ರಾಘು ಕಾಕರಮಠ
ಅಂಕೋಲಾ: ಇಲ್ಲಿನ ಬೇಲೆಕೇರಿ ಕಡಲ ಕಿನಾರೆಯ ರಮಣೀಯ ಸೊಬಗಿಗೆ, ಗರಿಯಾಗಿ ನಿಂತು ಗಮನ ಸೆಳೆಯುವ ಕುಕ್ಕಡ ನಡುಗಡ್ಡೆಯಲ್ಲಿ ಗುರುವಾರ ಶ್ರೀ ಕುಕ್ಕಡೇಶ್ವರ ಮತ್ತು ಶ್ರೀ ನೇತ್ರಾಣಿ ದೇವಿ ದೇವಸ್ಥಾನದ ಜಾತ್ರೆ ಸಂಭ್ರಮದಿಂದ ಸಂಪನ್ನಗೊಂಡಿತು.ಹಾಲ್ನೊರೆಯ ಕಡಲು, ಪ್ರಕೃತಿಯ ರಸಭಾವದೊಂದಿಗೆ, ಸಮುದ್ರ ಹಕ್ಕಿಗಳ ಕಿವಿಗಂಪು ತುಂಬಿಕೊಳ್ಳುತ್ತ, ದೋಣಿಯೇರಿ ಸಾಂಪ್ರದಾಯಿಕ ಬಾಳೆಹಣ್ಣಿನ ಕೊನೆಯ ಹರಕೆ ಒಪ್ಪಿಸಿ ಧನ್ಯತೆ ಮೆರೆಯುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಪ್ರತಿ ವರ್ಷ ಮೀನುಗಾರರ ಕುಟುಂಬದವರು ಮತ್ತು ಇತರ ವರ್ಗದವರು ನೂರಾರು ಸಂಖ್ಯೆಯಲ್ಲಿ ತಮ್ಮ ಬೋಟ್‌ಗಳಲ್ಲಿ ಶ್ರೀ ದೇವರ ದರ್ಶನಕ್ಕೆ ಸಾಗುತ್ತಿದ್ದರು. ಆದರೆ ಕಳೆದ 4 ವರ್ಷದಿಂದ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಜಾತ್ರೆಗೆ ತೆರಳಲು ನಿಗದಿ ಪಡಿಸಿದ ಬೇಲೆಕೇರಿ ಮತ್ತು ಮುದಗಾದ ಸ್ಥಳದಿಂದ ಮತ್ತು ಪರವಾನಗಿ ನೀಡಿದ ಬೋಟ್‌ನಲ್ಲಿಯೆ ಲೈಫ್ ಜಾಕೆಟ್ ಧರಿಸಿ ಭಕ್ತರು ಸಾಗಬೇಕು ಎಂಬ ನಿಯಮದಿಂದಾಗಿ ಅನೇಕ ಭಕ್ತರು ದೂರದಿಂದಲೆ ಶ್ರೀ ದೇವರಿಗೆ ಕೈ ಮುಗಿದು ಜಾತ್ರೆಯಿಂದ ದೂರ ಉಳಿದದ್ದು ಕಂಡು ಬಂತು.ಕಟ್ಟುನಿಟ್ಟಿನ ಪರಿಶೀಲನೆ: ಅಂಕೋಲಾದ ಬೇಲೆಕೇರಿ ಮತ್ತು ಕಾರವಾರದ ಮುದಗಾ ಬಂದರು ಪ್ರದೇಶದ ಎರಡು ಭಾಗದಿಂದ ಪರ್ಶಿಯನ್ ಬೋಟ್ ಮೂಲಕ ಬರುವ ಭಕ್ತರ ಸಂಪೂರ್ಣ ವಿವರ ದಾಖಲಿಸಿ, ಲೈಫ್ ಜಾಕೆಟ್ ಧರಿಸಿದ ನಂತರವೆ ಬೋಟ್ ಹತ್ತಿಸಿ, ದರ್ಶನ ಪಡೆದ ಆನಂತರ ಮತ್ತೆ ನೋಂದಣಿ ಮಾಡಿಸುವ ಕಟ್ಟುನಿಟ್ಟಿನ ಪ್ರಕ್ರಿಯೆಯನ್ನು ಪೊಲೀಸ್ ಇಲಾಖೆ ನಡೆಸಿತು.
ಭಕ್ತರನ್ನು ತುಂಬಿಕೊಂಡು ತೆರಳುವ ಪರ್ಶಿಯನ್ ಬೋಟ್ ಹಿಂದೆ ಮತ್ತೆ ಕರಾವಳಿ ಕಾವಲು ಪಡೆಯ ಎರಡು ಗಸ್ತು ಬೋಟ್‌ಗಳಲ್ಲಿ ಸಿಬ್ಬಂದಿ ತೆರಳಿ ಭದ್ರತೆ ಒದಗಿಸಿದರು. ತಾಲೂಕಾಡಳಿತ, ಪೊಲೀಸ್ ಇಲಾಖೆ, ಬಂದರು ಇಲಾಖೆ, ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸಹಕರಿಸಿದರು.ಸಿಪಿಐ ಶ್ರೀಕಾಂತ ತೋಟಗಿ, ಪಿಎಸ್‌ಐ ಸುನೀಲ್ ಹುಲ್ಲೊಳ್ಳಿ, ಕರಾವಳಿ ಕಾವಲು ಪಡೆಯ ಪೊಲೀಸ್ ಉಪ ನಿರೀಕ್ಷಕಿ ಪ್ರಿಯಾಂಕಾ ಸ್ಥಳದಲ್ಲಿದ್ದರು.
ನಾವು ಪ್ರತಿ ವರ್ಷ ಕುಟುಂಬ ಸಮೇತ ಶ್ರೀ ದೇವರ ದರ್ಶನಕ್ಕೆ ತೆರಳುತ್ತಿದ್ದೇವು. ಆದರೆ ಈ ವರ್ಷ ಕುಟುಂಬದವರೊಂದಿಗೆ ದರ್ಶಕ್ಕೆ ತೆರಳದೆ ಶ್ರೀ ದೇವರ ದರ್ಶನ ಪಡೆದಿದ್ದೇವೆ. ಕುರ್ಮಗಡದ ದುರಂತದ ಕಾವು ಇನ್ನು ಮಾಸಿಲ್ಲ ಎಂದು ಮೀನುಗಾರ ಮುಖಂಡ ಸಚಿನ್ ಅಸ್ನೋಟಿಕರ್ ಹೇಳುತ್ತಾರೆ. ಭಕ್ತರು ಸೂಚನೆ ಪಾಲಿಸಿ ಪೊಲೀಸ್ ಇಲಾಖೆಗೆ ಕೈ ಜೋಡಿಸಿದ್ದಾರೆ. ಮೀನುಗಾರರ ಸಹಕಾರಕ್ಕೆ ವಿಶೇಷವಾಗಿ ಅಭಿನಂದಿಸುತ್ತೇವೆ ಎಂದು ಅಂಕೋಲಾ ಸಿಪಿಐ ಶ್ರೀಕಾಂತ ತೋಟಗಿ ಹೇಳಿದರು.