ಸಂತ ಸೇವಾಲಾಲ್ ತತ್ವಾದರ್ಶ ಪಾಲಿಸೋಣ

KannadaprabhaNewsNetwork | Published : Feb 16, 2024 1:46 AM

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಎಂ. ಕಾರ್ತೀಕ್‌ ಸಂತ ಶ್ರೀ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಸಂತ ಶ್ರೀ ಸೇವಾಲಾಲ್ ಅವರ ತತ್ವಾದರ್ಶ, ಮಾರ್ಗದರ್ಶನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಿಲು ನಾವೆಲ್ಲರೂ ಶ್ರಮಿಸೋಣ ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತೀಕ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸಂತ ಶ್ರೀ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಜ್ಞಾನಿಗಳು, ದಾರ್ಶನಿಕರು, ಸಂತರು, ಮಹನೀಯರ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದ್ದು, ಸಂತ ಶ್ರೀ ಸೇವಾಲಾಲ್ ಅವರ ಆದರ್ಶಗಳು ನಮ್ಮ ಮುಂದಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಅಧ್ಯಕ್ಷ ಆರ್. ನಾಗೇಂದ್ರನಾಯ್ಕ ಮಾತನಾಡಿ, ದಾರ್ಶನಿಕರು, ಪವಾಡ ಪುರುಷರಾಗಿರುವ ಸಂತ ಶ್ರೀ ಸೇವಾಲಾಲ್ ಮಹಾರಾಜರು ಹಸಿದವರಿಗೆ ಊಟ ಕೊಡಿ, ಬಾಯಾರಿದವರಿಗೆ ನೀರು ಕೊಡಿ, ಜೀವನದಲ್ಲಿ ಕ್ರೋಧ ಎಂಬುದನ್ನು ಸುಟ್ಟು ಹಾಕಿ, ಇದೇ ಧರ್ಮ, ಇದೇ ಸತ್ಯದ ಮಾರ್ಗ ಎಂಬ ಸಂದೇಶ ನೀಡಿದ್ದಾರೆ ಎಂದರು.

ಬಂಜಾರ ಸಮಾಜ ನಗರ ಹಾಗೂ ಪಟ್ಟಣ ಪ್ರದೇಶಗಳಿಂದ ಬಹಳಷ್ಟು ದೂರದಲ್ಲಿ ಪ್ರತ್ಯೇಕವಾಗಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ವಿಶಿಷ್ಟ ಸಂಪ್ರದಾಯ, ಉಡುಗೆ - ತೊಡುಗೆಯೊಂದಿಗೆ ವಿಶೇಷ ಆಚರಣೆಗಳನ್ನು ಪಾಲಿಸಿಕೊಂಡು ಬಂದಿದೆ. ಯಾವುದೇ ಸಮುದಾಯ ಮುಖ್ಯವಾಹಿನಿಗೆ ಬರಲು ಶಿಕ್ಷಣ ಬಹಳ ಮುಖ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುವ, ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಕೊಡುವ ಕೆಲಸ ಮಾಡಬೇಕಿದೆ. ಲಂಬಾಣಿ ತಾಂಡಾಗಳಿಗೆ ಸರ್ಕಾರದ ವತಿಯಿಂದ ಮೂಲಭೂತ ಸೌಕರ್ಯ ಕಲ್ಪಿಸುವ ವ್ಯವಸ್ಥೆಯಾಗಬೇಕಿದೆ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕಿದೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಕಾರ್ಯದರ್ಶಿ ಕೆ.ಮಂಜುನಾಥ ನಾಯ್ಕ್ ಮಾತನಾಡಿ, ದಾರ್ಶನಿಕರು, ಸಂತರು, ಶ್ರೇಷ್ಠರೂ ಎನಿಸಿಕೊಂಡಿರುವ ಸಂತ ಶ್ರೀ ಸೇವಾಲಾಲ್ ಅವರ ಜಯಂತಿ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ. ಎಲ್ಲ ಜನಾಂಗದಲ್ಲಿಯೂ ಶ್ರೇಷ್ಠ ದಾರ್ಶನಿಕರು ಹುಟ್ಟಿ ತಮ್ಮ ಜ್ಞಾನವನ್ನು ಸರ್ವ ಜನಾಂಗಕ್ಕೆ ಹಾಗೂ ಸಮಾಜಕ್ಕೆ ಧಾರೆ ಎರೆದಿದ್ದಾರೆ. ಸಂತ ಶ್ರೀ ಸೇವಾಲಾಲ್ ಅವರನ್ನು ಮಹಾಜ್ಞಾನಿ ಹಾಗೂ ತ್ರಿಕಾಲ ಜ್ಞಾನಿ ಎಂತಲೂ ಕರೆಯುತ್ತೇವೆ. ಲಂಬಾಣಿ ಸಮುದಾಯದವರು ತಮ್ಮ ಭಾಷೆಯಲ್ಲಿ ಬಂಜಾರ ಜನಾಂಗ ಹಾಗೂ ಇತರೆ ಜನಾಂಗವೂ ಒಳಗೊಂಡಂತೆ ಇಡೀ ಮಾನವ ಜನಾಂಗಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾರೆ ಎಂದು ಹೇಳಿದರು.

ತಹಸೀಲ್ದಾರ್ ಡಾ.ನಾಗವೇಣಿ ಮಾತನಾಡಿ, ಚಿತ್ರದುರ್ಗ ತಾಲೂಕಿನಲ್ಲಿ ಮೊದಲ ಹಂತದಲ್ಲಿ ಈಗಾಗಲೇ 67 ಕಂದಾಯ ಗ್ರಾಮಗಳನ್ನಾಗಿ ಗುರುತಿಸಲಾಗಿದೆ. ಎರಡನೇ ಹಂತದಲ್ಲಿ ಹೊಸದಾಗಿ 13 ಕಂದಾಯ ಗ್ರಾಮಗಳನ್ನಾಗಿ ಗುರುತಿಸಿ, ಮ್ಯಾಪಿಂಗ್ ಮಾಡಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಕನ್ನಡ ಉಪನ್ಯಾಸಕ ಟಿ.ಎಲ್. ನಾರಾಯಣ್ ಅವರು ಸಂತ ಶ್ರೀ ಸೇವಾಲಾಲ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ, ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಗೌರವಾಧ್ಯಕ್ಷ ಜಿ. ರಾಜನಾಯ್ಕ, ಮುಖಂಡರಾದ ರಮೇಶ್ ನಾಯ್ಕ್, ಪ್ರಕಾಶ್ ನಾಯ್ಕ್, ಜಗದೀಶ್ ನಾಯ್ಕ್, ವಸಂತ ನಾಯ್ಕ್, ತಿಪ್ಪನಾಯ್ಕ್, ಜಯರಾಂ, ವೆಂಕಟೇಶ್ ನಾಯ್ಕ್, ಮಾಧವನಾಯ್ಕ್, ಸುಮೀತ್ ಕುಮಾರ್, ಚೆನ್ನಯ್ಯನಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯೆ ಕಾವ್ಯಬಾಯಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು. ಆಯಿತೋಳ ಜಗದೀಶ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

Share this article