ಸೊರಬ: ತಾಲೂಕನ್ನು ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡಿ ತೋರಿಸಿರುವ ಕುಮಾರ ಬಂಗಾರಪ್ಪ ಬೆಂಗಳೂರು ನಿರ್ಮಾತೃ ನಾಡಪ್ರಭು, ಕೆಂಪೇಗೌಡ ರೀತಿಯಲ್ಲಿ ಸೊರಬ ತಾಲೂಕನ್ನು ಅಭಿವೃದ್ಧಿಪಡಿಸಿದ ಏಕೈಕ ರಾಜಕಾರಣಿಯಾಗಿದ್ದಾರೆ. ಹಾಗಾಗಿ ಅವರು ಸೊರಬ ತಾಲೂಕಿನ ಕೆಂಪೇಗೌಡ ಆಗಿದ್ದಾರೆ ಎಂದು ಪುರಸಭಾ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ.ಡಿ. ಉಮೇಶ ಹೇಳಿದರು.ಭಾನುವಾರ ಪಟ್ಟಣದ ಬಸ್‌ಸ್ಟ್ಯಾಂಡ್ ಆವರಣದಲ್ಲಿರುವ ಬಂಗಾರ ದೇಗುಲದ ಎದುರು ಮಾಜಿ ಸಚಿವ ಕುಮಾರ ಬಂಗಾರಪ್ಪ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ೬೨ನೇ ಹುಟ್ಟುಹಬ್ಬ ಆಚರಣೆಯ ಸಂಭ್ರಮದಲ್ಲಿ ಮಾತನಾಡಿದರು.ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಮಂಜೂರಾದ ೩ ನಾರಾಯಣಗುರು ವಸತಿ ಶಾಲೆಯಲ್ಲಿ ಒಂದನ್ನು ಸೊರಬ ಪಟ್ಟಣಕ್ಕೆ ಮಂಜೂರು ಮಾಡಿಸಿಕೊಂಡು ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರು.ಗಳನ್ನು ತೆಗೆದಿಟ್ಟಿರುವುದು ಅವರ ಹೆಗ್ಗಳಿಕೆಯಾಗಿದೆ. ಜಡೆ, ಆನವಟ್ಟಿ ಹೋಬಳಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೂಡಿ, ಮೂಗೂರು ಏತ ನೀರಾವರಿಗೆ ಚಾಲನೆ ನೀಡಿದ್ದಾರೆ. ಅಲ್ಲದೇ ಅವರ ಅವಧಿಯಲ್ಲಿನ ಬಿಡುಗಡೆಯಾದ ೫೦೦ ಕೋಟಿ ರು. ಅನುದಾನದ ಹಣ ಇನ್ನೂ ಬಾಕಿ ಇದ್ದು, ಸಚಿವರಾಗಿರುವ ಕ್ಷೇತ್ರದ ಶಾಸಕರು ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.ಜಿಲ್ಲಾ ಬಿಜೆಪಿ ಹಿರಿಯ ಮುಖಂಡ ಕೆ. ಪ್ರಭಾಕರ ರಾಯ್ಕರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ಗುರುಕುಮಾರ ಪಾಟೀಲ್, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಕೆ.ಜಿ. ಬಸವರಾಜ ಕೊಡಕಣಿ, ಕೃಷ್ಣಮೂರ್ತಿ, ಮಡಿವಾಳ ಸಮಾಜದ ಅಧ್ಯಕ್ಷ ಗುಡ್ಡಪ್ಪ, ಕೃಷ್ಣಮೂರ್ತಿ ಗುಡಿಗಾರ್, ಗುರುಮೂರ್ತಿ ಹಿರೇಶಕುನ, ಅಶೋಕ್ ಶೇಟ್, ಮಹೇಶ್ ಸಂಪಗೋಡು ಇತರರಿದ್ದರು.
.