ಕುಮಾರಸ್ವಾಮಿ ಅನುಕಂಪ ಗಿಟ್ಟಿಸುವಲ್ಲಿ ನಂಬರ್ ಒನ್: ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : Feb 2, 2025 11:46 PM

ಸಾರಾಂಶ

ಬಜೆಟ್‌ನಲ್ಲಿ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಏನಾದರೂ ಒಂದು ಘೋಷಣೆ ಮಾಡಬೇಕಿತ್ತು. 25 ಸಾವಿರ ಕೋಟಿ ರು. ನೀರಾವರಿಗೆ ಕೊಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಬೇಕಿತ್ತು. ಆಗ ನಾನೇ ಸಚಿವರನ್ನು ಅಭಿನಂದಿಸುತ್ತಿದ್ದೆ. ನಮ್ಮ ರಾಜ್ಯದ ನೂರಾರು ವರ್ಷಗಳ ನಂತರ ಬರಗಾಲ ಎದುರಿಸಿದೆ. ಕೇಂದ್ರ ಸರ್ಕಾರ ಮಾತ್ರ ದುಡ್ಡು ಕೊಟ್ಟಿಲ್ಲ. ಪ್ರಧಾನಿ ಮೋದಿ ಬಳಿ ಹೋಗಲು ಅವರಿಗೆ ಸಾಧ್ಯಾನ. ಸಾಧ್ಯವಾದರೆ ಅವರ ಜೊತೆ ಕುಮಾರಸ್ವಾಮಿ ಮಾತನಾಡಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತಿನಲ್ಲಿ ರುಸ್ತುಂಮರು. ಅನುಕಂಪ ಗಿಟ್ಟಿಸುವಲ್ಲಿ ನಂಬರ್ ಒನ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸಿಂಪಲ್ ಮನುಷ್ಯ ಅನ್ನೋದನ್ನು ಎಕ್ಸ್ಪೋಸ್ ಮಾಡಿಕೊಳ್ಳುತ್ತಾರೆ. ನೀವು ಪ್ಯಾಂಟ್, ಪಂಚೆ, ಸೂಟ್ ಹಾಕೊಂಡ್ ಬರುವುದರಿಂದ ನಮಗೆ ಹೊಟ್ಟೆ ತುಂಬಲ್ಲ. ರಾಜ್ಯಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಕೊಡಿಸಬೇಕಿತ್ತು ಎಂದರು.ಕರ್ನಾಟಕಕ್ಕೆ ಕುಮಾರಸ್ವಾಮಿ ಬಂದರೆ ಹೊಟ್ಟೆ ಕಿಚ್ಚು ಹೆಚ್ಡಿಕೆ ಹೇಳಿಕೆ ಕುರಿತು ಮಾತನಾಡಿದ ಸಚಿವರು, ಅಯ್ಯೋ ಪಾಪಾ ಇವಾಗ ಏನು ತಮಿಳುನಾಡಿನಲ್ಲಿದ್ದಾರಾ?, ಇಲ್ಲೆ ಓಡಾಡುತ್ತಿದ್ದಾರೆ. ವಾರಕ್ಕೆ ನಾಲ್ಕು ದಿನ ಇಲ್ಲೆ ಇರಲಿ ನಮಗೆ ಬೇಜಾರಿಲ್ಲ. ಅವರು ಎಲ್ಲಿದ್ದಾರೆ ಅನ್ನೋದು ಮುಖ್ಯ ಅಲ್ಲ. ಕರ್ನಾಟಕಕ್ಕೆ ಏನು ಮಾಡುತ್ತಾರೆ ಎಂದು ಅನ್ನೋದು ಮುಖ್ಯ ಎಂದು ವ್ಯಂಗ್ಯವಾಡಿದರು.

ಬಜೆಟ್‌ನಲ್ಲಿ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಏನಾದರೂ ಒಂದು ಘೋಷಣೆ ಮಾಡಬೇಕಿತ್ತು. 25 ಸಾವಿರ ಕೋಟಿ ರು. ನೀರಾವರಿಗೆ ಕೊಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಬೇಕಿತ್ತು. ಆಗ ನಾನೇ ಸಚಿವರನ್ನು ಅಭಿನಂದಿಸುತ್ತಿದ್ದೆ ಎಂದರು.

ನಮ್ಮ ರಾಜ್ಯದ ನೂರಾರು ವರ್ಷಗಳ ನಂತರ ಬರಗಾಲ ಎದುರಿಸಿದೆ. ಕೇಂದ್ರ ಸರ್ಕಾರ ಮಾತ್ರ ದುಡ್ಡು ಕೊಟ್ಟಿಲ್ಲ. ಪ್ರಧಾನಿ ಮೋದಿ ಬಳಿ ಹೋಗಲು ಅವರಿಗೆ ಸಾಧ್ಯಾನ. ಸಾಧ್ಯವಾದರೆ ಅವರ ಜೊತೆ ಕುಮಾರಸ್ವಾಮಿ ಮಾತನಾಡಲಿ ಎಂದು ಸಲಹೆ ನೀಡಿದರು.

ಕೇಂದ್ರ ಬಜೆಟ್ ರಾಷ್ಟ್ರಕ್ಕೆ ಅನುಕೂಲವಾಗುವ ಬಜೆಟ್ ಅಲ್ಲ. ರಾಜ್ಯದ ಬಜೆಟ್ ಗಿಂತ ಒಂದು ಹೆಜ್ಜೆ ಕೆಳೆಗಿಳಿದಿದ್ದಾರೆ. ಕೇಂದ್ರ ಸರ್ಕಾರ ಪ್ರಚಾರ ಪ್ರೀಯರಾಗುತ್ತಿದ್ದಾರೆ ಅಷ್ಟೆ. ಮೂಗಿಗೆ ತುಪ್ಪ ಸವರಿಸುವ ಹಾಗೆ ಮಾಡಿದ್ದಾರೆ. ಬಿಹಾರಿಗೆ ಕೊಟ್ಟ ಹಾಗೇ ಕರ್ನಾಟಕಕ್ಕೆ ಏಕೆ ಅನುದಾನ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಕರ್ನಾಟಕದ 19 ಜನ ಲೋಕಸಭಾ ಸದಸ್ಯರಿದ್ದಾರೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಲು ಮೋದಿ ಅವರಿಗೆ ಕರ್ನಾಟಕ ದೊಡ್ಡ ಶಕ್ತಿ ತುಂಬಿದೆ. ಆದರೆ, 7ನೇ ಹಣಕಾಸು ಯೋಜನೆ ವ್ಯತ್ಯಾಸದ ಹಣ ಕೊಟ್ಟಿಲ್ಲ. ತುಂಗಭದ್ರಾ ಅಣೆಕಟ್ಟೆಗೂ ಅನುದಾನವಿಲ್ಲ. ನಾವು ಯಾವ ರೀತಿ ಈ ಬಜೆಟ್ ಅಭಿನಂದಿಸೋದು ಎಂದು ಪ್ರಶ್ನೆ ಮಾಡಿದರು.

ಕರ್ನಾಟಕಕ್ಕೆ ಯಾವುದೇ ವಿಶೇಷ ಕಾರ್ಯಕ್ರಮ ಕೊಟ್ಟಿಲ್ಲ. ತಮಿಳುನಾಡು, ಕೇರಳ ರಾಜ್ಯಗಳಿಗೆ ತೆಗೆದುಕೊಂಡು ಹೋಗಿದ್ದಾರೆ.

ನಮ್ಮ ರಾಜ್ಯದ ಜನ ಏನು ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದೆ ಅಂತ ಯಾವುದೇ ಕೊಡುಗೆ ಕೊಟ್ಟಿಲ್ಲ. ಇದು ರಾಷ್ಟ್ರಕ್ಕೆ ಅನುಕೂಲವಾಗುವ ಬಜೆಟ್ ಅಲ್ಲ ಎಂದು ದೂರಿದರು.

ಆರ್.ಅಶೋಕ್ ಅವರ ಪಕ್ಷದಲ್ಲಿನ ಗೊಂದಲ ಸರಿಪಡಿಸಿಕೊಳ್ಳಲಿ

ಮಂಡ್ಯ:

ವಿಪಕ್ಷ ನಾಯಕ ಆರ್.ಅಶೋಕ್ ಮೊದಲು ಅವರ ಪಕ್ಷದಲ್ಲಿರುವ ಗೊಂದಲವನ್ನು ಸರಿಪಡಿಸಿಕೊಳ್ಳಲಿ ಎಂದು ಸಚಿವ ಚಲುವರಾಯಸ್ವಾಮಿ ಸಲಹೆ ನೀಡಿದರು.

ನಗರದಲ್ಲಿ ಸಿಎಂ ಬದಲಾವಣೆ ಕುರಿತು ಆರ್.ಅಶೋಕ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅರ್.ಅಶೋಕ್ ಯಾವಾಗ ಎಐಸಿಸಿ ಇನ್ ಚಾರ್ಜ್ ತಗೆದುಕೊಂಡರು. ಕಾಂಗ್ರೆಸ್ ಪಕ್ಷಗದಲ್ಲಿ ಎಲ್ಲರೂ ಗೌರವವಾಗಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲೆ ತೊಡೆ ತಟ್ಟುತ್ತಿದ್ದಾರೆ. ಮೊದಲು ಅವರ ಪಾರ್ಟಿಯಲ್ಲಿ ಉಂಟಾಗಿರುವ ಒಡಕನ್ನು ಸರಿಪಡಿಸಿಕೊಂಡು ಮಾತನಾಡಲಿ ಎಂದರು.

ಸಿಎಂ ರಾಜಕೀಯ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್ ಯಾಕೆ ರಾಜೀನಾಮೆ ಕೊಟ್ಟಿದ್ದಾರೆ ಗೊತ್ತಿಲ್ಲ. ಬೇರೆ ಅವಕಾಶಕ್ಕಾಗಿ ಮಾಡಿದ್ದಾರೋ ತಿಳಿಯುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ಸದ್ಯಕ್ಕೆ ಮಂಡಿ ನೋವಿನ ಚಿಕಿತ್ಸೆ ನಂತರ ಸಿಎಂ ವಿಶ್ರಾಂತಿಯಲ್ಲಿದ್ದಾರೆ ಎಂದರು.

ಮನ್ಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ರಿಂದ 10 ಸ್ಥಾನ ಗೆಲ್ಲಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

Share this article