ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೇಮಾವತಿ ಪ್ರತಿಮೆ ಬಳಿ ಕಾಡಾನೆಯಿಂದ ಶಾಶ್ವತ ಪರಿಹಾರಕ್ಕಾಗಿ ನಡೆಸುತ್ತಿರುವ ಐದನೇ ದಿನದ ಹೋರಾಟ ಸ್ಥಳಕ್ಕೆ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಆಗಮಿಸಿ ಕೆಲ ಸಮಯ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಫೆಬ್ರವರಿ ಒಳಗೆ ಆನೆ ಕಾರಿಡರ್ ಮಾಡುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೇ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಐದನೇ ದಿವಸ ಹೋರಾಟ ಕೊನೆಗೊಳಿಸಿದ ವೇಳೆ ಜಯ ಕರ್ನಾಟಕ ಸಂಘಟನೆ ಎಚ್ಚರಿಕೆ ನೀಡಿದ್ದಾರೆ.ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಜಯಕರ್ನಾಟಕ ಹೋರಾಟದ ಕೊನೆಯ ದಿವಸ ಸ್ಥಳಕ್ಕೆ ಆಗಮಿಸಿ ತಾವು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಉದ್ದೇಶಿಸಿ ಮಾತನಾಡಿ, ಕಾಡಾನೆ ವಿಚಾರವಾಗಿ ಸರ್ಕಾರಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಸಕಲೇಶಪುರ ಭಾಗದಲ್ಲಿ ಸಲ್ಪ ಆನೆಗಳ ಹಾವಳಿ ಕಡಿಮೆ ಆಗಿದ್ದು, ಆಲೂರು ಭಾಗದಲ್ಲೂ ಆನೆಗಳು ಇದ್ದು, ಬೇಲೂರು ಕಡೆಗಳಲ್ಲಿ ಅತೀ ಹೆಚ್ಚು ಇದೆ. ಇದುವರೆಗೂ ರೈತರ ಬೆಳೆಗಳು ಸಾಕಷ್ಟು ನಷ್ಟವಾಗಿದೆ. ಕಳೆದ 10 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ವೇಳೆ ಎ. ಮಂಜು ಸಚಿವರಾಗಿದ್ದಾಗ ಬೇಲೂರು ತಾಲೂಕಿನಲ್ಲಿ ಒಂದು ಕಾಡಾನೆ ಕಾರಿಡರ್ ಮಾಡಿ ಒಂದು ಶಾಶ್ವತ ಪರಿಹಾರ ಮಾಡಬೇಕು. ತಾತ್ಕಲಿಕ ಪರಿಹಾರದಿಂದ ಯಾವ ಪ್ರಯೋಜನ ಆಗುವುದಿಲ್ಲ ಎಂದು ಮನಗಂಡು 17 ಸಾವಿರ ಎಕರೆ ಅರಣ್ಯ ಭೂಮಿ ಮತ್ತು ರೆವಿನ್ಯೂ ಭೂಮಿಯನ್ನು ಆನೆಕಾರಿಡರ್ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು ಎಂದರು. ಇನ್ನು ಕಾರಿಡರ್‌ಗೆ ಪಡೆದಿರುವ ರೈತರಿಗೆ ಭೂ ಪರಿಹಾರ ಕೊಡಬೇಕೆಂದು ಎಷ್ಟೆ ಒತ್ತಡ ಹಾಕಿದರೂ ಇದುವರೆಗೂ ಜಾರಿಗೆ ಬಂದಿರುವುದಿಲ್ಲ. ತಾತ್ಕಾಲಿಕ ಕ್ರಮ ಮಾತ್ರ ಆಗುತ್ತಿದ್ದು, ಆದರೇ ಮೂಲ ಉದ್ದೇಶವನ್ನು ಮೂಲ ಕಾರಣವನ್ನೆ ಇಲಾಖೆಗೆ ಗೊತ್ತಾಗುತ್ತಿಲ್ಲ ಎಂದು ದೂರಿದರು.ಯಾವ ಕಾರಣಕ್ಕಾಗಿ ಕಾಡಾನೆಗಳು ನಾಡಿಗೆ ಬರುತ್ತಿದೆ? ಕಾಡಿನಲ್ಲಿ ಆಹಾರವಿಲ್ಲ ಎಂದು ನಾಡಿನಲ್ಲಿ ಕಾಡು ಇರುವುದರಿಂದ ಬರುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಸೌತ್ ಆಫ್ರಿಕಾದಲ್ಲಿ ಇರುವ ನ್ಯಾಷನಲ್ ಪಾರ್ಕ್ ಇದ್ದು, ಆನೆಗಳಿಗಾಗಿಯೇ ಬೇರೆ ಪಾರ್ಕ್ ಮಾಡಲಾಗಿದೆ. ಅದರಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗಬೇಕು. ನಾಲ್ಕು ತಾಲೂಕುಗಳಲ್ಲಿ ಆಗಿರುವ ಬೆಳೆ ಹಾನಿ ಬಗ್ಗೆ ಗಮನಹರಿಸಬೇಕು. ಆನೆ ದಾಳಿಯಾದ ಕುಟುಂಬಕ್ಕೆ ಒಂದು ಶಾಶ್ವತ ಕೆಲಸ ಕೊಟ್ಟು, ಬೆಳೆ ಪರಿಹಾರಕ್ಕೆ ನಷ್ಟವನ್ನು ವೈಜ್ಞಾನಿಕವಾಗಿ ತುಂಬಿ ಕೊಡಬೇಕು ಎಂದು ಒತ್ತಾಯಿಸಿದರು. ಕಾಡಾನೆ ವಿಚಾರದಲ್ಲಿ ಹೋರಾಟ ಮಾಡುತ್ತಿರುವ ಜಯಕರ್ನಾಟಕಕ್ಕೆ ನಮ್ಮ ಬೆಂಬಲ ಇದ್ದೆ ಇರುತ್ತದೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ರೈತ ಸಂಘದ ಮುಖಂಡ ಬಳ್ಳೂರು ಸ್ವಾಮಿಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಯಕರ್ನಾಟಕ ಬೇಲೂರು ತಾಲೂಕು ಅಧ್ಯಕ್ಷ ಎಸ್.ಎಂ. ರಾಜು, ಆಲೂರು ತಾಲೂಕು ಅಧ್ಯಕ್ಷ ಸಂದೇಶ್, ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.------ಫೊಟೋ:
ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.