ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಬೀದಿ ನಾಯಿಗಳಿಗೆ ಆಹಾರ ನೀಡುವ ಬಿಬಿಎಂಪಿಯ ಹಿಂದಿ ಪ್ರೇರಿತ ‘ಕುಕುರ್ ತಿಹಾರ್’ ಕಾರ್ಯಕ್ರಮವು ಪ್ರಾಣಿಗಳ ಮೇಲಿನ ಪ್ರೀತಿ ತೋರಿಸುವ ನೆಪದಲ್ಲಿ ನಾಡಿನ ಸಂಸ್ಕೃತಿ ಮೇಲೆ ನಡೆಸಲಾದ ವ್ಯವಸ್ಥಿತ ದಾಳಿ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಬೆಂಗಳೂರು ಈಗಾಗಲೇ ಪರಭಾಷಿಗರ ಸ್ವರ್ಗವಾಗಿದ್ದು, ಉತ್ತರ ಭಾರತದ ಬಹುತೇಕ ಎಲ್ಲ ರಾಜ್ಯದ ಜನರು ಬೆಂಗಳೂರಿನ ನೆಲೆಸಿದ್ದಾರೆ. ನಗರದಲ್ಲಿ ವಾಸಿಸುತ್ತಿರುವ ಉತ್ತರ ಭಾರತೀಯರನ್ನು ಮೆಚ್ಚಿಸಲು ಮತ್ತು ಈಗಾಗಲೇ ದೇಶದ ವಿವಿಧ ಕಡೆ ವ್ಯವಸ್ಥಿತವಾಗಿ ಆಚರಿಸುತ್ತಿರುವ ‘ಕುಕುರ್ ತಿಹಾರ್’ ಹಬ್ಬವನ್ನು ಬೆಂಗಳೂರಿನಲ್ಲಿ ಆಚರಣೆಗೆ ತರಬೇಕೆಂಬ ಉದ್ದೇಶದಿಂದ ಕೆಲವು ಸಂಘ ಸಂಸ್ಥೆಗಳು ಬಿಬಿಎಂಪಿಯ ಸಹಯೋಗ ಬಳಕೆ ಮಾಡಿಕೊಂಡು ಈ ಆಚರಣೆಗೆ ತರುವ ಹುನ್ನಾರ ಮಾಡಿವೆ.
ಇದಕ್ಕೆ ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಹೊರ ರಾಜ್ಯದ ಮೂಲದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಧಾರ್ಮಿಕ ಆಚರಣೆ ಎಂದರೆ ವಿರೋಧ ವ್ಯಕ್ತಪಡಿಸಬಹುದು ಎಂಬ ಕಾರಣಕ್ಕೆ ಬೀದಿ ನಾಯಿಗಳಿಗೆ ಆಹಾರ ನೀಡುವ ಮಾನವೀಯತೆಯ ಕಾರ್ಯಕ್ರಮ ಎಂದು ಹೇಳಲಾಗಿದೆ ಎಂಬ ಅಪವಾದ ಕೇಳಿ ಬಂದಿವೆ.
ಭಾಷೆಯ ಜತೆಗೆ ಸಂಸ್ಕೃತಿಯ ಹೇರಿಕೆ:
ಬಿಬಿಎಂಪಿಯು ಕುಕುರ್ ತಿಹಾರ್ ಎಂಬ ಉತ್ತರ ಭಾರತೀಯ ಭಾಷೆಯನ್ನು ಮಾತ್ರ ಬಳಕೆ ಮಾಡಿಕೊಂಡಿಲ್ಲ. ಜತೆಗೆ, ಉತ್ತರ ಭಾರತದ ವಿವಿಧ ರಾಜ್ಯದಲ್ಲಿ ದೀಪಾವಳಿ ಸಂದರ್ಭದಲ್ಲಿ ಆಚರಣೆ ನಡೆಸುವ ಒಂದು ಸಂಸ್ಕೃತಿಯನ್ನು ನಾಡಿನ ಜನರ ಮೇಲೆ ವ್ಯವಸ್ಥಿತವಾಗಿ ಹೇರುವ ಕೆಲಸ ಮಾಡಿರುವುದು ಕನ್ನಡಿಗರ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ.
ವಿದೇಶಗಳಲ್ಲಿಯೂ ಕುಕುರ್ ತಿಹಾರ್:
ಈ ಕುಕುರ್ ತಿಹಾರ್ ಕೇವಲ ನೇಪಾಳ ಮತ್ತು ಅಸ್ಸಾಂ, ಸಿಕ್ಕಿಂ, ದೆಹಲಿ, ರಾಜಸ್ಥಾನ, ಗುಜರಾತ್ ಸೇರಿದಂತೆ ಭಾರತದ ವಿವಿಧ ರಾಜ್ಯಗಳಿಗೆ ಸೀಮಿತವಾಗಿಲ್ಲ. ಕುಕುರ್ ತಿಹಾರ್ ಕಾರ್ಯಕ್ರಮವನ್ನು ಈಗಾಗಲೇ ಹಲವು ಸಂಘ ಸಂಸ್ಥೆಗಳು ಮೆಕ್ಸಿಕೋ, ಲಂಡನ್, ಹ್ಯೂಮನ್ ಸೇರಿದಂತೆ ವಿದೇಶದ ವಿವಿಧ ಕಡೆ ಆಯೋಜನೆ ಮಾಡಿಕೊಂಡು ಬರುತ್ತಿವೆ.
ಏನಿದು ಕುಕುರ್ ತಿಹಾರ್?
ಕುಕುರ್ ತಿಹಾರ್ ಮೂಲತಃ, ನೇಪಾಳದಲ್ಲಿ ದೀಪಾವಳಿಯ ನರಕ ಚತುರ್ಥಿ ಮರುದಿನ ಆಚರಣೆ ಮಾಡುವ ಹಬ್ಬವಾಗಿದೆ. ಕುಕುರ್ ಎಂದರೆ ನಾಯಿ, ತಿಹಾರ್ ಎಂದರೆ ಹಬ್ಬವಾಗಿದೆ. ಈ ಹಬ್ಬದಲ್ಲಿ ನಾಯಿಗಳಿಗೆ ತಿಲಕ ಇಟ್ಟು, ಕೊರಳಿಗೆ ಹೂವಿನ ಹಾರ ಹಾಕಿ ಪೂಜೆ ಮಾಡಿ ನಾಯಿಗೆ ಪ್ರೀಯವಾದ ಮೊಟ್ಟೆ, ಹಾಲು, ಸೇರಿದಂತೆ ವಿವಿಧ ಆಹಾರ ನೀಡಿ ಪೂಜಿಸಲಾಗುತ್ತದೆ.
ಈ ಪೂಜೆ ಕಾರಣದ ಹಿಂದೆ ದಂತಕಥೆ ಇದ್ದು, ನಾಯಿಗಳು ಯುಮ ಧರ್ಮರಾಯನ ಸಂದೇಶವಾಹಕರು ಎಂದು ಭಾವಿಸಲಾಗಿದೆ. ಯಮ ಧರ್ಮರಾಯನ ನರಕದ ದ್ವಾರಪಾಲಕ ಕೆಲಸವನ್ನು ಎರಡು ನಾಯಿಗಳು ಮಾಡುತ್ತವೆ. ಕುಕುರ್ ತಿಹಾರ್ ಹಬ್ಬದ ವೇಳೆ ನಾಯಿಗಳನ್ನು ಪೂಜಿಸಿ, ಆಹಾರ ನೀಡುವುದರಿಂದ ಮನುಷ್ಯ ಸಾವಿನ ನಂತರ ನರಕಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿ ನೀಡುವ ಚಿತ್ರಹಿಂಸೆಯಿಂದ ಪೂಜಿಸಲಾದ ನಾಯಿಗಳು ತಮ್ಮನ್ನು ಕಾಪಾಡುತ್ತವೆ ಎಂಬ ನಂಬಿಕೆಯಿಂದ ಕುಕುರ್ ತಿಹಾರ್ ಆಚರಣೆ ಮಾಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಅಧಿಕಾರಿಗಳ ತಲೆ ಪ್ರತಿಷ್ಠೆಯಿಂದ ಹಿಂದಿ ಹೇರಿಕೆ ಹೆಚ್ಚಾಗಿದೆ. ಉತ್ತರ ಭಾರತದ ಜನರ ವಲಸೆಯ ಪ್ರವಾಹ ನಾಡಿನಲ್ಲಿ ಆಗುತ್ತಿದೆ. ಬಿಬಿಎಂಪಿಯು ರೂಪಿಸಿ ಕುಕುರ್ ತಿಹಾರ್ ಕಾರ್ಯಕ್ರಮಕ್ಕೆ ಬಳಕೆ ಮಾಡದ ಪರಿಭಾಷೆಯು ಹಿಂದಿ ಹೇರಿಕೆಯ ಹಿಂದಿರುವ ಹುನ್ನಾರವೇ ಹೊರತು ಬೇರೇನಿಲ್ಲ.
-ಡಾ। ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಚಿಂತಕ.
ಉತ್ತರ ಭಾರತದ ಕುಕುರ್ ತಿಹಾರ್ ಭಾಷೆ ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಅಲ್ಲಿನ ಸಂಸ್ಕೃತಿ ಪ್ರಚಾರ ಮಾಡುವುದಕ್ಕೆ ಹೊರಟಿರುವ ಬಿಬಿಎಂಪಿಯ ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಕುಕುರ್ ತಿಹಾರ್ ಎಂಬ ಉತ್ತರ ಭಾರತ ಹೆಸರನ್ನು ಬಳಕೆ ಮಾಡಿಕೊಂಡು ಬೀದಿ ನಾಯಿಗಳಿಗೆ ಆಹಾರ ನೀಡುವುದರಿಂದ ನಾಡಿನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸಂಸ್ಕೃತಿಯೇ ಇಲ್ಲ ಎಂಬ ತಪ್ಪು ಸಂದೇಶ ನೀಡಿದಂತೆ ಆಗಲಿದೆ.
-ಎಲ್.ಹನುಮಂತಯ್ಯ, ಮಾಜಿ ಸಂಸದ
ಬಿಬಿಎಂಪಿಯು ನಾಡ ಸಂಸ್ಕೃತಿ ಮತ್ತು ಕನ್ನಡ ಭಾಷೆ ವಿರೋಧ ಕಾರ್ಯಕ್ರಮ ಆಯೋಜಿಸಿ ಕನ್ನಡ ವಿರೋಧಿ ಧೋರಣೆ ತೋರಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಆಡಳಿತರೂಢ ಸರ್ಕಾರ ವಹಿಸಿಕೊಳ್ಳಬೇಕಿದೆ.
-ಟಿ.ಎಸ್.ನಾಗಾಭರಣ, ರಂಗಕರ್ಮಿ.