27ರಿಂದ ಕುಕ್ಕೆ ವಾರ್ಷಿಕ ಜಾತ್ರೋತ್ಸವ: ರಥಗಳಿಗೆ ಗೂಟ ಪೂಜೆ

KannadaprabhaNewsNetwork | Published : Nov 16, 2024 12:31 AM

ಸಾರಾಂಶ

ಅರ್ಚಕರು ಪೂರ್ವಶಿಷ್ಟ ಸಂಪ್ರದಾಯದಂತೆ ರಥ ಕಟ್ಟಲಿರುವ ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರರಿಗೆ ರಥಕಟ್ಟಲು ಪ್ರಸಾದ ರೂಪದಲ್ಲಿ ವೀಳ್ಯವನ್ನು ನೀಡಿದರು.

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆ ನ.೨೭ರಿಂದ ಡಿ.೧೨ರ ವರೆಗೆ ನೆರವೇರಲಿದೆ. ಚಂಪಾಷಷ್ಠಿ ಮಹೋತ್ಸವದ ಸಂದರ್ಭ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಕಾರ್ತಿಕ ಹುಣ್ಣಿಮೆಯ ದಿನವಾದ ಶುಕ್ರವಾರ ಮುಂಜಾನೆ ಗೂಟ ಪೂಜಾ ಮುಹೂರ್ತ ನೆರವೇರಿತು. ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ದೇಗುಲದ ಪುರೋಹಿತ ಸುಬ್ರಹ್ಮಣ್ಯ ಕೊರ್ಣಾಯ ಪೂಜಾ ವಿಧಿ ವಿಧಾನ ನೆರವೇರಿಸಿದರು. ಬಳಿಕ ಅರ್ಚಕರು ಪೂರ್ವಶಿಷ್ಟ ಸಂಪ್ರದಾಯದಂತೆ ರಥ ಕಟ್ಟಲಿರುವ ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರರಿಗೆ ರಥಕಟ್ಟಲು ಪ್ರಸಾದ ರೂಪದಲ್ಲಿ ವೀಳ್ಯವನ್ನು ನೀಡಿದರು. ಇದುವರೆಗೆ ವಿಶೇಷ ರಥದ ಮನೆಯೊಳಗಿದ್ದ ಬ್ರಹ್ಮರಥ ಹಾಗೂ ಕೊಟ್ಟಿಗೆಯೊಳಗಿದ್ದ ಚಿಕ್ಕರಥ, ಚಂದ್ರಮಂಡಲ, ಹೂವಿನ ತೇರುಗಳು ಹೊರ ಬಂದಿದೆ. ಅಲ್ಲದೆ ಈತನಕ ದೇವಳದ ಉಗ್ರಾಣದಲ್ಲಿದ್ದ ರಥಗಳ ಶಿಖರಗಳನ್ನು ಈ ದಿನ ಹೊರಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಳದ ಕಚೇರಿ ಮುಖ್ಯಸ್ಥ ಪದ್ಮನಾಭ ಶೆಟ್ಟಿಗಾರ್, ರಾಜಲಕ್ಷ್ಮೀ ಪದ್ಮನಾಭ ಶೆಟ್ಟಿಗಾರ್, ಮಲೆಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ ಕೋಡಿಕಜೆ ಸೇರಿದಂತೆ ರಥ ಕಟ್ಟುವ ಮೂಲನಿವಾಸಿ ಮಲೆಕುಡಿಯ ಜನಾಂಗದವರು, ಭಕ್ತಾದಿಗಳು ಉಪಸ್ಥಿತರಿದ್ದರು.--------

ಕುಲ್ಕುಂದ ಜಾನುವಾರು ಜಾತ್ರೆ: ಬಸವೇಶ್ವರ ದೇವಳದಲ್ಲಿ ಗೋಪೂಜೆ

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆ ಪ್ರಯುಕ್ತ ಕಳೆದ ೧೨ ವರ್ಷಗಳಿಂದ ನಡೆದುಕೊಂಡು ಬಂದಂತೆ ಈ ಬಾರಿ ಕೂಡ ಕುಲ್ಕುಂದ ಶ್ರೀ ಬಸವೇಶ್ವರ ದೇವಳದ ವತಿಯಿಂದ ಗೋಪೂಜೆಯನ್ನು ನಡೆಸಲಾಯಿತು. ಕಾರ್ತಿಕ ಹುಣ್ಣಿಮೆಯ ದಿನವಾದ ಶುಕ್ರವಾರ ಕುಲ್ಕುಂದ ಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಗೋಪೂಜೆ ನಡೆಯಿತು.ಈ ಮೂಲಕ ಇತಿಹಾಸ ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆಯನ್ನು ಆಚರಿಸಲಾಯಿತು. ಕುಲ್ಕುಂದ ಪರಿಸರದ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋವುಗಳಿಗೆ ಪುರೋಹಿತರಾದ ಗಣೇಶ್ ದೀಕ್ಷಿತ್ ವಿವಿಧ ವೈದಿಕ ವಿಧಾನಗಳೊಂದಿಗೆ ಗೋಪೂಜೆ ನೆರವೇರಿಸಿದರು.

ಪ್ರತಿವರ್ಷ ಕಾರ್ತಿಕ ಹುಣ್ಣಿಮೆಯ ದಿನ ಕುಲ್ಕುಂದ ಮಜಲಿನಲ್ಲಿ ಸಂಪ್ರದಾಯ ಬದ್ಧವಾಗಿ ಜಾನುವಾರು ಜಾತ್ರೆ ನಡೆಯುತಿತ್ತು. ವಿವಾದದಿಂದ ಜಾನುವಾರು ಜಾತ್ರೆ ರದ್ದುಗೊಂಡು ಕುಲ್ಕುಂದ ಮಜಲಿನ ಬದಲು ಪಕ್ಕದ ಬಸವೇಶ್ವರ ದೇವಳದಲ್ಲಿ ಗೋಪೂಜೆ ನಡೆಯುತ್ತಿದೆ.ಈ ಸಂದರ್ಭದಲ್ಲಿ ಕುಲ್ಕುಂದ ಬಸವೇಶ್ವರ ದೇವಳದ ಅಧ್ಯಕ್ಷ ಗಿರಿಧರ ಸ್ಕಂದ, ಕಾರ್ಯದರ್ಶಿ ಚಂದ್ರಶೇಖರ ಬಸವವನ ಮೂಲೆ, ಶಿವರಾಮ ಪಳ್ಳಿಗದ್ದೆ, ಉಪಾಧ್ಯಕ್ಷ ರವೀಂದ್ರ ರುದ್ರಪಾದ, ಗುಡ್ಡಪ್ಪ ಬೀಡಿನ ಗದ್ದೆ, ರಾಜೇಶ್ ಕುಲ್ಕುಂದ, ಶೋಭಾ ಗಿರಿಧರ್‌ ಸೇರಿದಂತೆ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

Share this article