ್ತಿಯೇ ಆದರೂ ಕಾನೂನಿನ ಇಕ್ಕಳದಿಂದ ತಪ್ಪಿಸಿಕೊಳ್ಳುವಂತಾಗಬಾರದು ಎಂದು ಆಗ್ರಹಿಸಿದರು.ಜೆಡಿಎಸ್ ಮುಸ್ಲಿಂ ಮುಖಂಡ ಬಿಸ್ಕೂರು ಸುಹೇಲ್ ಮಾತನಾಡಿ, ನಕಲಿ ಚಿನ್ನದ ಹಗರಣ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಲ್ಲ. ಹಾಗಿದ್ದರೆ ಹೀಗೆ ಹಗರಣವಾದ ಹಣದಿಂದ ಮುಂಬರುವ ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಹಣ ಹೊಂದಿಸಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಉಂಟಾಗುತ್ತದೆ. ಇದಕ್ಕೆ ಸಹಕಾರ ಸಚಿವರೂ ಕೂಡಾ ಮೌನ ವಹಿಸಿದ್ದಾರೆ. ಇಂತಹ ಹಗರಣಗಳನ್ನು ಸಿಬಿಐಗೆ ವಹಿಸಬೇಕಿದೆ ಎಂದು ಒತ್ತಾಯಿಸಿದರು.
ಈಗಾಗಲೇ ನಾಲ್ಕು ಕೋಟಿ ಎಪ್ಪತ್ತು ಲಕ್ಷ ಹಣದಷ್ಟು ಕಟ್ಟಲಾಗಿದೆ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲಸವರು ಒಂಬತ್ತು ಕೋಟಿ ಎನ್ನುತ್ತಿದ್ದಾರೆ. ಈಗಾಗಲೇ ಬ್ಯಾಂಕಿನಲ್ಲಿ ಇಟ್ಟಿರುವ ಅಸಲಿ ಚಿನ್ನದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆಲ್ಲಾ ಫೆಬ್ರವರಿ ಅಂತ್ಯದ ಒಳಗೆ ಉತ್ತರ ನೀಡದೇ ಹೋದರೆ ಎನ್ ಡಿಎ ಮೈತ್ರಿಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.ಗ್ರಾಮ ಪಂಚಾಯ್ತಿ ಸದಸ್ಯ ಅನಂತನಾರಾಯಣ್, ರಮೇಶ್, ನಾಗರಾಜ್, ಬಾಲಕೃಷ್ಣ ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ನರಸಿಂಹಮೂರ್ತಿ, ಜೆಡಿಎಸ್ ಮುಖಂಡ ಬಿ.ಆರ್.ಮಂಜುನಾಥ್, ಮುನಿಯಪ್ಪ, ಮತ್ತಿತರರು ಹಾಜರಿದ್ದರು.